AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಎಸ್​ಪಿ, ಎಫ್​ಆರ್​ಪಿ ಹೆಚ್ಚಳಕ್ಕೆ ಕಬ್ಬು ಬೆಳೆಗಾರರ ಪಟ್ಟು: ರಾಜ್ಯಾದ್ಯಂತ ಬೀದಿಗಿಳಿದ ರೈತರು, ಹೆದ್ದಾರಿ ತಡೆದು ಉಗ್ರ ಹೋರಾಟ

ಸಕ್ಕರೆಗೆ ಎಂಎಸ್‌ಪಿ ಹೆಚ್ಚಳ ಹಾಗೂ ಕಬ್ಬಿನ ಎಫ್‌ಆರ್‌ಪಿ ಏರಿಕೆಗೆ ಆಗ್ರಹಿಸಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಮಂಡ್ಯ, ಹಾವೇರಿ, ಕೊಪ್ಪಳ ಮತ್ತು ಧಾರವಾಡದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.

ಎಂಎಸ್​ಪಿ, ಎಫ್​ಆರ್​ಪಿ ಹೆಚ್ಚಳಕ್ಕೆ ಕಬ್ಬು ಬೆಳೆಗಾರರ ಪಟ್ಟು: ರಾಜ್ಯಾದ್ಯಂತ ಬೀದಿಗಿಳಿದ ರೈತರು, ಹೆದ್ದಾರಿ ತಡೆದು ಉಗ್ರ ಹೋರಾಟ
ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ವೃತ್ತದ ಬಳಿ ರೈತರು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.Image Credit source: tv9
ಗಣಪತಿ ಶರ್ಮಾ
|

Updated on: Oct 13, 2026 | 2:09 PM

Share

ಮುಖ್ಯಾಂಶಗಳು

  • ಕಬ್ಬಿಗೆ ಸೂಕ್ತ ದರಕ್ಕೆ ರೈತರ ರಾಜ್ಯವ್ಯಾಪಿ ಹೋರಾಟ
  • ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ತಡೆ
  • ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಜೋಶಿ ಮನವಿ

ಬೆಂಗಳೂರು, ಅಕ್ಟೋಬರ್ 13: ಕಬ್ಬಿಗೆ ನ್ಯಾಯಯುತ ದರ (ಎಫ್​ಆರ್​ಪಿ) ನಿಗದಿ ಹಾಗೂ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಆಗ್ರಹಿಸಿ ಮಂಗಳವಾರ ರಾಜ್ಯದ ವಿವಿಧೆಡೆ ಕಬ್ಬು ಬೆಳೆಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹುಬ್ಬಳ್ಳಿ, ಬೆಳಗಾವಿ, ಮಂಡ್ಯ, ಹಾವೇರಿ, ಕೊಪ್ಪಳ ಮತ್ತು ಧಾರವಾಡ ಸೇರಿದಂತೆ ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ರೈತರು ಸಕ್ಕರೆಗೆ ಎಂಎಸ್‌ಪಿ ದರವನ್ನು 60 ರೂಪಾಯಿ ಹೆಚ್ಚಿಸಬೇಕು ಹಾಗೂ ಕಬ್ಬಿನ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (FRP) ಏರಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪುಣೆ–ಬೆಂಗಳೂರು ಹೆದ್ದಾರಿ ಬಂದ್

ಹುಬ್ಬಳ್ಳಿಯಲ್ಲಿ ರೈತರು ಗಬ್ಬೂರು ಬೈಪಾಸ್ ವೃತ್ತದ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕಲ್ಲು, ಕಟ್ಟಿಗೆ ಹಾಗೂ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿ ಇಟ್ಟು ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ಪ್ರತಿಭಟನೆ

ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ಕಬ್ಬು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಹಿರೇಬಾಗೇವಾಡಿ ಟೋಲ್ ಬಳಿ ರೈತರು ಹೆದ್ದಾರಿಯಲ್ಲಿ ಉರುಳು ಸೇವೆ ನಡೆಸಿ, ಕೈಯಲ್ಲಿ ಪೊರಕೆ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತ ಮುಖಂಡ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನೂರಾರು ರೈತರು ಟೋಲ್ ಗೇಟ್ ಬಂದ್ ಮಾಡಿ, ಹಸಿರು ಶಾಲು ಬೀಸುತ್ತಾ ಧರಣಿ ನಡೆಸಿದರು.

