‘ಶಕ್ತಿ’ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

|

Updated on: Mar 20, 2024 | 7:19 PM

ಹಿಂದೂ ಧರ್ಮದಲ್ಲಿ 'ಶಕ್ತಿ' ಎಂಬ ಪದವಿದೆ. ನಾವು 'ಶಕ್ತಿ' (ಅಧಿಕಾರ) ವಿರುದ್ಧ ಹೋರಾಡುತ್ತಿದ್ದೇವೆ. ಆ ‘ಶಕ್ತಿ’ ಯಾವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಶಕ್ತಿ ಎಂಬ ಪದ ಬಳಸಿ ರಾಹುಲ್ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುರಿ, "ಅವರು ಏನು ಹೇಳಿದರು ಎಂಬುದನ್ನು ನಾನು ನಿಖರವಾಗಿ ಓದಿದ್ದೇನೆ ಮತ್ತು ನಂತರ ನಾವು ಹೋಗಿ ವಿವರವಾದ ಪ್ರಸ್ತುತಿ ನೀಡಿದ್ದೇವೆ" ಎಂದಿದ್ದಾರೆ

ಶಕ್ತಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
ರಾಹುಲ್ ಗಾಂಧಿ
Follow us on

ದೆಹಲಿ ಮಾರ್ಚ್ 20: ಶಕ್ತಿ ವಿರುದ್ಧ ನಮ್ಮ ಹೋರಾಟ ಎಂಬ ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆ ಖಂಡಿಸಿರುವ ಬಿಜೆಪಿ (BJP) ಬುಧವಾರ ಕಾಂಗ್ರೆಸ್ ನಾಯಕನ ವಿರುದ್ಧ ಚುನಾವಣಾ ಆಯೋಗಕ್ಕೆ (Election Commission of India) ದೂರು ನೀಡಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಓದಿದ್ದೇನೆ.  ಚುನಾವಣಾ ಸಮಿತಿಯ ಮುಂದೆ ವಿವರವಾದ ಪ್ರಸ್ತುತಿಯನ್ನು ನೀಡಿದ್ದೇನೆ ಎಂದಿದ್ದಾರೆ.

ಭಾನುವಾರ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲಿ  ರಾಹುಲ್  ಗಾಂಧಿ, “ನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ. ನಾವು ನರೇಂದ್ರ ಮೋದಿ ವಿರುದ್ಧ ಹೋರಾಡುತ್ತಿಲ್ಲ, ಅಥವಾ ಒಬ್ಬ ವ್ಯಕ್ತಿಯ ವಿರುದ್ಧ ಹೋರಾಡುತ್ತಿಲ್ಲ. ಆದರೆ, ಒಂದು ಮುಖವನ್ನು ಮುಂಚೂಣಿಯಲ್ಲಿ ಬಿಂಬಿಸಲಾಗಿದೆ. ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ‘ಶಕ್ತಿ’ (ಅಧಿಕಾರ) ವಿರುದ್ಧ ಹೋರಾಡುತ್ತಿದ್ದೇವೆ. ಆ ‘ಶಕ್ತಿ’ ಯಾವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ’’ಎಂದು ಹೇಳಿದ್ದರು.

ಮಾಧ್ಯಮದವರೊಂದಿಗೆ ಪುರಿ ಮಾತು


ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುರಿ, “ಅವರು ಏನು ಹೇಳಿದರು ಎಂಬುದನ್ನು ನಾನು ನಿಖರವಾಗಿ ಓದಿದ್ದೇನೆ ಮತ್ತು ನಂತರ ನಾವು ಹೋಗಿ ವಿವರವಾದ ಪ್ರಸ್ತುತಿ ನೀಡಿದ್ದೇವೆ” ಎಂದಿದ್ದಾರೆ.“ಅವರು ಬಹಳಷ್ಟು ಜನರ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ. ಅವರು ‘ನಾರಿ ಶಕ್ತಿ’ಯನ್ನು ಅವಮಾನಿಸಿದ್ದಾರೆ ಎಂದಿದ್ದಾರೆ.

ರಾಹುಲ್ ಗಾಂಧಿಯವರ “ಶಕ್ತಿ”ಹೇಳಿಕೆಯನ್ನು ಟೀಕಿಸಿದ ಮೋದಿ “ಶಕ್ತಿ” ಅನ್ನು ನಾಶಮಾಡಲು ಹೊರಟವರು ಸ್ವತಃ ನಾಶವಾಗುತ್ತಾರೆ ಎಂದು ಹೇಳಿದ್ದಾರೆ. ಮಂಗಳವಾರ ತಮಿಳುನಾಡಿನ ಸೇಲಂನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಡಿಯಾ ಬಣದ ಘಟಕಗಳು ಯಾವುದೇ ನಂಬಿಕೆಯ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡುವುದಿಲ್ಲ, ಆದರೆ ಹಿಂದೂ ಧರ್ಮವನ್ನು ನಿಂದಿಸದೇ ಇರುವುದಿಲ್ಲ.

INDI ಅಲಯನ್ಸ್ ಜನರು ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಾರೆ. ಅವರು ಹಿಂದೂ ಧರ್ಮದ ವಿರುದ್ಧ ಮಾಡುವ ಪ್ರತಿಯೊಂದು ಹೇಳಿಕೆಯು ಯೋಚಿಸಿಯೇ ಮಾಡಿದ್ದು! ಡಿಎಂಕೆ ಮತ್ತು ಕಾಂಗ್ರೆಸ್‌ನ  ಇಂಡಿಯಾ ಮೈತ್ರಿಯು ಬೇರೆ ಯಾವುದೇ ಧರ್ಮವನ್ನು ಅವಮಾನಿಸುವುದಿಲ್ಲ. ಬೇರೆ ಯಾವುದೇ ಧರ್ಮದ ವಿರುದ್ಧ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ. ಆದರೆ, ಹಿಂದೂ ಧರ್ಮದ ವಿಷಯಕ್ಕೆ ಬಂದಾಗ, ಅವರು ಅದನ್ನು ನಿಂದಿಸಲು ಮತ್ತು ಅವಮಾನಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ; ಕಲ್ಲು ತೂರಾಟ

ತಾನು ಯಾವುದೇ ಧಾರ್ಮಿಕ ಶಕ್ತಿಯ ಬಗ್ಗೆ ಮಾತನಾಡಿಲ್ಲ. ಆದರೆ ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ‘ಶಕ್ತಿ’ಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಗಾಂಧಿ ಸೋಮವಾರ ಸ್ಪಷ್ಟಪಡಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 pm, Wed, 20 March 24