
ಪುಣೆ, ಸೆಪ್ಟೆಂಬರ್ 04: ಮಹಾರಾಷ್ಟ್ರ ಮಾಡಿ ಡಿಸಿಎಂ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಕುರಿತು ಎಫ್‌ಐಆರ್ ದಾಖಲಾಗಿಲ್ಲ ಎಂದು ಸಂಸದೆ ಸುಪ್ರಿಯಾ ಸುಳೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಅಜಿತ್ ಪವಾರ್ ಪತ್ನಿ ಹಾಗೂ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ.
ಅಜಿತ್ ಅವರ ಅಗಲಿಕೆಯ ನೋವು ಅವರ ತಾಯಿ, ಮಕ್ಕಳು ಮತ್ತು ನನಗಿಂತ ಬೇರೆ ಯಾರಿಗೂ ಹೆಚ್ಚು ಕಾಡಲು ಸಾಧ್ಯವಿಲ್ಲ ಎಂದಿರುವ ಅವರು, ಈ ಸೂಕ್ಷ್ಮ ಸಾವಿನ ವಿಚಾರದಲ್ಲಿ ಯಾರೂ ಕೀಳು ರಾಜಕೀಯ ಮಾಡಬಾರದು ಮತ್ತು ತನಿಖಾ ಸಂಸ್ಥೆಗಳಿಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುನೇತ್ರಾ ಪವಾರ್, ಈ ದುರಂತದ ನಂತರ ಕುಟುಂಬವು ನಿರ್ದಿಷ್ಟ ತೀರ್ಮಾನವನ್ನು ನಿರೀಕ್ಷಿಸುತ್ತಿದೆ ಮತ್ತು ಆ ನಿಟ್ಟಿನಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಧಾನಸಭೆಯಲ್ಲಿ ನೀಡಿದ ಮಾತಿನಂತೆ ತನಿಖೆ ನಡೆಸಲು ಪ್ರಯತ್ನಿಸುತ್ತಿದ್ದು, ತನಿಖಾ ಸಂಸ್ಥೆಗಳಿಗೆ ತಮ್ಮ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.
ಮತ್ತಷ್ಟು ಓದಿ:
ಸಂವಿಧಾನ ಮತ್ತು ದೇಶದ ಕಾನೂನಿನ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎಂದು ಸ್ಪಷ್ಟಪಡಿಸಿದ ಸುನೇತ್ರಾ, ರಾಜಕೀಯ ಲಾಭಕ್ಕಾಗಿ ಹೇಳಿಕೆಗಳನ್ನು ನೀಡುವವರು ಅಜಿತ್ ದಾದಾ ಅವರ ವೃದ್ಧ ತಾಯಿ ಹಾಗೂ ಮಕ್ಕಳ ದುಃಖವನ್ನು ಗಮನದಲ್ಲಿಟ್ಟುಕೊಂಡು ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ತೀವ್ರ ವಾಗ್ದಾಳಿ ನಡೆಸಿದ್ದ ಸಂಸದೆ ಸುಪ್ರಿಯಾ ಸುಳೆ, ಅಜಿತ್ ಪವಾರ್ ಸಾವನ್ನಪ್ಪಿ ತಿಂಗಳುಗಳೇ ಕಳೆದರೂ ಪೊಲೀಸರು ಈವರೆಗೂ ಎಫ್‌ಐಆರ್ ದಾಖಲಿಸದಿರುವುದು ಆಶ್ಚರ್ಯ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಮಹಾಯುತಿ ಸರ್ಕಾರದಲ್ಲಿರುವ ಅಜಿತ್ ಪವಾರ್ ಬಣದ 40 ಶಾಸಕರು ಮತ್ತು ಸಚಿವರು ತಮ್ಮ ನಾಯಕನ ಸಾವಿಗೆ ನ್ಯಾಯ ಕೇಳುವ ಬದಲು ಅಧಿಕಾರವನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಕಟುವಾಗಿ ಆರೋಪಿಸಿದ್ದರು. ಈ ಆರೋಪ-ಪ್ರತ್ಯಾರೋಪಗಳು ಪವಾರ್ ಕುಟುಂಬ ಹಾಗೂ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಮತ್ತೆ ಭಾರಿ ಸಂಚಲನ ಸೃಷ್ಟಿಸಿವೆ ಎಂದಿದ್ದರು.
ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ನಾಯಕ ಅಮಿತ್ ಠಾಕ್ರೆ ವಿರುದ್ಧ ಕ್ಷಿಪ್ರವಾಗಿ ಎಫ್‌ಐಆರ್ ದಾಖಲಿಸುವ ಪೊಲೀಸರು, ಮಾಜಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿ ತಿಂಗಳುಗಳೇ ಕಳೆದರೂ ಇನ್ನೂ ಎಫ್‌ಐಆರ್ ದಾಖಲಿಸಿಲ್ಲವೇಕೆ ಎಂದು ಸುಳೆ ಪ್ರಶ್ನಿಸಿದ್ದರು.
ಬಾರಾಮತಿ ವಿಮಾನ ಅಪಘಾತ: ಜನವರಿ 28 ರಂದು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಲಿಯರ್‌ಜೆಟ್ 45 ಎಕ್ಸ್‌ಆರ್ (Learjet 45 XR) ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಕಳಪೆ ಗೋಚರತೆಯಿಂದ ಮರಗಳಿಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿತ್ತು. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದರು.
ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಸಹ ಈ ಪ್ರಕರಣದಲ್ಲಿ ವಿಎಸ್ಆರ್ ಏವಿಯೇಷನ್ ಪಾತ್ರವನ್ನು ತನಿಖೆ ಮಾಡಬೇಕು ಹಾಗೂ ತನಿಖೆಯನ್ನು ತಕ್ಷಣ ಸಿಬಿಐಗೆ ಒಪ್ಪಿಸಬೇಕು ಎಂದು ಸತತವಾಗಿ ಒತ್ತಾಯಿಸುತ್ತಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ವರದಿ ಬರುವವರೆಗೆ ಕಾಯಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