Agnipath: ಅಗ್ನಿಪಥ್ ಯೋಜನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ 35 ವಾಟ್ಸಾಪ್ ಗ್ರೂಪ್ಗಳನ್ನು ಬ್ಯಾನ್ ಮಾಡಿದ ಕೇಂದ್ರ
ಅಗ್ನಿಪಥ್ ಯೋಜನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆ ಕೇಂದ್ರ ಸರ್ಕಾರ 35 ವಾಟ್ಸಾಪ್ ಗ್ರೂಪ್ಗಳನ್ನು ನಿಷೇಧಿಸಿದೆ.
ನವದೆಹಲಿ: ಅಗ್ನಿಪಥ್ (Agnipath) ಯೋಜನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆ ಕೇಂದ್ರ ಸರ್ಕಾರ (Central Government) 35 ವಾಟ್ಸಾಪ್ (WhatsApp) ಗ್ರೂಪ್ಗಳನ್ನು ನಿಷೇಧಿಸಿದೆ. ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಮತ್ತು ಪ್ರತಿಭಟನೆಗಳನ್ನು ಆಯೋಜಿಸಿದ್ದಕ್ಕಾಗಿ ಹತ್ತು ಜನರನ್ನು ಸಹ ಬಂಧಿಸಲಾಗಿದೆ. ಯೋಜನೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ವಾಟ್ಸಾಪ್ ಗ್ರೂಪ್ಗಳು ಕಂಡು ಬಂದರೆ, ಕೇಂದ್ರ ಸರ್ಕಾರ ನಾಗರಿಕರಿಗೆ ಪಿಐಬಿ (PIB) ಫ್ಯಾಕ್ಟ್ ಚೆಕ್ ಟೀಮ್ ಗೆ ವರದಿ ಮಾಡುವಂತೆ 8799711259 ಸಂಖ್ಯೆ ನೀಡಿದೆ.
ಏನಿದು ಅಗ್ನಿಪಥ್ ಯೋಜನೆ? ಇಲ್ಲಿದೆ ಮಾಹಿತಿ
ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡರೆ 4 ವರ್ಷ ಮಾತ್ರ ಸೇವೆಗೆ ಅವಕಾಶ ಸಿಗಲಿದೆ. 17 ವರ್ಷದಿಂದ 23 ವರ್ಷದೊಳಗಿನವರು ಅಗ್ನಿ ಪಥ ಯೋಜನೆಯಡಿ ಸೇನೆ ಸೇರಬಹುದು. ಕನಿಷ್ಠ ಹತ್ತನೇ ತರಗತಿ ಪಾಸಾಗಿದ್ದರೂ ಸೇನೆಗೆ ಸೇರಲು ಅವಕಾಶ ಇದೆ. ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷ ಪೂರೈಸಿದ ಬಳಿಕ ಸೇನೆ ಕೆಲಸ ಬಿಟ್ಟು ಬರಬೇಕು. ಅಗ್ನಿ ಪಥ ಯೋಜನೆಯಡಿ ಸೇವೆ ಸಲ್ಲಿಸಿದ ಶೇ.25ರಷ್ಟು ಮಂದಿಗೆ ಮಾತ್ರ ಸೇನೆಯಲ್ಲಿ ರೆಗ್ಯುಲರ್ ಆಗಿ ನೌಕರಿ ನೀಡಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಸೇನೆಯಲ್ಲಿ ಖಾಯಂ ನೌಕರಿ ಸಿಗಲ್ಲ. ಅಗ್ನಿ ಪಥ ಯೋಜನೆಯಿಂದ ಇಷ್ಟು ವರ್ಷಗಳ ಕಾಲ ಮಾಡುತ್ತಿದ್ದ ಸೈನಿಕರ ನೇಮಕಾತಿ ಸಂಖ್ಯೆ ಕಡಿತವಾಗಲಿದೆ.
ಭಾರತದಲ್ಲಿ 2032ರ ವೇಳೆಗೆ ಸೇನೆಯಲ್ಲಿ ಶೇ. 50ರಷ್ಟು ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಅಗ್ನಿವೀರರ ಕಾರ್ಯನಿರ್ವಹಣೆ ಮಾಡುವ ಲೆಕ್ಕಾಚಾರ ಇದೆ. ಇನ್ನೂ 90 ದಿನಗಳಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವರ್ಷ 45 ಸಾವಿರ ಮಂದಿ ಅಗ್ನಿಪಥ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಅಗ್ನಿಪಥ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಅಗ್ನಿವೀರರಿಗೆ ಪ್ರಾರಂಭದಲ್ಲಿ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದರೇ, ಉತ್ತಮ ಕೌಶಲ್ಯದ ತರಬೇತಿ ಸಿಗಲಿದೆ. ಹೀಗಾಗಿ, ಅಗ್ನಿ ಪಥ ಯೋಜನೆಯ ಸೇವೆ ಸಲ್ಲಿಸಿ, ಸೇನೆಯಿಂದ ಹೊರ ಬಂದ ಬಳಿಕ ಬೇರೆ ಉದ್ಯೋಗಾವಕಾಶಗಳು ಸಿಗುತ್ತವೆ. ಬೇರೆ ಉದ್ಯೋಗಾವಕಾಶಗಳಲ್ಲಿ ಸೇನೆಯಲ್ಲಿ ತರಬೇತಿ ಪಡೆದ ಅಗ್ನಿವೀರರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಸೇನೆಯಿಂದ ಹೊರ ಬಂದ ಬಳಿಕ ಕೌಶಲ್ಯಯುತ ಯುವಕರಾಗಿರುತ್ತಾರೆ. ಕೇಂದ್ರದ ಗೃಹ ಇಲಾಖೆಯ ಉದ್ಯೋಗದಲ್ಲಿ ಅಗ್ನಿ ವೀರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತೆ ಎಂದು ಕೇಂದ್ರದ ಗೃಹ ಇಲಾಖೆ ಹೇಳಿದೆ.
ಕೇಂದ್ರೀಯ ಪೊಲೀಸ್ ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತೆದೆ ಇದೇ ರೀತಿ ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯ ಸರ್ಕಾರದಿಂದಲೂ ಪೊಲೀಸ್ ನೇಮಕಾತಿಯಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಮೂರು ರಾಜ್ಯ ಸರ್ಕಾರಗಳು ಹೇಳಿವೆ. ಅಗ್ನಿವೀರರು ಅಗ್ನಿಪಥ ಯೋಜನೆಗೆ ಆಯ್ಕೆಯಾದ ಬಳಿಕ ಶಿಕ್ಷಣ ಮುಂದುವರಿಸಲು ಕೂಡ ಅವಕಾಶ ಮಾಡಿಕೊಡಲು ಕೇಂದ್ರದ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಅಗ್ನಿವೀರರಿಗೆ ಕೌಶಲ್ಯಯುತ ಶಿಕ್ಷಣ ಪಡೆಯಲು ಇಗ್ನೋ ದಿಂದ ಪದವಿ ಕೋರ್ಸ್ ಆರಂಭಿಸುವುದಾಗಿ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:56 pm, Sun, 19 June 22