Naveen Patnaik: ಒಡಿಶಾದ ವಿರೋಧ ಪಕ್ಷದ ನಾಯಕರಾಗಿ ನವೀನ್ ಪಟ್ನಾಯಕ್ ಆಯ್ಕೆ
ನಾವು ಬಿಜೆಡಿ ಶಾಸಕರ ಸಭೆ ನಡೆಸಿದ್ದೇವೆ. ನಾನು ಅವರನ್ನು ಅಭಿನಂದಿಸಿ ಧನ್ಯವಾದ ಸಲ್ಲಿಸಿದೆ. ಅವರು ನನ್ನನ್ನು ವಿರೋಧ ಪಕ್ಷದ ನಾಯಕ ಮತ್ತು ಬಿಜೆಡಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ಪಟ್ನಾಯಕ್ ಹೇಳಿದ್ದಾರೆ.
ಭುವನೇಶ್ವರ್ ಜೂನ್ 19: ಒಡಿಶಾದಲ್ಲಿ ಐದು ಅವಧಿಯ ಮುಖ್ಯಮಂತ್ರಿ ಆಗಿದ್ದ, ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ (Naveen Patnaik) ಅವರನ್ನು ಒಡಿಶಾ(Odisha )ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ನಾಯಕ್, ಬುಧವಾರ ನಡೆದ ಬಿಜೆಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಾವು ಬಿಜೆಡಿ ಶಾಸಕರ ಸಭೆ ನಡೆಸಿದ್ದೇವೆ. ನಾನು ಅವರನ್ನು ಅಭಿನಂದಿಸಿ ಧನ್ಯವಾದ ಸಲ್ಲಿಸಿದೆ. ಅವರು ನನ್ನನ್ನು ವಿರೋಧ ಪಕ್ಷದ ನಾಯಕ ಮತ್ತು ಬಿಜೆಡಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ” ಎಂದು ಅವರು ಹೇಳಿದರು.
ಸಭೆಯಲ್ಲಿ ಇತ್ತೀಚಿನ ಚುನಾವಣೆಗಳು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು ಎಂದ ಪಟ್ನಾಯಕ್, ನಾನು ಮತ್ತು ನನ್ನ ಪಕ್ಷ ಒಡಿಶಾದ ಜನರಿಗಾಗಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ರಾಯರಖೋಲ್ ಶಾಸಕ, ಮಾಜಿ ರಾಜ್ಯ ಸಚಿವ ಪ್ರಸನ್ನ ಆಚಾರ್ಯ ಅವರನ್ನು ಪ್ರತಿಪಕ್ಷದ ಉಪನಾಯಕರನ್ನಾಗಿ ಹೆಸರಿಸಲಾಗಿದ್ದು, ಮಾಜಿ ಸ್ಪೀಕರ್ ಬಿಂಜಾರಪುರದ ಶಾಸಕಿ ಪ್ರಮೀಳಾ ಮಲ್ಲಿಕ್ ಅವರು ಸದನದಲ್ಲಿ ಪ್ರತಿಪಕ್ಷದ ಮುಖ್ಯ ಸಚೇತಕರಾಗಿರುತ್ತಾರೆ. ಪಟ್ನಾಯಕ್ ಅವರು ಮಾಜಿ ಸಚಿವ ಪ್ರತಾಪ್ ಕೇಶರಿ ದೇಬ್, ಔಲ್ ಶಾಸಕರನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ಮುಖ್ಯ ಸಚೇತಕ ಎಂದು ಹೆಸರಿಸಿದರು.
ನಾವು ಈಗ ಒಡಿಶಾದ ಇತಿಹಾಸದಲ್ಲಿ ಪ್ರಬಲ ಪ್ರತಿಪಕ್ಷವಾಗಿದ್ದೇವೆ. ಕಳೆದ 24 ವರ್ಷಗಳಿಂದ ನಾವು ಒಡಿಶಾದ ಜನರಿಗೆ ಸೇವೆ ಸಲ್ಲಿಸಿದ್ದೇವೆ. ಪ್ರತಿ ತಿಂಗಳು, ಪ್ರತಿ ವರ್ಷ, ಪ್ರತಿ ದಿನ ಮತ್ತು ಪ್ರತಿ ಗಂಟೆ, ನಾವು ಒಡಿಶಾದ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ ಮತ್ತು ಪ್ರತಿಪಕ್ಷವಾಗಿಯೂ ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಆಚಾರ್ಯ ಹೇಳಿದ್ದಾರೆ.
ರೈತರು, ಯುವಕರು ಮತ್ತು ಮಹಿಳೆಯರ ಹಿತಾಸಕ್ತಿಗಳಿಗಾಗಿ ಬಿಜೆಡಿ ವಿಧಾನಸಭೆಯಲ್ಲಿ ಹೋರಾಟ ನಡೆಸಲಿದೆ ಎಂದು ಮಲ್ಲಿಕ್ ಹೇಳಿದ್ದಾರೆ. ರಾಜ್ಯದಲ್ಲಿ 24 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಡಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದು , ಇಲ್ಲಿ ಬಿಜೆಪಿ ಅಧಿಕಾರಕ್ಕೇರಿತ್ತು.
ಇದನ್ನೂ ಓದಿ: ಹಿಂದಿಯಲ್ಲಿ ಬೇಟಿ ಪಡಾವೋ ಎಂದು ತಪ್ಪಾಗಿ ಬರೆದ ಕೇಂದ್ರ ಸಚಿವೆ; ಅರ್ಹತೆ ಪ್ರಶ್ನಿಸಿದ ಕಾಂಗ್ರೆಸ್
147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿದರೆ, ಬಿಜೆಡಿ 51 ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದುಕೊಂಡಿತು, ಸಿಪಿಐ ಒಂದು ಮತ್ತು ಮೂರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Wed, 19 June 24