ಹಿಂದಿಯಲ್ಲಿ ಬೇಟಿ ಪಡಾವೋ ಎಂದು ತಪ್ಪಾಗಿ ಬರೆದ ಕೇಂದ್ರ ಸಚಿವೆ; ಅರ್ಹತೆ ಪ್ರಶ್ನಿಸಿದ ಕಾಂಗ್ರೆಸ್
ಸಾವಿತ್ರಿ ಠಾಕೂರ್ ಅವರು ದೇವನಾಗರಿ ಲಿಪಿಯಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯನ್ನು ವೈಟ್‌ಬೋರ್ಡ್‌ನಲ್ಲಿ ತಪ್ಪು ತಪ್ಪಾಗಿ ಬರೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ ಕೆ ಮಿಶ್ರಾ, “ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಮತ್ತು ದೊಡ್ಡ ಇಲಾಖೆಗಳ ಜವಾಬ್ದಾರಿಯನ್ನು ಹೊತ್ತಿರುವ ಜನರು ತಮ್ಮ ಮಾತೃಭಾಷೆಯಲ್ಲೂ ಸಮರ್ಥರಲ್ಲದಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ ಎಂದಿದ್ದಾರೆ.
ಧಾರ್ ಜೂನ್ 19 : ಮಧ್ಯಪ್ರದೇಶದಲ್ಲಿ (Madhya Pradesh) ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ (Savitri Thakur) ಅವರು ಹಿಂದಿಯಲ್ಲಿ ‘ಬೇಟಿ ಪಡಾವೋ, ಬೇಟಿ ಬಚಾವೋ’ (Beti Padhao, Beti Bachao) ಘೋಷಣೆಯನ್ನು ತಪ್ಪಾಗಿ ಬರೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರತಿಪಕ್ಷ ಕಾಂಗ್ರೆಸ್ ಆಕೆಯ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿದೆ. ಜೂನ್ 18 ರಂದು (ಮಂಗಳವಾರ) ಧಾರ್‌ನ ಬ್ರಹ್ಮ ಕುಂಡಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ‘ಸ್ಕೂಲ್ ಚಲೋ ಅಭಿಯಾನ’ದ ಅಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಧಾರ್ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿರುವ ಠಾಕೂರ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಠಾಕೂರ್ ಅವರು ದೇವನಾಗರಿ ಲಿಪಿಯಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯನ್ನು ವೈಟ್‌ಬೋರ್ಡ್‌ನಲ್ಲಿ ತಪ್ಪು ತಪ್ಪಾಗಿ ಬರೆದಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ ಕೆ ಮಿಶ್ರಾ, “ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಮತ್ತು ದೊಡ್ಡ ಇಲಾಖೆಗಳ ಜವಾಬ್ದಾರಿಯನ್ನು ಹೊತ್ತಿರುವ ಜನರು ತಮ್ಮ ಮಾತೃಭಾಷೆಯಲ್ಲೂ ಸಮರ್ಥರಲ್ಲದಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ, ಅವರು ತಮ್ಮ ಸಚಿವಾಲಯವನ್ನು ಹೇಗೆ ನಿರ್ವಹಿಸಬಲ್ಲರು. ? ಎಂದು ಕೇಳಿದ್ದಾರೆ.
ಸಚಿವೆ ತಪ್ಪಾಗಿ ಬರೆಯುತ್ತಿರುವ ವಿಡಿಯೊ
This is Union Minister of State for Women and Child Development Savitri Thakur.
She had to write the slogan ‘Beti Bachao Beti Padhao’ on the education awareness chariot in the district.
But, the minister wrote – “Bedhi Padao Bacchav”
According to the election affidavit, she… pic.twitter.com/qF4agEtwYX
— Swati Dixit ಸ್ವಾತಿ (@vibewidyou) June 19, 2024
ಚುನಾವಣೆಯಲ್ಲಿ ಅಭ್ಯರ್ಥಿಗಳ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಮಿಶ್ರಾ ಹೇಳಿದ್ದಾರೆ.
“ಒಂದೆಡೆ ದೇಶದ ನಾಗರಿಕರು ಸಾಕ್ಷರರು ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಜವಾಬ್ದಾರಿಯುತ ಜನರಲ್ಲಿ ಅಕ್ಷರ ಜ್ಞಾನದ ಕೊರತೆ ಇದೆ, ಹಾಗಾದರೆ ಯಾವುದು ಸತ್ಯ? ಇದು ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯೇ ಹೊರತು ವೈಯಕ್ತಿಕ ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರ ಮಾಧ್ಯಮ ಸಲಹೆಗಾರ ಮಿಶ್ರಾ ಹೇಳಿದ್ದಾರೆ.
