ಎಲ್‌ಎಸಿಯಲ್ಲಿ ಚೀನಾ ಸೇನಾ ನಿಯೋಜನೆ ಇಳಿಕೆ, ಆದರೂ ಬೆದರಿಕೆ ತಪ್ಪಿಲ್ಲ: ರಕ್ಷಣಾ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಎಚ್ಚರಿಕೆ

ರಕ್ಷಣಾ ವರದಿ ಪ್ರಕಾರ, ಎಲ್‌ಎಸಿಯಲ್ಲಿ ಚೀನಾ ಸೇನಾ ನಿಯೋಜನೆ ಇಳಿದಿದೆ, ಆದರೆ ಮಿಲಿಟರಿ ಬೆದರಿಕೆ ಇನ್ನೂ ಇದೆ. ಮೂಲಸೌಕರ್ಯ ಬಲದಿಂದ ಚೀನಾ ಕ್ಷಿಪ್ರ ನಿಯೋಜನೆಗೆ ಸಿದ್ಧ. ರಾಜತಾಂತ್ರಿಕ ಮಾತುಕತೆಗಳಿಂದ ಉದ್ವಿಗ್ನತೆ ತಗ್ಗಿದ್ದರೂ, ಭಾರತ ಗಡಿಯಲ್ಲಿ ಸದಾ ಸರ್ವಸನ್ನದ್ಧವಾಗಿದೆ. ಮುಧ್-ನ್ಯೋಮಾ ವಾಯುನೆಲೆ ಹಾಗೂ ಗಡಿ ರಸ್ತೆಗಳು ಭಾರತದ ಸನ್ನದ್ಧತೆಯನ್ನು ಹೆಚ್ಚಿಸಿವೆ. ಸದಾ ಜಾಗರೂಕತೆ ಅತ್ಯಗತ್ಯ.

ಎಲ್‌ಎಸಿಯಲ್ಲಿ ಚೀನಾ ಸೇನಾ ನಿಯೋಜನೆ ಇಳಿಕೆ, ಆದರೂ ಬೆದರಿಕೆ ತಪ್ಪಿಲ್ಲ: ರಕ್ಷಣಾ ಸಚಿವಾಲಯದ ವಾರ್ಷಿಕ ವರದಿಯಲ್ಲಿ  ಎಚ್ಚರಿಕೆ
ಪಿಎಲ್​ಎ
Image Credit source: Asia Maritimes transparent Initiative

Updated on: Sep 14, 2026 | 10:32 AM

ನವದೆಹಲಿ, ಸೆಪ್ಟೆಂಬರ್ 14: ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನ ಸೇನಾ ನಿಯೋಜನೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಆದರೆ, ಇದರಿಂದ ಚೀನಾದ ಮಿಲಿಟರಿ ಬೆದರಿಕೆ ಸಂಪೂರ್ಣವಾಗಿ ದೂರವಾಗಿದೆ ಎಂದರ್ಥವಲ್ಲ ಎಂದು ರಕ್ಷಣಾ ಸಚಿವಾಲಯದ 2025-26ರ ವಾರ್ಷಿಕ ವರದಿ ಎಚ್ಚರಿಸಿದೆ. ಗಡಿಯಲ್ಲಿ ಚೀನಾ ಈಗಲೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮೂಲಸೌಕರ್ಯವನ್ನು ಕಾಪಾಡಿಕೊಂಡಿರುವುದರಿಂದ ಭಾರತೀಯ ಪಡೆಗಳು ಎಲ್‌ಎಸಿಯ ಎಲ್ಲಾ ವಲಯಗಳಲ್ಲಿ ಸರ್ವಸನ್ನದ್ಧತೆಯನ್ನು ಕಾಯ್ದುಕೊಂಡಿವೆ.

10 ಬ್ರಿಗೇಡ್‌ಗಳ ಕಡಿತ: ಗಡಿ ಹಾಗೂ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದ ಚೀನಾದ ಸುಮಾರು 10 ಸಂಯೋಜಿತ-ಶಸ್ತ್ರಾಸ್ತ್ರ ಬ್ರಿಗೇಡ್‌ಗಳನ್ನು ಕಡಿಮೆ ಮಾಡಲಾಗಿದೆ. ಒಂದು ಬ್ರಿಗೇಡ್‌ನಲ್ಲಿ ಸರಾಸರಿ 5 ಸಾವಿರ ಯೋಧರಿರುತ್ತಾರೆ. ಆದಾಗ್ಯೂ, ಇದು ಕೇವಲ ಎಲ್‌ಎಸಿಯ ಮುಂಚೂಣಿ ನೆಲೆಗಳಿಂದಾದ ಕಡಿತವಲ್ಲ, ಹಿಂಭಾಗದ ತರಬೇತಿ ನೆಲೆಗಳನ್ನೂ ಒಳಗೊಂಡಿದೆ.

