ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ; ಕಲ್ಲು ತೂರಾಟ

ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ಗುಹಾ ಅವರು ಬಿಜೆಪಿ ಕಾರ್ಯಕರ್ತರನ್ನು ಥಳಿಸುವುದಕ್ಕೆ ಮುಂದಾಳತ್ವ ವಹಿಸಿದ್ದರು. ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು ಎಂದು ಪರಮಾಣಿಕ್ ಆರೋಪಿಸಿದ್ದಾರೆ. ಆರೋಪಗಳನ್ನು "ಆಧಾರರಹಿತ" ಎಂದು ತಳ್ಳಿಹಾಕಿದ ಗುಹಾ, ಟಿಎಂಸಿಯ ರ‍್ಯಾಲಿ ಸ್ಥಳಕ್ಕೆ ಬಿಜೆಪಿ ಬೆಂಬಲಿಗರು ಕಲ್ಲು ಎಸೆದಿದ್ದಾರೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ; ಕಲ್ಲು ತೂರಾಟ
ಪಶ್ಚಿಮ ಬಂಗಾಳದಲ್ಲಿ ಘರ್ಷಣೆ
Follow us
ರಶ್ಮಿ ಕಲ್ಲಕಟ್ಟ
|

Updated on: Mar 20, 2024 | 4:47 PM

ಕೊಲ್ಕತ್ತಾ ಮಾರ್ಚ್ 20: ಮಂಗಳವಾರ ಸಂಜೆ ಪಶ್ಚಿಮ ಬಂಗಾಳದ (West Bengal) ಕೂಚ್ ಬೆಹಾರ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ (BJP) ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ. ಕೇಂದ್ರ ಗೃಹ ರಾಜ್ಯ ಸಚಿವ ನಿಸಿತ್ ಪರಮಾಣಿಕ್ (Nisith Paramanik) ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ರಾಜ್ಯ ಸಚಿವ ಉದಯನ್ ಗುಹಾ (Udayan Guha) ನೇತೃತ್ವದ ರ‍್ಯಾಲಿ ಶುರುವಾಗುವುದಕ್ಕಿಂತ ಮುನ್ನ ಈ ಘಟನೆ ನಡೆದಿದೆ. ರಾತ್ರಿ 8.30ರ ಸುಮಾರಿಗೆ ದಿನ್ಹತಾ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆಸಿದ ಎರಡು ಕಡೆಯವರನ್ನು ತಡೆಯಲು ಮಧ್ಯಪ್ರವೇಶಿಸಿದಾಗ ಉಪವಿಭಾಗದ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಹಿಂಸಾಚಾರದಲ್ಲಿ ಹಲವಾರು ಅಂಗಡಿಗಳಿಗೂ ಹಾನಿಯಾಗಿದೆ. ಏಳು ಹಂತದ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಪಶ್ಚಿಮ ಬಂಗಾಳದಲ್ಲಿ ಪ್ರತಿಸ್ಪರ್ಧಿ ಪಕ್ಷಗಳ ಬೆಂಬಲಿಗರ ನಡುವೆ ಇದು ಮೊದಲ ಘರ್ಷಣೆಯಾಗಿದೆ ಎಂದು ವರದಿಯಾಗಿದೆ. ಘಟನೆಯ ನಂತರ, ತೃಣಮೂಲ ಕಾಂಗ್ರೆಸ್ ಇಂದು ದಿನ್ಹತಾದಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ.

ದಿನ್ಹತಾದಲ್ಲಿ ಏನಾಯಿತು?

ಸ್ಥಳೀಯ ಬಿಜೆಪಿ ಸಂಸದ ಪರಮಾಣಿಕ್ ಸಭೆಯಲ್ಲಿ ಭಾಗವಹಿಸಿ ಹೊರ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿ ಟಿಎಂಸಿ ಸಭೆ ನಡೆಸಲು ಸಹ ನಿರ್ಧರಿಸಲಾಗಿತ್ತು. ಅವರ ಬೆಂಗಾವಲು ಪಡೆ ಪ್ರದೇಶದಿಂದ ಹೊರಡುವಾಗ ಟಿಎಂಸಿಯ ರ್ಯಾಲಿಯ ಸ್ಥಳದಿಂದ ಕಲ್ಲು ತೂರಲಾಯಿತು ಎಂದು ಪರಮಾಣಿಕ್ ಹೇಳಿದ್ದಾರೆ. “ಕಾರ್ಯಕ್ರಮ ಮುಗಿದ ನಂತರ ನಾನು ಅಲ್ಲಿಂದ ಹೊರಡುತ್ತಿದ್ದೆ. ಇದ್ದಕ್ಕಿದ್ದಂತೆ ಟಿಎಂಸಿ ಬೆಂಬಲಿಗರು ನಮ್ಮ ಮೇಲೆ ಕಲ್ಲು ತೂರಿದರು. ಹಾಗಾಗಿ ಟಿಎಂಸಿ ಕಾರ್ಯಕರ್ತರ ಈ ಪ್ರಜಾಸತ್ತಾತ್ಮಕವಲ್ಲದ ಮತ್ತು ಹಿಂಸಾತ್ಮಕ ನಡವಳಿಕೆಯ ವಿರುದ್ಧ ಪ್ರತಿಭಟಿಸಲು ನಾನು ಇಳಿಯಬೇಕಾಯಿತು ಎಂದು ಅವರು ಬಂಗಾಳಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವರು ಹೇಳಿದ್ದಾರೆ.

ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ಗುಹಾ ಅವರು ಬಿಜೆಪಿ ಕಾರ್ಯಕರ್ತರನ್ನು ಥಳಿಸುವುದಕ್ಕೆ ಮುಂದಾಳತ್ವ ವಹಿಸಿದ್ದರು. ಅವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು ಎಂದು ಪರಮಾಣಿಕ್ ಆರೋಪಿಸಿದ್ದಾರೆ.  ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದ ಗುಹಾ, ಟಿಎಂಸಿಯ ರ‍್ಯಾಲಿ ಸ್ಥಳಕ್ಕೆ ಬಿಜೆಪಿ ಬೆಂಬಲಿಗರು ಕಲ್ಲು ಎಸೆದಿದ್ದಾರೆ ಎಂದು ಹೇಳಿದ್ದಾರೆ.

ನಿಸಿತ್ ಪರಮಾಣಿಕ್ ಅವರ ಬೆಂಗಾವಲು ಪಡೆಯ ಜನರು ನಮ್ಮ ಮೇಲೆ ಕಲ್ಲು ತೂರಿದರು. ನಮ್ಮ ಮೇಲೆ ಬಾಣಗಳನ್ನು ಪ್ರಯೋಗಿಸಿದರು. ನಮ್ಮ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕೇಂದ್ರ ಸಚಿವರೇ ತಮ್ಮ ಬೆಂಬಲಿಗರನ್ನು ನಮ್ಮ ಮೇಲೆ ದಾಳಿ ಮಾಡಲು ಪ್ರಚೋದಿಸುತ್ತಿದ್ದಾರೆ ಎಂದು ಗುಹಾ ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಟಿಎಂಸಿ ಪ್ರಚಾರ ಮಾಡದಂತೆ ಬಿಜೆಪಿ ತಡೆಯಲು ಯತ್ನಿಸುತ್ತಿದೆ ಎಂದು ಗುಹಾ ಆರೋಪಿಸಿದ್ದಾರೆ.

ಇದನ್ನೂ ಓದಿ: UPSC Prelims Exam 2024 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎಸ್​​ಸಿ ಪ್ರಿಲಿಮಿನರಿ ಪರೀಕ್ಷೆ ಮುಂದೂಡಿಕೆ

ಟಿಎಂಸಿ ಮೇಲೆ ಬಿಜೆಪಿ ದಾಳಿ

ಘಟನೆಯ ನಂತರ, ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ದಿನ್ಹತಾದಲ್ಲಿ ನಡೆದ ಘಟನೆಯನ್ನು ‘ರಾಜ್ಯ ಪ್ರಾಯೋಜಿತ ಅಪರಾಧ ಸಂಕೇತ’ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ಘಟನೆಯ ವಿಡಿಯೊವನ್ನು ಹಂಚಿಕೊಂಡ ಅವರು “ಟಿಎಂಸಿ ಗೂಂಡಾಗಳು ಕೇಂದ್ರ ಸಚಿವ ಮತ್ತು ಬಿಜೆಪಿಯ ಕೂಚ್‌ಬೆಹಾರ್ ಅಭ್ಯರ್ಥಿ ನಿಶಿತ್ ಪರಮಾಣಿಕ್ ಮೇಲೆ ದಾಳಿ ಮಾಡಿದ್ದಾರೆ. ಅವರ ಬೆಂಗಾವಲು ಪಡೆಯಲ್ಲಿರುವ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಮಮತಾ ಬ್ಯಾನರ್ಜಿಯವರ ಕ್ಯಾಬಿನೆಟ್‌ನಲ್ಲಿ ಸಚಿವರಾದ ಉದಯನ್ ಗುಹಾ ಅವರು ಸಶಸ್ತ್ರ ಅಪರಾಧಿಗಳ ಗ್ಯಾಂಗ್ ಅನ್ನು ಮುನ್ನಡೆಸುತ್ತಾರೆ. ಈ ರೀತಿಯ ರಾಜ್ಯ ಪ್ರಾಯೋಜಿತ ಅಪರಾಧವು ಕಾನೂನು ಸುವ್ಯವಸ್ಥೆಯ ಸಂಪೂರ್ಣ ಸ್ಥಗಿತವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ವರದಿ ಕೇಳಿದ ರಾಜ್ಯಪಾಲರು

ಪರಮಾಣಿಕ್ ಮತ್ತು ಗುಹಾ ನಡುವಿನ ವಾಗ್ವಾದ ಮತ್ತು ಘರ್ಷಣೆಯ ಕುರಿತು ವರದಿಯ ಸತ್ಯಾಸತ್ಯತೆ ಕುರಿತು ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಿಂದ ವರದಿ ಕೇಳಿದ್ದಾರೆ ಎಂದು ರಾಜಭವನ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