ಇದೇ ವೇಳೆ ಎತ್ತು ಮತ್ತು ಎತ್ತಿನ ಬಂಡಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಬಾರಕೋಲು ಬೀಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ರೈತ ಮುಖಂಡರು, ವಾಹನಗಳಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಹಳೆ ಹೆದ್ದಾರಿ ತಡೆ

ಸಕ್ಕರೆ ನಾಡು ಮಂಡ್ಯದಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ಜೋರಾಗಿತ್ತು. ಸಂಜಯ್ ವೃತ್ತದಲ್ಲಿ ಹಳೆ ಬೆಂಗಳೂರು–ಮೈಸೂರು ಹೆದ್ದಾರಿಯನ್ನು ತಡೆದ ರಾಜ್ಯ ರೈತ ಸಂಘ ಮತ್ತು ಕನ್ನಡ ಸೇನೆ ಸಂಘಟನೆಗಳ ಕಾರ್ಯಕರ್ತರು, ರಸ್ತೆಯ ಮಧ್ಯೆ ಧರಣಿ ಕುಳಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಹಾವೇರಿ, ಕೊಪ್ಪಳ, ಧಾರವಾಡದಲ್ಲೂ ರೈತರ ಆಕ್ರೋಶ

ಹಾವೇರಿ ಜಿಲ್ಲೆಯ ಬಂಕಾಪುರ ಟೋಲ್ ಗೇಟ್ ಬಳಿ ರೈತರು ಪ್ರತಿಭಟನೆ ನಡೆಸಿದರು. ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಬಳಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರೈತ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಧಾರವಾಡ ತಾಲೂಕಿನ ತೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ-4 ಅನ್ನು ಬಂದ್ ಮಾಡಿದ ರೈತರು, ಕಬ್ಬಿಗೆ ಶೀಘ್ರ ದರ ನಿಗದಿ ಮಾಡುವಂತೆ ಒತ್ತಾಯಿಸಿದರು. ಧಾರವಾಡ ಹೊರವಲಯದ ಯರಿಕೊಪ್ಪ ಬಳಿಯೂ ಹೆದ್ದಾರಿ ತಡೆ ನಡೆಸಲಾಯಿತು. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಪ್ರಲ್ಹಾದ್ ಜೋಶಿ ನಿವಾಸಕ್ಕೆ ಭದ್ರತೆ

ಹುಬ್ಬಳ್ಳಿಯಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದ ಬಳಿ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು. ಈ ನಡುವೆ, ಕಬ್ಬಿಗೆ ಎಂಎಸ್‌ಪಿ ನಿಗದಿಗೆ ಆಗ್ರಹಿಸಿ ನಡೆಯುತ್ತಿರುವ ಹೆದ್ದಾರಿ ತಡೆ ಪ್ರತಿಭಟನೆಗಳನ್ನು ಕೈಬಿಟ್ಟು ಮಾತುಕತೆಗೆ ಮುಂದಾಗುವಂತೆ ಜೋಶಿ ರೈತರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ: ಪ್ರತಿಭಟನೆ ನಿಲ್ಲಿಸುವಂತೆ ಪ್ರಲ್ಹಾದ್ ಜೋಶಿ ಮನವಿ

ಸರ್ಕಾರ ರೈತರ ಪರವಾಗಿದ್ದು, ಉದ್ವೇಗಕ್ಕೆ ಒಳಗಾಗದೆ ಪ್ರತಿಭಟನೆ ಕೈಬಿಡಬೇಕು ಎಂದು ಅವರು ವಿನಂತಿಸಿದರು. ರಾಜ್ಯ ಆಡಳಿತ ಬೆಲೆ (SAP) ನಿಗದಿ, ಕಬ್ಬಿನ ತೂಕದಲ್ಲಿ ಆಗುವ ಮೋಸ ಹಾಗೂ ರಿಕವರಿ ರೇಟ್ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಎಥೆನಾಲ್ ಬ್ಲೆಂಡಿಂಗ್ ಪ್ರಮಾಣವನ್ನು ಶೇ 1.5ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದ ಜೋಶಿ, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು. ರಸ್ತೆ ತಡೆ ಮಾಡುವ ಬದಲು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