Bilkis Bano case ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆ: ಸುಪ್ರೀಂಕೋರ್ಟ್ನಲ್ಲಿ ಇಂದು ವಿಚಾರಣೆ
ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ ಕ್ರಮವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಹದಿನಾಲ್ಕು ಜನರ ಹತ್ಯೆಯಾಯಿತು. ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಕರಣದ...
ಬಿಲ್ಕಿಸ್ ಬಾನು (Bilkis Bano case )ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ (Gujarat) ಸರ್ಕಾರ 11 ಜೀವಾವಧಿ ಅಪರಾಧಿಗಳಿಗೆ ನೀಡಿರುವ ಬಿಡುಗಡೆ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್‌ನ (Supreme Court)ವಿಶೇಷ ತ್ರಿಸದಸ್ಯ ಪೀಠ ಇಂದು (ಗುರುವಾರ) ವಿಚಾರಣೆ ನಡೆಸಲಿದೆ. ನ್ಯಾಯವಾದಿ ಅಪರ್ಣಾ ಭಟ್ ಅವರು ನ್ಯಾಯಾಲಯದಲ್ಲಿ ಅರ್ಜಿಯನ್ನು ಮುಂಚಿನ ವಿಚಾರಣೆಗೆ ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಮಂಗಳವಾರ ಅರ್ಜಿಯನ್ನು ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದರು. ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿದ ಕ್ರಮವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಹದಿನಾಲ್ಕು ಜನರ ಹತ್ಯೆಯಾಯಿತು. ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಕರಣದ ಗಂಭೀರತೆ ಬಗ್ಗೆ ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಅಜಯ್ ರಸ್ಟೋಗಿ ಮತ್ತು ವಿಕ್ರಮ್ ನಾಥ್ ತ್ರಿಸದಸ್ಯ ಪೀಠದಲ್ಲಿರಲಿದ್ದಾರೆ. 2002 ಗೋಧ್ರಾ ಗಲಭೆ ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಹನ್ನೊಂದು ಅಪರಾಧಿಗಳನ್ನು ಆಗಸ್ಟ್ 15ರಂದು ಗೋಧ್ರಾ ಸಬ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಏನಿದು ಪ್ರಕರಣ?
ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲ್ಲೂಕಿನಲ್ಲಿ 2002 ಮಾರ್ಚ್ 3ರಂದು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, 14 ಮಂದಿಯನ್ನು ಜನರ ಗುಂಪೊಂದು ಹೊಡೆದು ಕೊಂದಿತ್ತು. ಸಾವಿಗೀಡಾದವರಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಾ ಕೂಡಾ ಇದ್ದಾಳೆ. ಈ ಪ್ರಕರಣ ನಡೆದಾಗ ಬಿಲ್ಕಿಸ್ ಗರ್ಭಿಣಿ ಆಗಿದ್ದರು. ತನ್ನ ಮೇಲೆ ನಡೆದ ದೌರ್ಜನ್ಯ ಬಗ್ಗೆ ಬಿಲ್ಕಿಸ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಮೀಪಿಸಿದಾಗ ಈ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಬಿಲ್ಕಿಸ್ ಅವರಿಗೆ ಆರೋಪಿಯಿಂದ ಜೀವ ಬೆದರಿಕೆ ಬಂದಿದೆ ಎಂಬ ದೂರಿನನ್ವಯ 2004 ಆಗಸ್ಟ್ ತಿಂಗಲ್ಲಿ ಸುಪ್ರೀಂಕೋರ್ಟ್ ಪ್ರಸ್ತುತ ಪ್ರಕರಣವನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿತ್ತು. 2008 ಜನವರಿ 21ರಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಯುಡಿ ಸಾಲ್ವಿ ಅವರು 13 ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, ಮುಂಬೈನಲ್ಲಿ ನಡೆದ ಇನ್ ಕ್ಯಾಮೆರಾ ವಿಚಾರಣೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. 2017 ಮೇ ತಿಂಗಳಲ್ಲಿ ಬಾಂಬೈ ಹೈಕೋರ್ಟ್ ಈ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
2019ರಲ್ಲಿ ಸುಪ್ರೀಂಕೋರ್ಟ್ ಬಿಲ್ಕಿಸ್ ಅವರಿಗೆ 50 ಲಕ್ಷ ಪರಿಹಾರ ನೀಡಿತ್ತು. 2002 ರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇದು ಮೊದಲ ಆದೇಶವಾಗಿತ್ತು. ಆಗಬಾರದ್ದು ಸಂಭವಿಸಿದ್ದು, ರಾಜ್ಯವು ಪರಿಹಾರ ನೀಡಬೇಕು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿತ್ತು.
ಬಿಡುಗಡೆಯಾದ 11 ಅಪರಾಧಿಗಳು
ಜಸ್ವಂತ್ ನೇಯ್, ಗೋವಿಂದ್ ನೇಯ್, ಶೈಲೇಶ್ ಭಟ್, ರಾಧೇ ಶ್ಯಾಮ್ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಬಾಯ್ ವಹೋನಿಯ, ಪ್ರದೀಪ್ ಮೋರ್ದಿಯಾ, ಬಕಾಬಾಯಿ ವಹೋನಿಯಾ, ರಾಜುಬಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
Published On - 8:38 am, Thu, 25 August 22