ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಸಿಕ್ಕಿಲ್ಲ ಪೂರ್ಣ ಪ್ರಮಾಣದ ಒಪ್ಪಿಗೆ; ಇನ್ನೂ ಬಾಕಿ ಇದೆ 3ನೇ ಹಂತದ ಪ್ರಯೋಗ! ಮುಂದೇನು?

Bharat Biotech Covaxin permission: ಈಗ ಬಂದಿರುವ ಮಾಹಿತಿ ಪ್ರಕಾರ, ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯು ಜನರ ಬಳಕೆಗೆ ಪೂರ್ಣ ಪ್ರಮಾಣದ ಒಪ್ಪಿಗೆ ಪಡೆಯಲು ಇನ್ನೂ ಒಂದು ವರ್ಷ ಕಾಯಬೇಕು. ಅಲ್ಲಿಯವರೆಗೂ ತುರ್ತು ಬಳಕೆಗೆ ನೀಡಿರುವ ಒಪ್ಪಿಗೆಯಡಿಯೇ ಕೊರೊನಾ ಲಸಿಕೆಯನ್ನು ಜನರಿಗೆ ನೀಡುವುದನ್ನು ಮುಂದುವರಿಸಬಹುದು. ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳುವ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗ ಇನ್ನೂ ಮುಗಿದಿಲ್ಲ.

  • Updated On - 4:50 pm, Thu, 24 June 21 Edited By: sadhu srinath
ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ  ಸಿಕ್ಕಿಲ್ಲ ಪೂರ್ಣ ಪ್ರಮಾಣದ ಒಪ್ಪಿಗೆ; ಇನ್ನೂ ಬಾಕಿ ಇದೆ 3ನೇ ಹಂತದ ಪ್ರಯೋಗ! ಮುಂದೇನು?
ಪ್ರಾತಿನಿಧಿಕ ಚಿತ್ರ

ಭಾರತದ ಸ್ವದೇಶಿ ಲಸಿಕೆಯಾದ ಕೊವ್ಯಾಕ್ಸಿನ್ ಗೆ ಜನರ ಬಳಕೆಗೆ ಡಿಸಿಜಿಐನಿಂದ ಪೂರ್ಣ ಪ್ರಮಾಣದ ಒಪ್ಪಿಗೆ ಸಿಗಲು ಇನ್ನೂ ಒಂದು ವರ್ಷ ಕಾಯಬೇಕು. ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗ ಇನ್ನೂ ಮುಗಿದಿಲ್ಲ, ಹೀಗಾಗಿ ಸ್ವದೇಶಿ ಲಸಿಕೆಯಾದ ಕೊವ್ಯಾಕ್ಸಿನ್ ಲಸಿಕೆಯ ಪೂರ್ಣ ಪ್ರಮಾಣದ ಒಪ್ಪಿಗೆ ಸಿಗಲು 3ನೇ ಹಂತದ ಪ್ರಯೋಗ ಸಂಪೂರ್ಣವಾಗಿ ಮುಗಿದು ದಾಖಲೆಯನ್ನು ಡಿಸಿಜಿಐಗೆ ಸಲ್ಲಿಸಬೇಕು.

3ನೇ ಹಂತದ ಪ್ರಯೋಗ ಪೂರ್ಣ ಮುಗಿದಿಲ್ಲ! ಇನ್ನೂ ಒಂದು ವರ್ಷ ಕಾಯಬೇಕು: ಡಿಸಿಜಿಐ
ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ಜನರ ತುರ್ತು ಬಳಕೆಗೆ ಮಾತ್ರ ಡಿಸಿಜಿಐ ಜನವರಿಯಲ್ಲೇ ಒಪ್ಪಿಗೆ ನೀಡಿದೆ. ಆದರೇ, ಕೊವ್ಯಾಕ್ಸಿನ್ ಲಸಿಕೆಯ ಜನರ ಬಳಕೆಗೆ ಪೂರ್ಣ ಪ್ರಮಾಣದ ಒಪ್ಪಿಗೆಯನ್ನು ಡಿಸಿಜಿಐ ಇನ್ನೂ ನೀಡಿಲ್ಲ.

