ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಶೀಲನೆಗೆ ರಮೇಶ್ ಚಂದ್ ನೇತೃತ್ವದಲ್ಲಿ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಶೀಲನೆಗೆ ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಇದು ಎಂಎಸ್‌ಪಿ ಹಾಗೂ ಕಬ್ಬಿನ ತೂಕದ ಸಮಸ್ಯೆಗಳ ಕುರಿತು ಶಿಫಾರಸು ಮಾಡಲಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮಾಹಿತಿ ನೀಡಿದ್ದು, ಸಮಿತಿಯ ಸದಸ್ಯರಾಗಿ ಯಾರ್ಯಾರು ಇರಲಿದ್ದಾರೆ ಎಂದೂ ತಿಳಿಸಿದೆ.

ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಶೀಲನೆಗೆ ರಮೇಶ್ ಚಂದ್ ನೇತೃತ್ವದಲ್ಲಿ ಸಮಿತಿ ರಚಿಸಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 14, 2026 | 7:01 PM

ನವದೆಹಲಿ, ಅಕ್ಟೋಬರ್​​ 14: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದಿರುವ ನಡುವೆ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಕಬ್ಬು ಬೆಳೆಗಾರರು ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಆದೇಶಿಸಿದೆ.

ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಲೆ ಹೆಚ್ಚಿಸುವ ಬೇಡಿಕೆಯನ್ನು ಸಮಿತಿ ಪರಿಶೀಲಿಸಲಿದೆ. ಇದಕ್ಕಾಗಿ ಕೃಷಿ ಉತ್ಪಾದನಾ ವೆಚ್ಚ ಮತ್ತು ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಲಿದೆ. ಅಲ್ಲದೆ, ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯಲ್ಲಿ ಸಿಗುವ ಆದಾಯ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಕಾರ್ಖಾನೆ ಮಟ್ಟದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಪರಿಷ್ಕರಿಸುವ ಬೇಡಿಕೆಯನ್ನೂ ಪರಿಶೀಲಿಸಲಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವ ಪದ್ಧತಿಗಳ ಜೊತೆಗೆ ತೂಕದ ಯಂತ್ರಗಳ ಮಾಪನಾಂಕ ನಿರ್ಣಯ, ತಪಾಸಣೆ ಮತ್ತು ಪರಿಶೀಲನಾ ವ್ಯವಸ್ಥೆಗಳು ಸಮರ್ಪಕವಾಗಿವೆಯೇ ಎಂಬುದನ್ನೂ ಅವಲೋಕಿಸಲಿದೆ.

ಇದನ್ನೂ ಓದಿ: ಎಂಎಸ್​ಪಿ, ಎಫ್​ಆರ್​ಪಿ ಹೆಚ್ಚಳಕ್ಕೆ ಕಬ್ಬು ಬೆಳೆಗಾರರ ಪಟ್ಟು: ರಾಜ್ಯಾದ್ಯಂತ ಬೀದಿಗಿಳಿದ ರೈತರು, ಹೆದ್ದಾರಿ ತಡೆದು ಉಗ್ರ ಹೋರಾಟ

ಯಂತ್ರಗಳ ಮೂಲಕ ಕೊಯ್ಲು ಮಾಡಿದ ಕಬ್ಬಿನ ತೂಕದಲ್ಲಿ ಪ್ರಸ್ತುತ ಯಾವ ರೀತಿಯ ಕಡಿತಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ಯಾಂತ್ರೀಕೃತ ಕೊಯ್ಲಿನಿಂದ ನಿಜವಾಗಿಯೂ ಯಾವುದೇ ನಷ್ಟ ಉಂಟಾಗುತ್ತಿದೆಯೇ ಎಂಬುದನ್ನು ಸಮಿತಿ ಅಂದಾಜಿಸಲಿದೆ. ಪ್ರಸ್ತುತ ಪದ್ಧತಿಗಳಿಂದ ರೈತರಿಗೆ ಪಾವತಿಸುವ ಕಬ್ಬಿನ ಬೆಲೆಯ ಮೇಲೆ ಆಗುತ್ತಿರುವ ಆರ್ಥಿಕ ಪರಿಣಾಮವನ್ನೂ ಮೌಲ್ಯಮಾಪನ ಮಾಡಲಿದೆ. ಸಮಿತಿಯು ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಸಂಘಟನೆಗಳು, ರಾಜ್ಯ ಸರ್ಕಾರಗಳು ಹಾಗೂ ಅಗತ್ಯವೆಂದು ಪರಿಗಣಿಸುವ ತಜ್ಞರು ಮತ್ತು ಇತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮಾಹಿತಿ ನೀಡಿದೆ.

ಸಮಿತಿಯಲ್ಲಿ ಯಾರ್ಯಾರಿಗೆ ಸ್ಥಾನ?

ಸಮಿತಿಯ ಅಧ್ಯಕ್ಷರಾದ ಪ್ರೊ. ರಮೇಶ್ ಚಂದ್ ಅವರು ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞರು ಮತ್ತು ಸಾರ್ವಜನಿಕ ನೀತಿ ತಜ್ಞರಾಗಿದ್ದು, ಅವರು 2015ರಿಂದ 2026ರವರೆಗೆ ನೀತಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ICAR-NIAP ನಿರ್ದೇಶಕರಾಗಿ ಹಾಗೂ 15ನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃಷಿ ಅಭಿವೃದ್ಧಿ, ರೈತರ ಸಮಸ್ಯೆಗಳು, ಆಹಾರ ಭದ್ರತೆ, ಕೃಷಿ ಮಾರುಕಟ್ಟೆಗಳು ಮತ್ತು ಬೆಲೆ ನೀತಿ ಕ್ಷೇತ್ರಗಳಲ್ಲಿ ಅವರಿಗೆ ಅಪಾರ ಪರಿಣತಿ ಇದೆ. ಇವರ ಜೊತೆಗೆ ಸಮಿತಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಆಯುಕ್ತರು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಜಂಟಿ ಕಾರ್ಯದರ್ಶಿ (ಸಕ್ಕರೆ) ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ (ಕಾನೂನು ಮಾಪನಶಾಸ್ತ್ರ) ಸದಸ್ಯರಾಗಿರುತ್ತಾರೆ ಎಂದೂ ಸಚಿವಾಲಯ ಹೇಳಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:01 pm, Wed, 14 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us