
ನವದೆಹಲಿ, ಮೇ 18: ಭಾರತದ ಗಡಿ ರಕ್ಷಣೆ ವಿಷಯಕ್ಕೆ ಬಂದರೆ ಇತ್ತೀಚಿನವರೆಗೂ ಪಾಕಿಸ್ತಾನ ಮತ್ತು ಚೀನಾದಿಂದ ಅಪಾಯ ಇತ್ತು. ಈಗ ಬಾಂಗ್ಲಾದೇಶವೂ ಕೂಡ ಈಗ ಭಾರತದ ವಿರುದ್ಧ ತೊಡೆ ತಟ್ಟಲು ಆರಂಭಿಸಿದೆ. ಹಂಗಾಮಿಯಾಗಿ ಬಾಂಗ್ಲಾದೇಶ ಸರ್ಕಾರ ನಡೆಸುತ್ತಿರುವ ಯೂನುಸ್ ಅವರು ಬಹಿರಂಗವಾಗಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲ, ಚೀನಾ, ಪಾಕಿಸ್ತಾನದೊಂದಿಗೆ ಹತ್ತಿರವಾಗುತ್ತಿದ್ದಾರೆ. ಈಶಾನ್ಯ ಭಾರತವನ್ನು ಭಾರತದಿಂದ ಸುಲಭವಾಗಿ ತುಂಡರಿಸುವ ಬಗ್ಗೆ ಮಾತನಾಡುತ್ತಿದ್ಧಾರೆ. ಆಪರೇಷನ್ ಸಿಂದೂರವಾದ (Operation Sindoor) ಬಳಿಕವೂ ಅವರು ಈ ಮಾತನ್ನು ಉಚ್ಚರಿಸಿರುವುದುಂಟು. ಇದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿ ಎನ್ನುತ್ತಾರೆ ಪರಿಣಿತರು.
ನಿತ್ಯ ಶತ್ರು ಎನಿಸಿರುವ ಪಾಕಿಸ್ತಾನವನ್ನು ಭಾರತ ಸಾಕಷ್ಟು ಅಳೆದು ತೂಗಿದೆ. ಆದರೆ, ಚೀನಾ ವಿಷಯದಲ್ಲಿ ಹಾಗಿಲ್ಲ. ಹೀಗಾಗಿ, ರಿಸ್ಕ್ ತೆಗೆದುಕೊಳ್ಳುವ ಮಾತೇ ಬರುವುದಿಲ್ಲ. ಚೀನಾ ಯಾವಾಗ ಡೋಕ್ಲಾಮ್ನಲ್ಲಿ, ಮತ್ತು ಲಡಾಕ್ನಲ್ಲಿ ಕಿತಾಪತಿ ಮಾಡಿತೋ, ಭಾರತ ತನ್ನ ಉತ್ತರ ದಿಕ್ಕಿನ ಶತ್ರುವಿನ ಕಡೆ ಗಂಭೀರವಾಗಿ ಕಣ್ಣಿಟ್ಟಿರುವುದು ಹೌದು.
ಭಾರತದ ಭೂಪಟ ಗಮನಿಸಿ ನೋಡಿ. ಇಲ್ಲಿ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಿಗೆ ಕೊಂಡಿಯಾಗಿ ಒಂದು ಸಣ್ಣ ತುಂಡನ್ನು ಕಾಣಬಹುದು. ಇದುವೇ ಸಿಲಿಗುರಿ ಕಾರಿಡಾರ್. ಇದು 20-22 ಕಿಮೀ ಅಗಲ ಇದೆ. ಇದರ ಸುತ್ತಮುತ್ತ ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ದೇಶಗಳಿವೆ. ಇಲ್ಲಿ ಅಪಾಯ ಇರುವುದು ಬಾಂಗ್ಲಾದೇಶದಿಂದ. ಈ ಸಿಲಿಗುರಿ ಕಾರಿಡಾರ್ ಅನ್ನು ಚಿಕನ್ ನೆಕ್ (Chicken’s neck) ಎಂದೂ ಕರೆಯಲಾಗುತ್ತದೆ. ಅಂದರೆ, ಕೋಳಿಯ ಕತ್ತಿನಂತೆ ಇದು ಸಣ್ಣದಿರುವುದರಿಂದ ಕತ್ತರಿಸುವುದು ಸುಲಭ.