ಕಳೆದ ವಾರಾಂತ್ಯದಲ್ಲಿ ಭಾರತ್ ಬಯೋಟೆಕ್ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅಂತಿಮ ಫಲಿತಾಂಶದ ದಾಖಲೆಗಳನ್ನು ಡಿಸಿಜಿಐ ಗೆ ಸಲ್ಲಿಸಿತ್ತು. ಈ ಬಗ್ಗೆ ಜೂನ್ 22ರ ಮಂಗಳವಾರ ಸಿಡಿಎಸ್‌ಸಿಓ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ಸಭೆ ಸೇರಿ ಚರ್ಚೆ ನಡೆಸಿದೆ. ಈ ವೇಳೆ ಭಾರತ್ ಬಯೋಟೆಕ್ ಕಂಪನಿಯ ಅಧಿಕಾರಿಗಳು ಕೊವ್ಯಾಕ್ಸಿನ್ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗದ ಅಂತಿಮ ಡಾಟಾದ ಬಗ್ಗೆ ಪ್ರಸಂಟೇಷನ್ ನೀಡಿದ್ದಾರೆ.

ಕೊವ್ಯಾಕ್ಸಿನ್ ಕೊರೊನಾ ಲಸಿಕೆಯು 3ನೇ ಹಂತದಲ್ಲಿ ಶೇ.77.8 ರಷ್ಟು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ಕಂಪನಿಯು ವಿಷಯ ತಜ್ಞರ ಸಮಿತಿಗೆ ತಿಳಿಸಿದೆ. ಈ ಬಗೆಗಿನ ದಾಖಲೆಗಳನ್ನು ವಿಷಯ ತಜ್ಞರ ಸಮಿತಿ ಪರಿಶೀಲನೆ ನಡೆಸಿದೆ. ಆದಾದ ಬಳಿಕ ತಮ್ಮ ಶಿಫಾರಸ್ಸುನ್ನು ವಿಷಯ ತಜ್ಞರ ಸಮಿತಿಯು ಡಿಸಿಜಿಐ ಡಾಕ್ಟರ್ ವಿ.ಜಿ.ಸೋಮಾನಿ ಅವರಿಗೆ ಕಳಿಸಿದೆ. ಆದರೇ, ಡಿಸಿಜಿಐನಿಂದ ಇದುವರೆಗೂ ಕೊವ್ಯಾಕ್ಸಿನ್ ಲಸಿಕೆಯ ಜನರ ಬಳಕೆಗೆ ಪೂರ್ಣ ಪ್ರಮಾಣದ ಒಪ್ಪಿಗೆಯನ್ನು ನೀಡಿಲ್ಲ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

ಈಗ ಬಂದಿರುವ ಮಾಹಿತಿ ಪ್ರಕಾರ, ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯು ಜನರ ಬಳಕೆಗೆ ಪೂರ್ಣ ಪ್ರಮಾಣದ ಒಪ್ಪಿಗೆ ಪಡೆಯಲು ಇನ್ನೂ ಒಂದು ವರ್ಷ ಕಾಯಬೇಕು. ಅಲ್ಲಿಯವರೆಗೂ ತುರ್ತು ಬಳಕೆಗೆ ನೀಡಿರುವ ಒಪ್ಪಿಗೆಯಡಿಯೇ ಕೊರೊನಾ ಲಸಿಕೆಯನ್ನು ಜನರಿಗೆ ನೀಡುವುದನ್ನು ಮುಂದುವರಿಸಬಹುದು. ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳುವ ಪ್ರಕಾರ, ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗ ಇನ್ನೂ ಮುಗಿದಿಲ್ಲ.