ಶಾಲಾ ಚಲೋ ಅಭಿಯಾನದ ವೇಳೆ ತರಾತುರಿಯಲ್ಲಿ ಸಚಿವರೊಬ್ಬರು ಮಾಡಿದ ತಪ್ಪಿನ ವಿಡಿಯೊ ಕುರಿತು ಕಾಂಗ್ರೆಸ್ ಪ್ರಹಾರ ಮಾಡಿರುವುದು ಅವರ ಕ್ಷುಲ್ಲಕ ಮತ್ತು ಬುಡಕಟ್ಟು ವಿರೋಧಿ ಚಿಂತನೆಯನ್ನು ತೋರಿಸುತ್ತದೆ ಎಂದು ಧಾರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನೋಜ್ ಸೋಮಾನಿ ಆರೋಪಿಸಿದ್ದಾರೆ.
ಸಾವಿತ್ರಿ ಅವರ ಭಾವನೆಗಳು ಮತ್ತು ಆಲೋಚನೆಗಳು ಶುದ್ಧವಾಗಿವೆ, ಆದರೆ ಅವರ ಭಾವನೆಗಳನ್ನು ಶುದ್ಧವಾಗಿಡಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗುತ್ತಿಲ್ಲ, ಬುಡಕಟ್ಟು ಮಹಿಳೆಗೆ ಮಾಡಿದ ಅವಮಾನವನ್ನು ಬುಡಕಟ್ಟು ಸಮುದಾಯ ಕ್ಷಮಿಸುವುದಿಲ್ಲ ಎಂದಿದ್ದಾರೆ ಸೋಮಾನಿ. ಬುಡಕಟ್ಟು ಮಹಿಳೆ ಬೆಳೆಯುತ್ತಿರುವುದನ್ನು ಕಾಂಗ್ರೆಸ್ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸೋಮಾನಿ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ,ಧಾರ್ ಜಿಲ್ಲೆಯ ಬುಡಕಟ್ಟು ನಾಯಕ ಉಮಂಗ್ ಸಿಂಘಾರ್ ತಮ್ಮ ಎಕ್ಸ್ ಖಾತೆಯಲ್ಲಿನ ಪೋಸ್ಟ್‌ನಲ್ಲಿ, ಇದು ಎಂತಹ ನಾಯಕತ್ವ? ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಸರ್ಕಾರದಲ್ಲಿ ರಬ್ಬರ್ ಸ್ಟಾಂಪ್ ಮಂತ್ರಿಗಳು ಮಾತ್ರ ಬೇಕೇ? ಸಾರ್ವಜನಿಕ ಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಯಾವುದೇ ಮಾನದಂಡವಿಲ್ಲ, ಆದರೆ ಕನಿಷ್ಠ ಅಕ್ಷರಸ್ಥರಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜೂನ್ 20-21ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ
ಸಂಸದೆ ಮತ್ತು ಕೇಂದ್ರ ಸಚಿವರಾಗಿದ್ದರೂ ಠಾಕೂರ್ ಅವರಿಗೆ ಸರಿಯಾಗಿ ಎರಡು ಪದಗಳನ್ನು ಬರೆಯಲು ಬರುತ್ತಿಲ್ಲವೇ ಎಂದು ಸಿಂಘಾರ್ ಕೇಳಿದ್ದಾರೆ. ಆಕೆ ತಪ್ಪಾಗಿ ಬರೆದಿರುವುದನ್ನು ನೋಡಿ ಮಕ್ಕಳಿಗೆ ಏನನ್ನಿಸಿರಬಹುದು ಎಂಬುದು ಅರ್ಥವಾಗುತ್ತದೆ.ಅವರು ಕೇಂದ್ರ ಸರ್ಕಾರದಲ್ಲಿ ಎಂತಹ ನಾಯಕತ್ವ ನೀಡುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವೇ? ಇಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮುನ್ನ ಮತದಾರರು ಯೋಚಿಸಬೇಕಿತ್ತು .ಮೋದಿ ಸರ್ಕಾರವು ಪ್ರಶ್ನೆಗಳನ್ನು ಎತ್ತುವ ವಿದ್ಯಾವಂತ ನಾಯಕರನ್ನು ಬಯಸುವುದಿಲ್ಲ, ಏಕೆಂದರೆ ಶಿಕ್ಷಣವು ಸಾಕ್ಷರತೆಯನ್ನು ಮಾತ್ರ ನೀಡುವುದಿಲ್ಲ, ಅದು ಸಮಾಜದ ಉನ್ನತಿಯತ್ತ ಚಿಂತನೆಯನ್ನು ಬದಲಾಯಿಸುತ್ತದೆ ಎಂದು ಸಿಂಘಾರ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