ಇದನ್ನೂ ಓದಿ: ಬಾಂಗ್ಲಾದೇಶದ ಸರಕುಗಳ ಆಮದನ್ನು ಬಿಗಿಗೊಳಿಸಿದ ಭಾರತ
ಪಾಕಿಸ್ತಾನದಂತೆ ಈಗ ಬಾಂಗ್ಲಾದೇಶ ಕೂಡ ಚೀನಾದ ಕೈಗೊಂಬೆಯಂತಾಗಿದೆ. ಬಾಂಗ್ಲಾದೇಶದ ಉತ್ತರ ಭಾಗದಲ್ಲಿ ಇರುವ ಲಾಲ್ಮೋನಿರಹತ್ ಜಿಲ್ಲೆಯಲ್ಲಿ ಚೀನಾಗೆ ಒಂದು ವಾಯುನೆಲೆ ಸ್ಥಾಪಿಸಲು ಬಾಂಗ್ಲಾ ಅನುಮತಿಸಬಹುದು. ಹೀಗಾದಲ್ಲಿ ಚಿಕನ್ ನೆಕ್ ಎನ್ನಲಾಗುವ ಸಿಲಿಗುರಿ ಕಾರಿಡಾರ್ ಅನ್ನು ಸುಲಭವಾಗಿ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಇರುತ್ತದೆ.
ಸಿಲಿಗುರಿ ಕಾರಿಡಾರ್ ಮೇಲೆ ದಾಳಿ ಮಾಡಲು ಚೀನಾಗೆ ಮೂರು ಮಾರ್ಗಗಳಿವೆ. ಒಂದು, ನೇಪಾಳವನ್ನು ಬಳಸಿಕೊಳ್ಳುವುದು. ಇನ್ನೊಂದು, ಬಾಂಗ್ಲಾದೇಶವನ್ನು ಬಳಸಿಕೊಳ್ಳುವುದು. ಮತ್ತೊಂದು, ಭೂತಾನ್-ಸಿಕ್ಕಿಂ-ಚೀನಾ ಗಡಿಯಲ್ಲಿರುವ ಡೋಕ್ಲಾಂ ಪ್ರದೇಶದ ಮೂಲಕ ಆಕ್ರಮಿಸುವುದು.
ಭಾರತದ ಸೇನೆಗೆ ಈ ಅಪಾಯವು ಡೋಕ್ಲಾಮ್ ಸಂಘರ್ಷವಾದಾಗಲೇ ಸ್ಪಷ್ಟವಾಗಿ ಗೊತ್ತಾಗಿದೆ. ಸ್ವಲ್ಪ ಯಾಮಾರಿದರೂ ಕ್ಷಿಪ್ರವಾಗಿ ಚಿಕನ್ ನೆಕ್ ಅನ್ನು ಶತ್ರುಗಳು ಕತ್ತರಿಸಿಬಿಡಬಹುದು. ಹೀಗಾದಲ್ಲಿ ಇಡೀ ಈಶಾನ್ಯ ಭಾರತವೇ ಭಾರತದ ಕೈತಪ್ಪಿಹೋಗಿಬಿಡಬಹುದು.
ಸಿಲಿಗುರಿ ಕಾರಿಡಾರ್ ಬಳಿ ಭಾರತವು ರಷ್ಯಾ ನಿರ್ಮಿತ ಎಸ್-400 ಡಿಫೆನ್ಸ್ ಸಿಸ್ಟಂ ಅನ್ನು ಅಳವಡಿಸಿದೆ. ಇದು ಎಂಥ ಪವರ್ಫುಲ್ ಎಂಬುದನ್ನು ಆಪರೇಷನ್ ಸಿಂದೂರದಲ್ಲಿ ನೋಡಿದ್ದೇವೆ. 400 ಕಿಮೀ ದೂರದಲ್ಲೇ ಶತ್ರುಗಳ ವಿಮಾನ ಮತ್ತು ಕ್ಷಿಪಣಿಗಳನ್ನು ಪತ್ತೆ ಮಾಡಿ ಹೊಡೆದು ಬಿಸಾಡುವ ಸಾಮರ್ಥ್ಯ ಇದಕ್ಕಿದೆ. ಇದರ ಜೊತೆಗೆ ಆಕಾಶ್ ಡಿಫೆನ್ಸ್ ಸಿಸ್ಟಂಕೂಡ ಇದೆ. ಇದು ಕಡಿಮೆ ಅಂತರದಲ್ಲಿ ಸಿಗುವ ಗುರಿಗಳನ್ನು ನಾಶ ಮಾಡಬಲ್ಲುದು.
ಇದನ್ನೂ ಓದಿ: ಟರ್ಕಿಯ ಕಡುವೈರಿ ದೇಶದ ಮಿಲಿಟರಿಗೆ ಭಾರತದ ರುದ್ರಂ ಕ್ಷಿಪಣಿಗಳ ಮೇಲೆ ಆಸಕ್ತಿ
ಇಲ್ಲಿಗೆ ಸಮೀಪ ಇರುವ ಹಷಿಮಾರ ವಾಯುನೆಲೆಗೆ ರಫೇಲ್ ಜೆಟ್ಗಳನ್ನು ನಿಯೋಜಿಸಲಾಗುತ್ತಿದೆ. ಈ ಜೆಟ್ಗಳ ಬತ್ತಳಿಕೆಯಲ್ಲಿ ಮಿಟಿಯಾರ್, ಸ್ಕಾಲ್ಪ್ ಮಿಸೈಲ್ಗಳಿರುತ್ತವೆ. ಶತ್ರುಗಳ ರಾಡಾರ್ ಮತ್ತು ಕಮ್ಯುನಿಕೇಶನ್ ಸಿಗ್ನಲ್ಗಳನ್ನು ಮಂಕುಗೊಳಿಸುವ ಸುಧಾರಿತ ಎಲೆಕ್ಟ್ರಾನಿಕ್ ಸಿಸ್ಟಂ ಈ ರಫೇಲ್ ಜೆಟ್ನಲ್ಲಿ ಇದೆ.
