ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್​ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ

ಪ್ರತಿಭಟನಾಕಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರವು ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆದಿದೆ. ಸುಪ್ರೀಂ ಕೋರ್ಟ್​ನಲ್ಲಿ ಇಂದು ಈ ಪ್ರಕರಣದ ವಿಚಾರಣೆ ನಡೆಯುವ ವೇಳೆ ಸಿಜೆಪಿ ಸಿಜೆಐ ಎದುರು ತಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್ ಇದು ಒಳ್ಳೆಯ ನಿರ್ಧಾರ ಎಂದಿದ್ದಾರೆ.

ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್​ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ
Cjp Leaders
Image Credit source: PTI

Updated on: Sep 01, 2026 | 3:30 PM

ನವದೆಹಲಿ, ಸೆಪ್ಟೆಂಬರ್ 1: ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರದ್ದುಗೊಳಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಯಮಾಲಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಸಿಜೆಪಿ ವಕ್ತಾರ ಸೌರವ್ ದಾಸ್ ಅವರು ಪಕ್ಷದ ಹೇಳಿಕೆಯನ್ನು ಓದಿ, ಸೆ. 5ರ ಮೆರವಣಿಗೆಯನ್ನು ರದ್ದುಗೊಳಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಆಗಸ್ಟ್ 31ರಂದು ಈ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಕೋರಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ ಎಂದು ಪೀಠ ಹೇಳಿತ್ತು.

ಸಿಜೆಪಿ ಜಂಟಿ ಸಂಚಾಲಕ ಸೌರವ್ ದಾಸ್ ಈ ಬಗ್ಗೆ ಮಾತನಾಡಿದ್ದು, “ಭಾರತ ಸರ್ಕಾರದ ಭರವಸೆಗಳು, ನ್ಯಾಯಾಂಗದ ಪವಿತ್ರತೆ ಮತ್ತು ಈ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಸಿಜೆಪಿಯು ಸೆಪ್ಟೆಂಬರ್ 5ರ ಮೆರವಣಿಗೆಯನ್ನು ಹಿಂಪಡೆಯುವುದು ಸೂಕ್ತವೆಂದು ಭಾವಿಸುತ್ತದೆ” ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಮೆಚ್ಚುಗೆ:

ಈ ನಿರ್ಧಾರವನ್ನು ಮೆಚ್ಚಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, “ಎರಡೂ ಕಡೆಯವರು ಪರಸ್ಪರ ನಂಬಿಕೆಯನ್ನು ತೋರಿಸಿದರೆ, ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಬಹುದು. ಮುಕ್ತ ಮನಸ್ಸಿನಿಂದ ಚರ್ಚಿಸಿ ಪರಿಹರಿಸಲಾಗದಷ್ಟು ಕಷ್ಟಕರವಾದದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಮಾತಿಗೆ ತಪ್ಪಿದ ಕೇಂದ್ರ ಸರ್ಕಾರ; ಸೆ. 5ರಂದು ದೆಹಲಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಘೋಷಿಸಿದ ಸಿಜೆಪಿ

ಇಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಪರವಾಗಿ ಹಾಜರಾಗಿ, ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯ ಕುರಿತು ಪೀಠಕ್ಕೆ ವಿವರಿಸಿದರು. ದೆಹಲಿ ಪೊಲೀಸರ ಅರ್ಜಿಯನ್ನು ಉಲ್ಲೇಖಿಸಿದ ಅವರು, ಕ್ರಿಮಿನಲ್ ಹಿನ್ನೆಲೆಯಿರುವ 2,873 ವ್ಯಕ್ತಿಗಳ ವಿರುದ್ಧ ಹೊಸದಾಗಿ ಎಫ್‌ಐಆರ್ (FIR) ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಜೊತೆಗೆ ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳೂ ಈ ಕುರಿತು ಅರ್ಜಿ ಸಲ್ಲಿಸಿವೆ ಎಂದರು. ನಷ್ಟ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದ್ದು, ಅದರ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಅವರು ತಿಳಿಸಿದರು.

 

ಇದನ್ನೂ ಓದಿ: ಅಹಿತಕರ ಘಟನೆ ನಡೆಯುತ್ತದೆಂದು ಹೇಳಲಾಗದು; ಸೆ. 5ರ ಸಿಜೆಪಿ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

ಸಿಜೆಪಿಯ ಪ್ರತಿಭಟನೆಗೆ ಕಾರಣ:

ಜುಲೈನಲ್ಲಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿ ಸಿಜೆಪಿ ಈ ಮೆರವಣಿಗೆಗೆ ಕರೆ ನೀಡಿತ್ತು. ದೆಹಲಿ ಮತ್ತು ಇತರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಹಾಗೂ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಈ ಭರವಸೆಗಳು ಈಡೇರಿಲ್ಲ ಎಂದು ಸಿಜೆಪಿ ಆರೋಪಿಸಿತ್ತು. ಅಭಿಜಿತ್ ದೀಪ್ಕೆ ನೇತೃತ್ವದ ಸಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ನಂತರ ಈ ಮೆರವಣಿಗೆಯನ್ನು ಪ್ರಕಟಿಸಲಾಗಿತ್ತು ಮತ್ತು ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಇದರ ನೇತೃತ್ವ ವಹಿಸಬೇಕಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Tue, 1 September 26

Loading...
Unable to load recommendations.
Follow Us