ಭಾರತ್ ಬಯೋಟೆಕ್ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯ ಫಾಲೋ ಅಪ್ ಸ್ಟಡಿಗಳನ್ನ ಮುಂದುವರಿಸಬೇಕು. ಕೊವ್ಯಾಕ್ಸಿನ್ ಲಸಿಕೆಯು ಜನರಿಗೆ ಎಷ್ಟರ ಪ್ರಮಾಣದಲ್ಲಿ ಕೊರೊನಾ ವೈರಸ್ ವಿರುದ್ಧ ರಕ್ಷಣೆ ನೀಡುತ್ತೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕು. ಎಷ್ಟು ದಿನದೊಳಗೆ ಈ ಅಧ್ಯಯನ ನಡೆಸಬೇಕೆಂದು ಪ್ರೊಟೋಕಾಲ್ ನಲ್ಲಿ ತಿಳಿಸಲಾಗಿದೆ. ಇದು ಪೂರ್ಣವಾಗುವವರೆಗೂ ಕೊವ್ಯಾಕ್ಸಿನ್ ಲಸಿಕೆಗೆ ಜನರ ಬಳಕೆಗೆ ಪೂರ್ಣ ಪ್ರಮಾಣದ ಒಪ್ಪಿಗೆ ನೀಡಲಾಗಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಈ ಲಸಿಕೆಗಳ ಪೂರ್ಣ ಪ್ರಮಾಣದ ಒಪ್ಪಿಗೆಯನ್ನು ಕೊನೆಯ ವ್ಯಕ್ತಿಯು ಲಸಿಕೆಯನ್ನು ಪಡೆಯಲು ನೋಂದಾವಣಿಯಾದ ದಿನಾಂಕದಿಂದ ಒಂದು ವರ್ಷದ ಬಳಿಕ ನೀಡಲಾಗುತ್ತೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಹೀಗಾಗಿ 3ನೇ ಹಂತದಲ್ಲಿ ಕೊನೆಯ ವ್ಯಕ್ತಿ ನೇಮಕವಾದ ವರ್ಷದ ಬಳಿಕ ಕೊವ್ಯಾಕ್ಸಿನ್ ಲಸಿಕೆಗೆ ಡಿಸಿಜಿಐ ನಿಂದ ಪೂರ್ಣ ಪ್ರಮಾಣದ ಒಪ್ಪಿಗೆ, ಅನುಮೋದನೆ ಸಿಗಲಿದೆ.

ಹೀಗಾಗಿ ಭಾರತ್ ಬಯೋಟೆಕ್ ಕಂಪನಿಯು ಕೇಳಿದ್ದ ಕೊವ್ಯಾಕ್ಸಿನ್ ಲಸಿಕೆಯ ಪೂರ್ಣ ಪ್ರಮಾಣದ ಒಪ್ಪಿಗೆಯನ್ನು ಡಿಸಿಜಿಐ ಇನ್ನೂ ನೀಡಿಲ್ಲ. ಈಗಲೂ ಜನರ ತುರ್ತುಬಳಕೆಗೆ ನೀಡಿರುವ ಒಪ್ಪಿಗೆಯಡಿಯೇ ಲಸಿಕೆ ನೀಡಿಕೆಯನ್ನು ಮುಂದುವರಿಸುವುದನ್ನು ಶಿಫಾರಸ್ಸು ಮಾಡಲಾಗಿದೆ. ಗರ್ಭೀಣಿ ಮಹಿಳೆಯರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವ ಭಾರತ್ ಬಯೋಟೆಕ್ ಕಂಪನಿಯ ಪ್ರಸ್ತಾವವನ್ನು ವಿಷಯ ತಜ್ಞರ ಸಮಿತಿ ತಿರಸ್ಕರಿಸಿದೆ.

ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಫಲಿತಾಂಶದ ಬಗ್ಗೆ ಇನ್ನೂ ಅಂತಾರಾಷ್ಟ್ರೀಯ ಮೆಡಿಕಲ್ ಜರ್ನಲ್ ಗಳಲ್ಲಿ ಲೇಖನ ಪ್ರಕಟಿಸಿಲ್ಲ. ಈಗ 3ನೇ ಹಂತದ ಪ್ರಯೋಗದ ಅಂತಿಮ ಅಂಕಿಅಂಶ ಲಭ್ಯವಾಗಿರುವುದರಿಂದ ಇನ್ನೂ ಮುಂದೆ ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಲೇಖನ ಪ್ರಕಟಿಸಬಹುದು.

(Bharat Biotech Covaxin corona vaccine not yet given full permission says DCGI)