ಸುದ್ದಿ ತಾಣವೊಂದರ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ ಭಾರತ್ ಬಯೋಟೆಕ್; ತೆಲಂಗಾಣ ಕೋರ್ಟ್ ಹೇಳಿದ್ದೇನು?
ನಮಗೆ ಬಾರ್ ಆ್ಯಂಡ್ ಬೆಂಚ್ ವರದಿಯಿಂದಲೇ ಕೋರ್ಟ್ ತೀರ್ಪು ನೀಡಿದ್ದು ಗೊತ್ತಾಯಿತು. ಇದಕ್ಕೂ ಮೊದಲು ನಮಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂದು ಸುದ್ದಿ ಮಾಧ್ಯಮ ತಿಳಿಸಿದೆ.
ದಿ ವೈರ್ ಸುದ್ದಿ ಮಾಧ್ಯಮದ ಪ್ರಕಾಶಕರು, ಸಂಪಾದಕರು ಮತ್ತು ಅಲ್ಲಿರುವ ಕೆಲವು ಬರಹಗಾರರ ವಿರುದ್ಧ ತೆಲಂಗಾಣ ಕೋರ್ಟ್ವೊಂದರಲ್ಲಿ ಭಾರತ್ ಬಯೋಟೆಕ್ ಔಷಧೀಯ ಕಂಪನಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದೆ. ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿ ಪಡಿಸಿದ ಕೊವ್ಯಾಕ್ಸಿನ್ ಕೊವಿಡ್ 19 ಲಸಿಕೆ (covaxin) ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ಬರೆದು, ಪ್ರಕಟಿಸಿದ ಆರೋಪದಡಿ ಈ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾಗಿ ಕಂಪನಿ ಹೇಳಿಕೊಂಡಿದೆ. ತೆಲಂಗಾಣದ ರಂಗಾರೆಡ್ಡಿ ಕೋರ್ಟ್ನಲ್ಲಿ ಕೇಸ್ ದಾಖಲಾಗಿದ್ದು, XVI ನೇ ಹೆಚ್ಚುವರಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದು, ಭಾರತ್ ಬಯೋಟೆಕ್ ವಿರುದ್ಧ ಪ್ರಕಟಿಸಿದ್ದ 14 ಲೇಖನಗಳನ್ನೂ ತೆಗೆದುಹಾಕಲು ದಿ ವೈರ್ ಸುದ್ದಿ ತಾಣಕ್ಕೆ ಸೂಚನೆ ನೀಡಿದ್ದಾರೆ.
ಭಾರತ್ ಬಯೋಟೆಕ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ವಿವೇಕ್ ರೆಡ್ಡಿ, ದಿ ವೈರ್ ಸುದ್ದಿ ಮಾಧ್ಯಮ ಸರಿಯಾಗಿ ಪರಿಶೀಲನೆ ಮಾಡದೆ, ಸತ್ಯವನ್ನು ಅರ್ಥ ಮಾಡಿಕೊಳ್ಳದೆ ಭಾರತ್ ಬಯೋಟೆಕ್ ಮತ್ತು ಕೊವ್ಯಾಕ್ಸಿನ್ ವಿರುದ್ಧ ವೃಥಾ ಆರೋಪ ಮಾಡಿ ಲೇಖನಗಳನ್ನು ಪ್ರಕಟಿಸಿದೆ. ಇದು ಔಷಧ ಕಂಪನಿಯ ಗೌರವವನ್ನು ಹಾಳು ಮಾಡಿದೆ ಎಂದು ವಾದ ಮಂಡನೆ ಮಾಡಿದ್ದರು. ಅರ್ಜಿ ಕೂಲಂಕಷವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರು, 14 ಲೇಖನಗಳನ್ನೂ ತತ್ಕ್ಷಣ ತೆಗೆದುಹಾಕಬೇಕು ಮತ್ತು ಮುಂದಿನ ದಿನಗಳಲ್ಲಿ ಭಾರತ್ ಬಯೋಟೆಕ್ ಬಗ್ಗೆಯಾಗಲೀ, ಲಸಿಕೆಯ ಕುರಿತಾಗಲೀ ಯಾವುದೇ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ. ಅಂದಹಾಗೇ, ಇದು ಸದ್ಯ ಮಧ್ಯಂತರ ಆದೇಶವಾಗಿದೆ ಎಂದೂ ಹೇಳಲಾಗಿದೆ.
ಭಾರತ್ ಬಯೋಟೆಕ್ ಹಾಕಿರುವ ಮಾನನಷ್ಟ ಮೊಕದ್ದಮೆಯಲ್ಲಿ ದಿ ವೈರ್ನ ಸಂಪಾದಕರು, ಆರ್ಟಿಕಲ್ಗಳನ್ನು ಬರೆದವರ ಹೆಸರೂ ಇದೆ. ತೆಲಂಗಾಣ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ದಿ ವೈರ್ ಪ್ರಕಟಣೆ ಬಿಡುಗಡೆ ಮಾಡಿದ್ದು, ನಮಗೆ ಬಾರ್ ಆ್ಯಂಡ್ ಬೆಂಚ್ ವರದಿಯಿಂದಲೇ ಕೋರ್ಟ್ ತೀರ್ಪು ನೀಡಿದ್ದು ಗೊತ್ತಾಯಿತು. ಇದಕ್ಕೂ ಮೊದಲು ನಮಗೆ ಯಾವುದೇ ನೋಟಿಸ್ ಕೂಡ ನೀಡಿಲ್ಲ. ಭಾರತ್ ಬಯೋಟೆಕ್ ಪರ ವಕೀಲರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಮಾಧ್ಯಮ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಹಾಗೇ, ಉಳಿದ ಸುದ್ದಿ ಮಾಧ್ಯಮಗಳಂತೆ ನಾವೂ ಭಾರತ್ ಬಯೋಟೆಕ್ ಬಗ್ಗೆ ಹಲವು ಆರ್ಟಿಕಲ್ಗಳನ್ನು ಪ್ರಕಟಿಸಿದ್ದೆವು. ಆದರೆ ಇದು ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿದಂತೆ ಭಾಸವಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಕರ್ನಾಟಕದ ಮುಖಂಡರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆ, ಸಿದ್ದರಾಮಯ್ಯ ಭಾಗಿ