
ಕೊಲ್ಕತ್ತಾ, ನವೆಂಬರ್ 27: ಬಂಡಾಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಣದ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮತ್ತು ಅಖ್ರುಝಮಾನ್ ಅವರನ್ನು ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರ ನಿರ್ಧಾರಗಳನ್ನು ಕೊಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ಉಭಯ ನೇಮಕಾತಿಗಳನ್ನು ಮರುಪರಿಶೀಲಿಸಿ, 10 ದಿನಗಳೊಳಗೆ ಹೊಸ ಆದೇಶ ಹೊರಡಿಸುವಂತೆ ನ್ಯಾಯಾಲಯವು ಸ್ಪೀಕರ್ ಅವರಿಗೆ ನಿರ್ದೇಶನ ನೀಡಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಮೂಲ ಪಕ್ಷದ ನಾಯಕತ್ವವು ಪ್ರಮುಖ ವಿರೋಧ ಪಕ್ಷದ ಸ್ಥಾನಗಳಿಗೆ ತನ್ನದೇ ಅಭ್ಯರ್ಥಿಗಳನ್ನು ಪ್ರಸ್ತಾಪಿಸಿದ್ದರೂ, ಸ್ಪೀಕರ್ ಅವರು ಈ ಇಬ್ಬರು ಶಾಸಕರಿಗೆ ಮಾನ್ಯತೆ ನೀಡಿರುವುದನ್ನು ಪ್ರಶ್ನಿಸಿ ಹಿರಿಯ ಟಿಎಂಸಿ ಶಾಸಕ ಸೋವನ್ದೇವ್ ಚಟ್ಟೋಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ತೀರ್ಪು ಹೊರಬಿದ್ದಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಶಾಕ್; ಟಿಎಂಸಿಯಿಂದ ಉಚ್ಚಾಟಿತರಾಗಿದ್ದ ರಿತಬ್ರತಾ ಬ್ಯಾನರ್ಜಿ ಈಗ ಪ್ರತಿಪಕ್ಷ ನಾಯಕ!
ಜೂನ್ 3ರಂದು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಬಂಡಾಯ ಟಿಎಂಸಿ ಗುಂಪಿನ ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮತ್ತು ಶಾಸಕ ಅಖ್ರುಝಮಾನ್ ಅವರನ್ನು ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಿ ಆದೇಶಿಸಿದ್ದರು. ಈ ಎರಡೂ ನೇಮಕಾತಿಗಳನ್ನು ಕೊಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ. ಮುಂದಿನ 10 ದಿನಗಳ ಕಾಲ ಹೊಸ ಹೆಸರನ್ನು ಅಂತಿಮಗೊಳಿಸುವವರೆಗೆ ಯಾರೂ ವಿಪಕ್ಷ ನಾಯಕನ ಸ್ಥಾನಮಾನವನ್ನು ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಮತಾ ಬ್ಯಾನರ್ಜಿ ಬಣದ ಶಾಸಕನ ಅರ್ಜಿಗೆ ಜಯ:
ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಮೂಲ ತೃಣಮೂಲ ಕಾಂಗ್ರೆಸ್ ಪಕ್ಷವು ಹಿರಿಯ ಶಾಸಕ ಶೋಭನ್ದೇವ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನಾಮನಿರ್ದೇಶನ ಮಾಡಿತ್ತು. ಆದರೆ, ಸ್ಪೀಕರ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ತಿರಸ್ಕರಿಸಿ ಬಂಡಾಯ ಬಣದ ರಿತಬ್ರತಾ ಬ್ಯಾನರ್ಜಿ ಅವರಿಗೆ ಮಾನ್ಯತೆ ನೀಡಿದ್ದರು. ಇದನ್ನು ಪ್ರಶ್ನಿಸಿ ಶೋಭನ್ದೇವ್ ಚಟ್ಟೋಪಾಧ್ಯಾಯ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೀಗಾಗಿ, ಈ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಈ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಕೊಲ್ಕತ್ತಾ ಹೈಕೋರ್ಟ್ಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ಈ ಮಹತ್ವದ ತೀರ್ಪು ಹೊರಬಿದ್ದಿದೆ.
ಇದನ್ನೂ ಓದಿ: ‘ಪಶ್ಚಿಮ ಬಂಗ’ವಾಗಲಿದೆ ಬಂಗಾಳ; ಹೆಸರು ಬದಲಾವಣೆಗೆ ಸಂಪುಟ ಒಪ್ಪಿಗೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಬಣದ ನಾಯಕ ಕುನಾಲ್ ಘೋಷ್, “ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಸ್ಪೀಕರ್ ಪೀಠಕ್ಕೆ ಅಗೌರವ ತೋರಬಹುದು ಎಂದು ಬಿಜೆಪಿ ಭಾವಿಸಿದ್ದರೆ ಅದು ತಪ್ಪು. ಈಗ ವಿಧಾನಸಭಾ ಸ್ಪೀಕರ್ ಅವರು ವಿಪಕ್ಷ ನಾಯಕನ ಹೆಸರಿನ ಕುರಿತು ತೆಗೆದುಕೊಳ್ಳಲಿರುವ ಹೊಸ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ಟಿಎಂಸಿ ನಾಯಕತ್ವವು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸೋವನ್ದೇವ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ನಾಮನಿರ್ದೇಶನ ಮಾಡಿದಾಗ ಈ ವಿವಾದ ಆರಂಭವಾಯಿತು. ಆದರೆ, ರಿತಬ್ರತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಶಾಸಕರ ಪ್ರತ್ಯೇಕ ಬಣವೊಂದು, ತನಗೆ ಪಕ್ಷದ ಬಹುಮತ ಶಾಸಕರ ಬೆಂಬಲವಿದೆ ಎಂದು ವಾದಿಸಿ ಪ್ರತಿಸ್ಪರ್ಧಿ ಹಕ್ಕು ಮಂಡಿಸಿತು. ಟಿಎಂಸಿಯ 80 ಶಾಸಕರ ಪೈಕಿ ಸುಮಾರು 60 ಮಂದಿ ಬ್ಯಾನರ್ಜಿ ಅವರಿಗೆ ಬೆಂಬಲ ನೀಡಿದ್ದರು ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಸ್ಪೀಕರ್ ಜೂನ್ 3ರಂದು ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾನ್ಯ ಮಾಡಿದರು ಮತ್ತು ಅಖ್ರುಝಮಾನ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಿದರು.
ಪಕ್ಷದ ಪ್ರತಿನಿಧಿಗಳ ಆಯ್ಕೆಯನ್ನು ಸ್ಪೀಕರ್ ಕಡೆಗಣಿಸಿದ್ದಾರೆ ಎಂದು ವಾದಿಸಿ ಮೂಲ ಟಿಎಂಸಿ ನಾಯಕತ್ವವು ಈ ನಿರ್ಧಾರಗಳನ್ನು ಪ್ರಶ್ನಿಸಿತು. ನಂತರ ಚಟ್ಟೋಪಾಧ್ಯಾಯ ಅವರು ನೇಮಕಾತಿಗಳನ್ನು ರದ್ದುಗೊಳಿಸುವಂತೆ ಕೋರಿ ಕೊಲ್ಕತ್ತಾ ಹೈಕೋರ್ಟ್ ಮೊರೆ ಹೋದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