Viral Video: ಐವರು ಸಹೋದ್ಯೋಗಿಗಳನ್ನೇ ಲಾಕಪ್ಗೆ ತಳ್ಳಿದ ಪೊಲೀಸ್ ಅಧಿಕಾರಿ; ಸಿಬ್ಬಂದಿಯಿಂದ ವ್ಯಾಪಕ ಆಕ್ರೋಶ
ಪೊಲೀಸರು ಲಾಕಪ್ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ.
ಪಾಟ್ನಾ: ಐವರು ಅಧೀನ ಪೊಲೀಸ್ ಸಿಬ್ಬಂದಿಯನ್ನು ಲಾಕಪ್ಗೆ ಹಾಕಿದ ಅಧಿಕಾರಿಯ ಕಾರ್ಯವೈಖರಿ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರದ ನವಾಡ ಪಟ್ಟಣದಲ್ಲಿ (Bihar’s Nawada town) ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಯು ಅವರನ್ನು ಲಾಕಪ್ಗೆ ದೂಡಿ, ಬೀಗ ಜಡಿದಿದ್ದಾರೆ. ಪೊಲೀಸರು ಲಾಕಪ್ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ. ‘ಇದು ವಿಷಾದಕರ ಬೆಳವಣಿಗೆ’ ಎಂದು ಹೇಳಿರುವ ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ‘ಬಿಹಾರ ಪೊಲೀಸ್ ಒಕ್ಕೂಟ’ವು ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಎಸ್ಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಯಬೇಕಿದೆ ಎಂದು ಆಗ್ರಹಿಸಿದೆ.
ಸಬ್-ಇನ್ಸ್ಪೆಕ್ಟರ್ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್ರೇಖಾ ಸಿಂಗ್, ಎಎಸ್ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಅವರು ಲಾಕಪ್ನಲ್ಲಿರುವುದನ್ನು ಸೆಕ್ಯುರಿಟಿ ಕ್ಯಾಮೆರಾಗಳು ತೋರಿಸಿವೆ. ಸುಮಾರು ಎರಡು ಗಂಟೆಯ ನಂತರ ಇವರೆಲ್ಲರೂ ಲಾಕಪ್ನಿಂದ ಹೊರಗೆ ಬಂದಿದ್ದಾರೆ. ‘ನಡೆಯಬಾರದ್ದು ನಡೆದಿದೆ ಎನ್ನುವ ರೀತಿಯಲ್ಲಿ ಮಾಧ್ಯಮಗಳು ವರದಿ ಮಾಡುತ್ತಿವೆ. ವಾಸ್ತವದಲ್ಲಿ ಅಂಥದ್ದೇನೂ ನಡೆದಿಲ್ಲ’ ಎಂದು ಎಸ್ಪಿ ಮಂಗ್ಲಾ ಹೇಳಿದ್ದಾರೆ. ಸ್ಟೇಷನ್ ಜವಾಬ್ದಾರಿ ಹೊತ್ತಿರುವ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಸಹ ಎಸ್ಪಿ ಹೇಳಿಕೆಯನ್ನು ಪುಷ್ಟೀಕರಿಸಿದ್ದಾರೆ.
ಕೆಲವು ಪ್ರಕರಣಗಳನ್ನು ಪರಿಶೀಲಿಸಲೆಂದು ಸೆಪ್ಟೆಂಬರ್ 8ರಂದು ಎಸ್ಪಿ ಸ್ಥಳಕ್ಕೆ ಬಂದರು. ಈ ವೇಳೆ ಕೆಲ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ಪತ್ತೆಯಾಗಿತ್ತು. ಇದರಿಂದ ಕೋಪಗೊಂಡ ತಪ್ಪು ಮಾಡಿದವರನ್ನು ಲಾಕಪ್ನಲ್ಲಿ ಇರಿಸುವಂತೆ ಹೇಳಿದರು. ಆದರೆ ಇವರ ಕರ್ತವ್ಯಲೋಪ ಅಥವಾ ತಪ್ಪು ಏನು ಎಂದು ಮೂಲಗಳು ಹೇಳಿಲ್ಲ. ಈ ಬಗ್ಗೆ ಎಸ್ಪಿ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಪೊಲೀಸರನ್ನು ಲಾಕಪ್ಗೆ ಹಾಕಿರುವ ಯಾವುದೇ ವಿಡಿಯೊ ಬಹಿರಂಗಗೊಂಡಿಲ್ಲ’ ಎಂದು ಎಸ್ಪಿ ಹೇಳಿದ್ದರು. ಆದರೆ ಅವರು ಹೇಳಿಕೆ ನೀಡಿದ ಮಾರನೇ ದಿನವೇ ವಾಟ್ಸಾಪ್ ಗ್ರೂಪ್ಗಳಲ್ಲಿ ಸಿಸಿಟಿವಿ ಫೂಟೇಜ್ನ ವಿಡಿಯೊ ತುಣುಕು ಹರಿದಾಡಲು ಆರಂಭಿಸಿತು.
Nawada SP Accused Of Detaining 5 Policemen, BPA Demanded Investigation Read more:https://t.co/K3LIGpUCa5#BiharPolice @bihar_police pic.twitter.com/65MGPNcE3k
— The National Bulletin (@TheNationalBul1) September 10, 2022
ಬಿಹಾರ ಪೊಲೀಸ್ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ಕುಮಾರ್ ಸಿಂಗ್ ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ಎಸ್ಪಿ ನಮ್ಮ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಅಧೀನ ಸಿಬ್ಬಂದಿಯನ್ನು ಲಾಕಪ್ಗೆ ಹಾಕಿರುವ ಬಗ್ಗೆ ತನಿಖೆ ನಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ‘ಸಿಸಿಟಿವಿ ಫೂಟೇಜ್ಗಳನ್ನು ಎಸ್ಪಿ ತಿರುಚಬಹುದು. ಈ ಕೃತ್ಯವು ಪೊಲೀಸರ ಸ್ಥೈರ್ಯವನ್ನು ಕುಗ್ಗಿಸಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಹಾರದ ಮುಖ್ಯ ಕಾರ್ಯದರ್ಶಿ ಮಾರ್ಗದರ್ಶಿ ಸೂಚನೆಗಳನ್ನು ಹೊರಡಿಸಿದ್ದು, ‘ಅಧೀನ ಸಿಬ್ಬಂದಿಯ ಬಗ್ಗೆ ವಿಪರೀತ ಕ್ರಮಗಳಿಗೆ ಮುಂದಾಗಬೇಡಿ’ ಎಂದು ಹೇಳಿದ್ದಾರೆ.
Published On - 7:10 am, Sun, 11 September 22