ಶ್ರೀನಗರ: ಕಾಶ್ಮೀರದ ಬದ್ಗಾಮ್ನಲ್ಲಿ ಗುರುವಾರ ಮಧ್ಯಾಹ್ನ ಕಂದಾಯ ಇಲಾಖೆಯ ಕಚೇರಿ ಮೇಲೆ ದಾಳಿ ಮಾಡಿದ್ದ ಉಗ್ರರು ಕಾಶ್ಮೀರಿ ಪಂಡಿತ್ ಸಮುದಾಯದ 36 ವರ್ಷದ ಸರ್ಕಾರಿ ನೌಕರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಸುರಕ್ಷತೆಗೆ ಆಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಿನ್ನೆ ಸಂಜೆಯಿಂದ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಗುಂಪು ಶ್ರೀನಗರ ವಿಮಾನ ನಿಲ್ದಾಣದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.
ಹಲವಾರು ಪ್ರದೇಶಗಳಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ಸದಸ್ಯರು ರಸ್ತೆಗಳನ್ನು ತಡೆದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. 2010ರಲ್ಲಿ ಬಿಡುಗಡೆಯಾದ ವಿಶೇಷ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳನ್ನು ನೀಡಿದ ನಂತರ 4 ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರದ ವಿವಿಧ ಭಾಗಗಳಲ್ಲಿ ಟ್ರಾನ್ಸಿಟ್ ಕ್ಯಾಂಪ್‌ಗಳಲ್ಲಿ ವಾಸಿಸುತ್ತಿದ್ದಾರೆ.
ನಿನ್ನೆಯ ಕಾಶ್ಮೀರಿ ಪಂಡಿತನ ಹತ್ಯೆಯಿಂದ ಕೋಪಗೊಂಡ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿರುದ್ಧವೂ ಘೋಷಣೆಗಳನ್ನು ಕೂಗಿದರು. ಹಲವೆಡೆ ಕ್ಯಾಂಡಲ್‌ಲೈಟ್ ಮೆರವಣಿಗೆಯೂ ನಡೆಯಿತು. “ನಾವು ಈ ನಾಚಿಕೆಗೇಡಿನ ಘಟನೆಯನ್ನು ಖಂಡಿಸುತ್ತೇವೆ. ನಾವು ಸರ್ಕಾರವನ್ನು ಕೇಳುತ್ತೇವೆ, ಇದು ಪುನರ್ವಸತಿಯೇ? ಅವರು ನಮ್ಮನ್ನು ಇಲ್ಲಿಗೆ ಕೊಲ್ಲಲೆಂದೇ ಕರೆತಂದಿರಾ? ಇಲ್ಲಿ ನಮಗೆ ಯಾವುದೇ ಭದ್ರತೆ ಇಲ್ಲ,” ಎಂದು ಪ್ರತಿಭಟನಾಕಾರ ರಂಜನ್ ಜುಟ್ಶಿ ಹೇಳಿದ್ದಾರೆ.
ಮತ್ತೊಬ್ಬ ಪ್ರತಿಭಟನಾಕಾರರು “ನಾವು ಕೆಲಸ ಮಾಡಲು ಬಂದಿದ್ದೇವೆ, ನಮಗೆ ಬೇರೆ ಯಾವುದಕ್ಕೂ ಸಂಬಂಧವಿಲ್ಲ, ಅವರು ನಮ್ಮನ್ನು ಏಕೆ ಕೊಲ್ಲುತ್ತಿದ್ದಾರೆ? ನಮ್ಮ ಅಪರಾಧ ಏನು ಎಂದು ನಮಗೆ ತಿಳಿಸಿ? ಇಲ್ಲಿನ ಆಡಳಿತ ವಿಫಲವಾಗಿದೆ” ಎಂದು ಹೇಳಿದ್ದಾರೆ.
ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ವಿಶೇಷ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡ ನಂತರ 36 ವರ್ಷದ ರಾಹುಲ್ ಭಟ್ ಕಳೆದ 10 ವರ್ಷಗಳಿಂದ ಬದ್ಗಾಮ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಜಮ್ಮುವಿಗೆ ಕೊಂಡೊಯ್ಯಲಾಯಿತು. ಕಳೆದ ಆರು ತಿಂಗಳಲ್ಲಿ ಹತ್ಯೆಯಾದ ಮೂರನೇ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಆಗಿದ್ದಾರೆ. ನಿನ್ನೆಯ ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ .
ಗುರುವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ನೌಕರನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತ್ನನ್ನು ನಂತರ ಶ್ರೀನಗರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ‘ಕಾಶ್ಮೀರ ಟೈಗರ್ಸ್’ ಉಗ್ರಗಾಮಿ ಸಂಘಟನೆ ತಾವೇ ಈ ದಾಳಿಯನ್ನು ನಡೆಸಿದ್ದಾಗಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Fri, 13 May 22