Rakesh Tikait: ರಾಕೇಶ್ ಟಿಕಾಯತ್, ಯುದ್ಧ್ವೀರ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಮಸಿ ಬಳಿದ ವ್ಯಕ್ತಿಗೆ ಥಳಿತ
ಕೋಡಿಹಳ್ಳಿ ಚಂದ್ರಶೇಖರ್ ಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದ ವೇಳೆ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿಯಲಾಯಿತು.
ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ (Rakesh Tikait) ಮತ್ತು ಯುದ್ಧ್ವೀರ್ ಸಿಂಗ್ (Yudhvir Singh) ಮೇಲೆ ಕಪ್ಪು ಮಸಿ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್ ಮತ್ತು ಯುದ್ಧ್ವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಲಾಗಿದೆ. ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಿರುವಾಗ ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಲಾಗಿದೆ. ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ಮತ್ತು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿದ್ದಂತೆ ಕೆಲವರು ವಾಗ್ವಾದಕ್ಕಿಳಿದು ಮಸಿ ಎರಚಿದ್ದಾರೆ. ನಂತರ ಅಲ್ಲಿದ್ದ ಕುರ್ಚಿಗಳನ್ನು ಎಳೆದು ಬಿಸಾಡಿದ್ದಾರೆ. ರೈತ ನಾಯಕ ಚಂದ್ರಶೇಖರ್ ಅವರ ಬೆಂಬಲಿಗರು ಈ ಕೃತ್ಯವೆಸಗಿದ್ದಾರೆ ಎಂದು ಟಿಕಾಯತ್ ಆರೋಪಿಸಿರುವುದಾಗಿ ‘ಟೈಮ್ಸ್ ನೌ’ ವರದಿ ಮಾಡಿದೆ.
ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಚರ್ಚೆ ನಡೆಸಲು ನಗರದ ಗಾಂಧಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ರಾಕೇಶ್ ಟಿಕಾಯತ್ ಮೇಲೆ ಮೈಕ್ನಿಂದ ಹಲ್ಲೆ ನಡೆಸಿದ್ದು, ಮಸಿ ಬಳಿದಿದ್ದಾನೆ. ನಂತರ ಸಭೆಯಲ್ಲಿ ನೆರೆದಿದ್ದ ಇತರರು ಆತನನ್ನು ಹಿಡಿದು, ಕುರ್ಚಿಗಳಿಂದಲೇ ಥಳಿಸಿದರು. ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಮಹಿಳೆಯರು ಭಯಗೊಂಡು ಕಿರುಚಿದರು.
ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಿದ ನಂತರ ಸಭೆಯಲ್ಲಿ ಹೊಡೆದಾಟ ನಡೆಯಿತು. Link: https://t.co/FWSflCS4uh#RakeshTikait #YuddvirSingh #FarmersAssociation pic.twitter.com/9IassHRTt5
— TV9 Kannada (@tv9kannada) May 30, 2022
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ರಾಕೇಶ್ ಟಿಕಾಯತ್ ಮುಂಚೂಣಿಯಲ್ಲಿದ್ದರು. ನಂತರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯೇ ಜಯಗಳಿಸಿತು. ಕೋಡಿಹಳ್ಳಿ ಚಂದ್ರಶೇಖರ್ ಮತ್ತು ರಾಕೇಶ್ ಟಿಕಾಯತ್ ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡಿದ್ದರು. ಕೋಡಿಹಳ್ಳಿ ಚಂದ್ರಶೇಖರ್ ಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದ ವೇಳೆ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿಯಲಾಯಿತು.
#WATCH Black ink thrown at Bhartiya Kisan Union leader Rakesh Tikait at an event in Bengaluru, Karnataka pic.twitter.com/HCmXGU7XtT
— ANI (@ANI) May 30, 2022
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯತ್, ‘ಇಂಥ ಘಟನೆ ನಡೆಯಬಾರದಿತ್ತು. ಪೊಲೀಸರು ಭದ್ರತೆ ಒದಗಿಸಿರಲಿಲ್ಲ. ಸರ್ಕಾರವು ಈ ಘಟನೆಯಲ್ಲಿ ಶಾಮೀಲಾಗಿದೆ’ ಎಂದು ಹೇಳಿದರು. ಪರಸ್ಪರ ಹೊಡೆದಾಟಕ್ಕೆ ಮುಂದಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
Published On - 1:45 pm, Mon, 30 May 22