‘ಇಂಡಿಯ ಮೈತ್ರಿಕೂಟ, ಸಿಜೆಪಿ ದೇಶವನ್ನು ಅಸ್ಥಿರಗೊಳಿಸಲು ಸಂಚು ಮಾಡಿವೆ’; ಬಿಜೆಪಿ ಗಂಭೀರ ಆರೋಪ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮತ್ತು ಆಮ್ ಆದ್ಮಿ ಪಾರ್ಟಿ  ನಾಯಕ ಅರವಿಂದ್ ಕೇಜ್ರಿವಾಲ್ ಅವರ ಆಪ್ತರಾದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಘಟನೆಗಳನ್ನು "ಅರಾಜಕತಾವಾದಿ ಗುಂಪುಗಳು" ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಚುನಾವಣೆಯಲ್ಲಿ ಮತದಾರರಿಂದ ತಿರಸ್ಕರಿಸಲ್ಪಟ್ಟ ನಂತರ ಈ ಗುಂಪುಗಳು ದೇಶದಲ್ಲಿ ಅಶಾಂತಿ ಸೃಷ್ಟಿಸಿ ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ಎಸ್​ಐಅರ್​​ನಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಮತ್ತು ಇತರ ಸಂಘಟನೆಗಳು ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಯೋಜಿಸಿದ್ದ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ.

ಇಂಡಿಯ ಮೈತ್ರಿಕೂಟ, ಸಿಜೆಪಿ ದೇಶವನ್ನು ಅಸ್ಥಿರಗೊಳಿಸಲು ಸಂಚು ಮಾಡಿವೆ; ಬಿಜೆಪಿ ಗಂಭೀರ ಆರೋಪ
ನಿತಿನ್ ನವೀನ್
Image Credit source: PTI

Updated on: Oct 10, 2026 | 3:16 PM

ನವದೆಹಲಿ, ಅಕ್ಟೋಬರ್ 10: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಜೆಪಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಗುರುತಿಸಿಕೊಂಡಿರುವ ವಿರೋಧ ಪಕ್ಷದ ಗುಂಪುಗಳು ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ಇಂದು ಗಂಭೀರ ಆರೋಪ ಮಾಡಿದೆ. ರಾಜಕೀಯ ಲಾಭಕ್ಕಾಗಿ ಹಾಗೂ ವಿದೇಶಿ ಶಕ್ತಿಗಳ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿರುವ ಇಂಡಿಯ ಮೈತ್ರಿಕೂಟ ಮತ್ತು ಕೇಜ್ರಿವಾಲ್ ಅವರಿಗೆ ನಿಕಟವಾಗಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿತಿನ್ ನವೀನ್, ಪ್ರಸ್ತುತ ಪರಿಸ್ಥಿತಿಯನ್ನು ಅತ್ಯಂತ ಅಪಾಯಕಾರಿ ಮತ್ತು ಗಂಭೀರವಾದುದು ಎಂದು ಬಣ್ಣಿಸಿದ್ದಲ್ಲದೆ, ಈ ಗುಂಪುಗಳು ಚುನಾವಣೆಯಲ್ಲಿ ಜನ ನೀಡಿರುವ ತೀರ್ಪನ್ನು ಸ್ವೀಕರಿಸಲು ನಿರಾಕರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಜನಾದೇಶವನ್ನು ಸ್ವೀಕರಿಸುವ ಅಥವಾ ಅದರಿಂದ ಕಲಿಯುವ ಬದಲು, ನೀವು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದ್ದೀರಿ” ಎಂದು ವಿಪಕ್ಷಗಳನ್ನು ಟೀಕಿಸಿದರು.

ಇದನ್ನೂ ಓದಿ: ‘ರಾಜಕೀಯ ಅವಕಾಶವಾದಿತನಕ್ಕೆ ಮತ್ತೊಂದು ಹೆಸರೇ ರಾಹುಲ್ ಗಾಂಧಿ’; ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಸ್ವಾವಲಂಬಿ ರಾಷ್ಟ್ರವಾಗುವ ಭಾರತದ ಪ್ರಗತಿಯು ಮುಂದುವರಿದಿದೆ. ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ರಾಷ್ಟ್ರೀಯ ಸ್ಥಿರತೆಯನ್ನು ಕದಡುವ ಇಂತಹ ಪ್ರಯತ್ನಗಳನ್ನು ಯಶಸ್ವಿಯಾಗಿ ಎದುರಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಕಾರಣವೇನು?:

ಎಸ್​ಐಆರ್​​ನಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಮತ್ತು ಇತರ ಸಂಘಟನೆಗಳು ಇಂದು ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ಧರಣಿಯ ಹಿನ್ನೆಲೆಯಲ್ಲಿ ಬಿಜೆಪಿಯ ಈ ಆರೋಪಗಳು ಬಂದಿವೆ. ಚುನಾವಣಾ ಆಯೋಗವು ಎಸ್​ಐಆರ್​​ನಲ್ಲಿ ಅಕ್ರಮಗಳನ್ನು ಎಸಗಿದ್ದು, ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ, ಬಿಜೆಪಿ ಮತ್ತು ಚುನಾವಣಾ ಆಯೋಗವು ಈ ಪಕ್ಷಪಾತದ ಆರೋಪಗಳನ್ನು ತಳ್ಳಿಹಾಕಿದ್ದು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದಲೇ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿವೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ!

ಸಿಜೆಪಿ ಅರ್ಹತೆಯನ್ನು ಪ್ರಶ್ನಿಸಿದ ಬಿಜೆಪಿ:

ನಿತಿನ್ ನವೀನ್ ಅವರ ಹೇಳಿಕೆಗಳ ಜೊತೆಗೆ, ಇತರ ಬಿಜೆಪಿ ನಾಯಕರು ಸಹ ಸಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಬಿಹಾರದ ಸಚಿವ ರಾಮ್ ಕೃಪಾಲ್ ಯಾದವ್ ಅವರು ಸಿಜೆಪಿಯ ರಾಜಕೀಯ ಅರ್ಹತೆಯನ್ನು ಪ್ರಶ್ನಿಸಿದ್ದು, ಅದೊಂದು ನೋಂದಾಯಿತವಲ್ಲದ ಗುಂಪು ಹಾಗೂ ವಿರೋಧ ಪಕ್ಷದ ನಾಯಕರ ಹಿತಾಸಕ್ತಿಗಳನ್ನು ಮುನ್ನಡೆಸಲು ಅದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


ಶುಕ್ರವಾರ ದೆಹಲಿ ಪೊಲೀಸರು ಸಿಜೆಪಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿದ್ದರು. ತದನಂತರ ಭದ್ರತಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿ 45 ಮೆಟ್ರೋ ನಿಲ್ದಾಣಗಳ ಬಾಗಿಲುಗಳನ್ನು ಮುಚ್ಚಲಾಯಿತು, ಮಧ್ಯ ದೆಹಲಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು, ದೆಹಲಿಗೆ ಬರುವ ರೈಲುಗಳನ್ನು ರದ್ದುಗೊಳಿಸಲಾಯಿತು ಮತ್ತು ವಿಶೇಷ ರೈಲುಗಳ ಮೂಲಕ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:15 pm, Sat, 10 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us