ಮಿಟಿಯಾರ್ ಮತ್ತು ಸ್ಕಾಲ್ಪ್ ಮಿಸೈಲ್ ಮಾತ್ರವಲ್ಲ, ಇಲ್ಲಿ ಬ್ರಹ್ಮೋಸ್ ಕ್ಷಿಪಣಿ ಯೂನಿಟ್ ಅನ್ನು ನಿಯೋಜಿಸಲಾಗುತ್ತಿದೆ. ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ ವಾಯುನೆಲೆಗಳನ್ನು ಈ ಬ್ರಹ್ಮೋಸ್ ಕ್ಷಿಪಣಿಗಳು ಚಿಂದಿ ಉಡಾಯಿಸಿದ್ದನ್ನು ನೆನಪಿಸಿಕೊಳ್ಳಿ. ಇದು ವಿಶ್ವದ ಯಾವುದೇ ರಕ್ಷಣಾ ವ್ಯವಸ್ಥೆಯನ್ನೂ ಭೇದಿಸಿ ಶತ್ರು ಪ್ರದೇಶದ ಯಾವುದೇ ಟಾರ್ಗೆಟ್ ಅನ್ನು ಗುದ್ದಬಲ್ಲ ತಾಕತ್ತು ಹೊಂದಿದೆ.
ಇದನ್ನೂ ಓದಿ: ಪಾಕಿಸ್ತಾನದ ಮುಖವನ್ನು ಜಗತ್ತಿನೆದುರು ಬಯಲು ಮಾಡುತ್ತೇನೆ; ಅಸಾದುದ್ದೀನ್ ಓವೈಸಿ
ಸಿಲಿಗುರಿ ಕಾರಿಡಾರ್ನಲ್ಲಿ ನೆಲದಿಂದ ನಿಂತು ರಕ್ಷಣೆ ಮಾಡಲು ತ್ರಿಶಕ್ತಿ ಕಾರ್ಪ್ಸ್ ಎನ್ನುವ ಪಡೆಯನ್ನು ಕಟ್ಟಲಾಗಿದೆ. ಭೂಸೇನೆಯ ವಿವಿಧ ವಿಭಾಗಗಳ ಮಧ್ಯೆ ಸಮನ್ವಯ ಅಥವಾ ಹೊಂದಾಣಿಕೆ ತರಲು ತ್ರಿಶಕ್ತಿಯ ಪಾತ್ರ ಬಹಳ ಮುಖ್ಯ. ಟಿ-90 ಭೀಷ್ಮಾ ಎನ್ನುವ ಬಲಿಷ್ಠ ಯುದ್ಧ ಟ್ಯಾಂಕ್ಗಳು, ಸಾಕಷ್ಟು ಸಂಖ್ಯೆಯಲ್ಲಿ ಮದ್ದುಗುಂಡುಗಳು, ಗನ್ಗಳು ಇತ್ಯಾದಿಗಳನ್ನು ಈ ಪಡೆಗಳು ಹೊಂದಿರುತ್ತವೆ.
ತ್ರಿಶಕ್ತಿ ಕಾರ್ಪ್ಸ್ ಜೊತೆಗೆ ಬ್ರಹ್ಮಾಸ್ತ್ರ ಕಾರ್ಪ್ಸ್ ಎನ್ನುವ ವಿಶೇಷ ಪಡೆಯೂ ಇದೆ. ಇದು ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಆಗಿದೆ. ಅಂದರೆ, ಗುಡ್ಡಗಾಡು ಪ್ರದೇಶಗಳನ್ನು ಬಳಸಿ ಶತ್ರುಗಳ ಮೇಲೆ ಪ್ರಹಾರ ಮಾಡುವ ಪರಿಣಿತಿ ಇರುತ್ತದೆ. ಚೀನಾದ ಎಲ್ಎಸಿ ಗಡಿಯಲ್ಲಿ ಮಿಂಚಿನ ವೇಗದಲ್ಲಿ ಈ ಪಡೆಗಳು ದಾಳಿ ಮಾಡಿ ಶತ್ರುಗಳ ಮೇಲೆ ಆಘಾತ ಎಸಗಲು ಸಮರ್ಥವಾಗಿರುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Sun, 18 May 25