ಮೂಲಸೌಕರ್ಯ ಬಲವೇ ಚೀನಾಕ್ಕೆ ಶಕ್ತಿ: ಚೀನಾದ ಕಡೆಗೆ ಟಿಬೆಟ್ ಪ್ರಸ್ಥಭೂಮಿ ಸಮತಟ್ಟಾಗಿರುವುದರಿಂದ, ಪಡೆಗಳನ್ನು ಮತ್ತು ಯುದ್ಧ ಟ್ಯಾಂಕ್‌ಗಳನ್ನು ಕೆಲವೇ ಗಂಟೆಗಳಲ್ಲಿ ಗಡಿಗೆ ಮರಳಿ ತರುವ ಸಾಮರ್ಥ್ಯ ಚೀನಾಕ್ಕಿದೆ. ಜೊತೆಗೆ ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಅದು ಗಡಿಯಲ್ಲೇ ಸಜ್ಜಾಗಿಟ್ಟಿದೆ.

ಮತ್ತಷ್ಟು ಓದಿ: ಚೀನಾವನ್ನು ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದ ಭಾರತ ಮಹಿಳಾ ಹಾಕಿ ತಂಡ

ರಾಜತಾಂತ್ರಿಕ ಮಾತುಕತೆಯ ಫಲ: ಅಕ್ಟೋಬರ್ 2024 ರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ನಡೆದ ಮೂರು ಮಹತ್ವದ ಸಭೆಗಳು ಹಾಗೂ ಆಗಸ್ಟ್ 2026 ರಲ್ಲಿ ಬೀಜಿಂಗ್‌ನಲ್ಲಿ ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರ ಭೇಟಿಯ ನಂತರ ಉದ್ವಿಗ್ನತೆ ತಗ್ಗಿದೆ.

ಭಾರತದ ಗಡಿ ಸಿದ್ಧತೆ: ಚೀನಾದ ಯಾವುದೇ ಅನಿರೀಕ್ಷಿತ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಸಮತೋಲಿತ ನಿಯೋಜನೆಯನ್ನು ಮುಂದುವರಿಸಿದೆ.

ಮುಧ್-ನ್ಯೋಮಾ ವಾಯುನೆಲೆ ಸನ್ನದ್ಧ: ಪೂರ್ವ ಲಡಾಖ್‌ನಲ್ಲಿ ಸಮುದ್ರ ಮಟ್ಟದಿಂದ ಬರೋಬ್ಬರಿ 13,700 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಮುಧ್-ನ್ಯೋಮಾ ವಾಯುನೆಲೆಯು ಸಂಪೂರ್ಣ ಕಾರ್ಯಾಚರಣೆಗೆ ಬಂದಿದೆ. ಇದು ವಿಶ್ವದ ಅತಿ ಎತ್ತರದ ವಾಯುನೆಲೆಗಳಲ್ಲಿ ಒಂದಾಗಿದ್ದು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ತುರ್ತು ನಿಯೋಜನೆಗೆ ಭಾರತೀಯ ವಾಯುಪಡೆಗೆ (IAF) ಅಗಾಧ ಶಕ್ತಿ ತಂದಿದೆ.

ಗಡಿ ರಸ್ತೆಗಳ ಸಂಸ್ಥೆಯು ಎಲ್ಲಾ ಹವಾಮಾನದಲ್ಲೂ ಸುಲಭವಾಗಿ ಸಂಚರಿಸಬಹುದಾದ ಬೃಹತ್ ಸುರಂಗ ಮಾರ್ಗಗಳು, ಆಯಕಟ್ಟಿನ ಸೇತುವೆಗಳು ಮತ್ತು ಹೆದ್ದಾರಿಗಳ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇದು ಹಿಮಪಾತದ ಸಮಯದಲ್ಲೂ ಮುಂಚೂಣಿ ನೆಲೆಗಳಿಗೆ ಶಸ್ತ್ರಾಸ್ತ್ರ ಮತ್ತು ಸೇನಾ ತುಕಡಿಗಳನ್ನು ಕ್ಷಿಪ್ರವಾಗಿ ರವಾನಿಸಲು ನೆರವಾಗಲಿದೆ.

ವರದಿಯ ಒಟ್ಟಾರೆ ಸಂದೇಶ: ಚೀನಾ ಸೇನೆಯ ಸಂಖ್ಯೆ ಕಡಿಮೆಯಾಗಿದ್ದರೂ ಅವರ ಶಸ್ತ್ರಾಸ್ತ್ರ ಸನ್ನದ್ಧತೆಯಲ್ಲಿ ಇಳಿಕೆಯಾಗಿಲ್ಲ. ಹೀಗಾಗಿ ಮಾತುಕತೆಗಳ ಮೂಲಕ ಶಾಂತಿ ಕಾಪಾಡಿಕೊಳ್ಳುತ್ತಲೇ, ಗಡಿಯಲ್ಲಿ ಯಾವುದೇ ಕಾರಣಕ್ಕೂ ಕಣ್ಗಾವಲು ಸಡಿಲಿಸಬಾರದು ಎಂಬುದು ರಕ್ಷಣಾ ಇಲಾಖೆಯ ಸ್ಪಷ್ಟ ನಿಲುವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us