ನ್ಯಾಯಾಂಗವನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಆವರಣಕ್ಕೆ ಮೆರವಣಿಗೆ ತಂದ ರಾಹುಲ್ ಗಾಂಧಿಗೆ ಸಿಜೆಐ ಸೂರ್ಯ ಕಾಂತ್ ಖಡಕ್ ಎಚ್ಚರಿಕೆ

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ರಾಹುಲ್ ಗಾಂಧಿ ನೇತೃತ್ವದ ಇಂಡಿ ಮೈತ್ರಿಕೂಟ ಸುಪ್ರೀಂ ಕೋರ್ಟ್ ಆವರಣಕ್ಕೆ ರಾಜಕೀಯ ಮೆರವಣಿಗೆ ನಡೆಸಿದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗವನ್ನು ಯಾರೂ ಬೆದರಿಸಲು ಅಥವಾ ಸೋಲಿಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ, ಭದ್ರತಾ ಉಲ್ಲಂಘನೆ ಬಗ್ಗೆ ಸಿಸಿಟಿವಿ ಸಂರಕ್ಷಣೆಗೆ ಆದೇಶಿಸಿದ್ದಾರೆ.

ನ್ಯಾಯಾಂಗವನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಆವರಣಕ್ಕೆ ಮೆರವಣಿಗೆ ತಂದ ರಾಹುಲ್ ಗಾಂಧಿಗೆ ಸಿಜೆಐ ಸೂರ್ಯ ಕಾಂತ್ ಖಡಕ್ ಎಚ್ಚರಿಕೆ
ರಾಹುಲ್
Image Credit source: PTI

Updated on: Oct 15, 2026 | 1:56 PM

ನವದೆಹಲಿ, ಅಕ್ಟೋಬರ್ 15: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ವಿರೋಧಿಸಿ ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಆವರಣಕ್ಕೆ ರಾಜಕೀಯ ಮೆರವಣಿಗೆ ನಡೆಸಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿ’ ಬಣದ ನಾಯಕರ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿಸೂರ್ಯ ಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗವನ್ನು ಯಾರೂ ಸೋಲಿಸಲು ಅಥವಾ ಬೆದರಿಸಲು ಸಾಧ್ಯವಿಲ್ಲಎಂದು ಕಟುವಾಗಿ ಎಚ್ಚರಿಸಿದ ಸಿಜೆಐ ನೇತೃತ್ವದ ಪೀಠ, ಅರ್ಜಿಯ ವಿಚಾರಣೆಗೆ ನೋಟಿಸ್ ನೀಡಿದ ಮಾತ್ರಕ್ಕೆ ರಾಜಕೀಯ ನಾಯಕರ ಈ ಅನುಚಿತ ವರ್ತನೆಯನ್ನು ನ್ಯಾಯಾಲಯ ಕ್ಷಮಿಸಿದೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲ ಗೌರವ್ ಭಾಟಿಯಾ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ನಡೆದ ಘಟನೆಯನ್ನು ಪ್ರಸ್ತಾಪಿಸಿದರು. ಸುಪ್ರೀಂಕೋರ್ಟ್​ ಸಂಕೀರ್ಣಕ್ಕೆ ರಾಜಕೀಯ ಮೆರವಣಿಗೆ ನುಗ್ಗಿಸುವುದು, ನೂರಾರು ಕಾರ್ಯಕರ್ತರೊಂದಿಗೆ ಘೋಷಣೆ ಕೂಗಿ ಒತ್ತಡ ಹೇರುವುದು ಸಂಪೂರ್ಣ ಸ್ವೀಕಾರಾರ್ಹವಲ್ಲದ ನಡವಳಿಕೆ ಎಂದು ಆಕ್ಷೇಪಿಸಿದರು.

ಸೋಮವಾರದ ಪ್ರತಿಭಟನೆಯ ವೇಳೆ ಸುಪ್ರೀಂ ಕೋರ್ಟ್ ಆವರಣ ಹಾಗೂ ಗೇಟ್‌ಗಳ ಬಳಿ ನಡೆದ ವಿದ್ಯಮಾನಗಳ ಸಂಪೂರ್ಣ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಭದ್ರವಾಗಿ ಸಂರಕ್ಷಿಸಿಡಬೇಕು ಎಂದು ರಿಜಿಸ್ಟ್ರಾರ್‌ಗೆ ಪೀಠ ಕಟ್ಟುನಿಟ್ಟಿನ ನಿರ್ದೇಶನ ನೀಡಿತು. ದೆಹಲಿಯಲ್ಲಿ ಎಸ್‌ಐಆರ್ ವಿರೋಧಿ ಪ್ರತಿಭಟನೆ ಆರಂಭಿಸುವ ಮುನ್ನ ರಾಹುಲ್ ಗಾಂಧಿ ಅವರು ಸಿಜೆಐ ಅವರನ್ನು ನೇರವಾಗಿ ಭೇಟಿಯಾಗಲು ಸಮಯ ಕೋರಿದ್ದರು. ಆದರೆ, ವಿವಾದವು ನ್ಯಾಯಾಂಗ ಪರಿಶೀಲನೆಗೆ ಒಳಪಡುವ ವಿಷಯವಾಗಿದ್ದು, ಆಡಳಿತಾತ್ಮಕವಾಗಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸೂಕ್ತ ಅರ್ಜಿ ಮೂಲಕ ನ್ಯಾಯಪೀಠವನ್ನೇ ಸಂಪರ್ಕಿಸಿ ಎಂದು ಹೇಳಿ ಸಿಜೆಐ ಆ ವಿನಂತಿಯನ್ನು ತಿರಸ್ಕರಿಸಿದ್ದರು.

ಮತ್ತಷ್ಟು ಓದಿ: ಮತದಾರರ ಹೆಸರು ಡಿಲೀಟ್ ವಿವಾದಕ್ಕೆ ಸುಪ್ರೀಂ ಟ್ವಿಸ್ಟ್: ಆಯೋಗದ ಪಾರದರ್ಶಕತೆ ಪ್ರಶ್ನಿಸಿದ್ದ ವಿಪಕ್ಷಗಳ ಹೋರಾಟಕ್ಕೆ ಮುನ್ನಡೆ, ಜ್ಞಾನೇಶ್ ಕುಮಾರ್‌ಗೆ ನೋಟಿಸ್

ಕೋರ್ಟ್‌ಗೆ ಮೆರವಣಿಗೆ: ಅಪಾಯಿಂಟ್‌ಮೆಂಟ್ ಸಿಗದ ಕಾರಣ ಸಿಟ್ಟಿಗೆದ್ದ ಇಂಡಿ ಬಣ, ಅಕ್ಟೋಬರ್ 12 ರಂದು ಬರಾಖಂಬಾ ರಸ್ತೆಯಿಂದ ಸುಪ್ರೀಂ ಕೋರ್ಟ್‌ವರೆಗೆ ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಪಾದಯಾತ್ರೆ ನಡೆಸಿ, ನ್ಯಾಯಾಲಯದ ಪ್ರವೇಶ ದ್ವಾರದ ಬಳಿ ಹೈಡ್ರಾಮಾ ಸೃಷ್ಟಿಸಿತ್ತು.

ಅರ್ಜಿಯಲ್ಲಿ ಇಂಡಿಯಾ ಬಣದ 10 ಪ್ರಮುಖ ಬೇಡಿಕೆಗಳು

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಸುಪ್ರಿಯಾ ಸುಳೆ, ಸಂಜಯ್ ರಾವತ್, ಸೌಗತ ರಾಯ್ ಸೇರಿದಂತೆ 11 ಪ್ರಮುಖ ನಾಯಕರು ಸಲ್ಲಿಸಿರುವ ಅರ್ಜಿಯಲ್ಲಿ ಒಟ್ಟು 10 ಪರಿಹಾರಗಳನ್ನು ಕೋರಲಾಗಿದೆ.

ಎಸ್​ಐಆರ್ ಪ್ರಕ್ರಿಯೆಯ ಎಲ್ಲಾ ಆಂತರಿಕ ಕಡತಗಳು ಮತ್ತು ಡಿಲೀಟ್ ಆದ ಮತದಾರರ ಪಟ್ಟಿಯನ್ನು ಕೋರ್ಟ್‌ಗೆ ಹಾಜರುಪಡಿಸುವುದು.

ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ತಕ್ಷಣದ ತಡೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತಾಂತ್ರಿಕ ಆಡಿಟ್.

ನಿಯಮ ಉಲ್ಲಂಘಿಸಿದ ಚುನಾವಣಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ.

ಮತದಾರರಿಗೆ ಮುಂಚಿತ ಲಿಖಿತ ನೋಟಿಸ್ ನೀಡದೆ ಹೆಸರು ಅಳಿಸುವುದನ್ನು ನಿಷೇಧಿಸುವುದು.

ಇತ್ತೀಚೆಗಷ್ಟೇ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ವಾಂಸರು ಭಾರತದ ನ್ಯಾಯಾಂಗ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಬೀದಿಗಿಳಿದು ತೇಜೋವಧೆ ಮಾಡುವುದನ್ನು ಖಂಡಿಸಿ ಬಹಿರಂಗ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೂಡ ರಾಜಕೀಯ ನಾಯಕರ ಈ ರೀತಿಯ ಶಕ್ತಿ ಪ್ರದರ್ಶನವನ್ನು ತರಾಟೆಗೆ ತೆಗೆದುಕೊಂಡಿರುವುದು ಪ್ರಸ್ತುತ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಕೋರ್ಟ್‌ನ ಮುಂದಿನ ಹೆಜ್ಜೆ: ಚುನಾವಣಾ ಆಯೋಗ ತನ್ನ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಿದ ನಂತರ ನ್ಯಾಯಾಲಯವು ಮಧ್ಯಂತರ ತಡೆಯ ಬಗ್ಗೆ ಆದೇಶ ನೀಡಲಿದ್ದು, ಅದೇ ವೇಳೆ ನ್ಯಾಯಾಲಯದ ಆವರಣದ ಭದ್ರತೆ ಉಲ್ಲಂಘಿಸಿದ ಕುರಿತಂತೆ ಪ್ರತ್ಯೇಕ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us