CBI Raids: ಉದ್ಯೋಗಕ್ಕಾಗಿ ಭೂಮಿ ಹಗರಣ; ನಿತೀಶ್ ವಿಶ್ವಾಸಮತ ಯಾಚನೆ ದಿನವೇ ಸಿಬಿಐ ದಾಳಿ
ನಿತೀಶ್ ಕುಮಾರ್ ನೇತೃತ್ವದ ಮಹಾ ಘಟಬಂಧನ ಸರ್ಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದ ದಿನವೇ ಈ ದಾಳಿ ನಡೆದಿದೆ.
ಪಾಟ್ನಾ: ಕೇಂದ್ರೀಯ ತನಿಖಾ ದಳವು (Central Bureau of Investigation – CBI) ಬುಧವಾರ ರಾಷ್ಟ್ರೀಯ ಜನತಾ ದಳದ (Rashtriya Janatha Dal – RJD) ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಮನೆಯ ಮೇಲೆ ದಾಳಿ ನಡೆಸಿದೆ. ‘ಉದ್ಯೋಗಕ್ಕಾಗಿ ಭೂಮಿ ಹಗರಣ’ ಆರೋಪಕ್ಕೆ ಸಂಬಂಧಿಸಿದಂತೆ ನಡೆದಿರುವ ದಾಳಿಯಿದು ಎಂದು ಹೇಳಲಾಗುತ್ತಿದೆ. ‘ಈ ದಾಳಿಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ. ಯಾವುದೇ ಆಧಾರವಿಲ್ಲದ ಆರೋಪವನ್ನು ಆಧರಿಸಿ ಸಿಬಿಐ ದಾಳಿ ನಡೆಸಿದೆ. ಒತ್ತಡದಿಂದ ಸಿಬಿಐ ಹೀಗೆ ವರ್ತಿಸುತ್ತಿದೆ’ ಎಂದು ಆರ್ಜೆಡಿ ನಾಯಕರು ಹೇಳಿದರು.
ನಿತೀಶ್ ಕುಮಾರ್ ನೇತೃತ್ವದ ಮಹಾ ಘಟಬಂಧನ ಸರ್ಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದ ದಿನವೇ ಈ ದಾಳಿ ನಡೆದಿದೆ. ಇಂದಿನಿಂದ ಬಿಹಾರ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ. ಕಳೆದ ಮೇ ತಿಂಗಳಲ್ಲಿ ಸಿಬಿಐ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಲಾಲು ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು 12 ಇತರರನ್ನು ಹಗರಣದಲ್ಲಿ ಆರೋಪಿಗಳನ್ನಾಗಿ ಸಿಬಿಐ ಹೆಸರಿಸಿದೆ. ಉದ್ಯೋಗ ಪಡೆಯಲು ಭೂಮಿಯನ್ನು ಕೊಡಬೇಕು ಅಥವಾ ಆರ್ಜೆಡಿ ನಾಯಕರ ಹೆಸರಿನಲ್ಲಿರುವ ಭೂಮಿಯನ್ನು ದುಬಾರಿ ಬೆಲೆಗೆ ಖರೀದಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ 2004ರಿಂದ 09ರ ಅವಧಿಯಲ್ಲಿ ಗ್ರೂಪ್ ಡಿ ನೌಕರರಾಗಿ ನೇಮಕಗೊಂಡಿದ್ದವರಿಂದ ಭೂಮಿಯನ್ನು ಪಡೆಯಲಾಗಿತ್ತು. ನಂತರದ ದಿನಗಳಲ್ಲಿ ಅವನ್ನು ಮಾರಲಾಗಿತ್ತು ಎಂದು ಸಿಬಿಐ ಹೇಳಿದೆ. ಆರ್ಜೆಡಿ ಸಂಸದ ಅಶ್ಫಾಖ್ ಕರೀಮ್ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಮನೆಗಳ ಮೇಲೆ ಕಳೆದ ಬುಧವಾರ ಸಿಬಿಐ ದಾಳಿ ನಡೆಸಿತ್ತು.
ಇದನ್ನೂ ಓದಿ: ಬಿಹಾರದಲ್ಲಿ ಇಂದು ವಿಶ್ವಾಸಮತಯಾಚನೆ; 165 ಶಾಸಕರ ಬೆಂಬಲದಿಂದ ನಿತೀಶ್ ಕುಮಾರ್ ಸರ್ಕಾರಕ್ಕೆ ಗೆಲುವು ಖಚಿತ
Published On - 10:10 am, Wed, 24 August 22