ಮಗುವಿಗೆ ಜನ್ಮ ನೀಡಿದ 8ನೇ ಕ್ಲಾಸ್ ಬಾಲಕಿ; ಹಾಸ್ಟೆಲ್​ನಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದು ಹೇಗೆ?

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ 13 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯು ಬಾಲಕಿಯರ ಹಾಸ್ಟೆಲ್‌ನಲ್ಲಿ ಹುಡುಗಿಯರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಹಾಸ್ಟೆಲ್ ಆಡಳಿತವು ಕಠಿಣ ಕ್ರಮ ಕೈಗೊಂಡಿದೆ. ಹಾಸ್ಟೆಲ್‌ನ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ.

ಮಗುವಿಗೆ ಜನ್ಮ ನೀಡಿದ 8ನೇ ಕ್ಲಾಸ್ ಬಾಲಕಿ; ಹಾಸ್ಟೆಲ್​ನಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದು ಹೇಗೆ?
Crime News
Image Credit source: iStock

Updated on: Feb 02, 2026 | 7:43 PM

ನವದೆಹಲಿ, ಫೆಬ್ರವರಿ 2: ಆಕೆಗೆ ಕೇವಲ 13 ವರ್ಷ. ಓದುವ ಸಲುವಾಗಿ ಮನೆಯಲ್ಲಿ ಹಠ ಮಾಡಿ ಹಾಸ್ಟೆಲ್ ಸೇರಿದ್ದ ಆಕೆ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ತಮ್ಮ ಮಗಳು ಸರ್ಕಾರಿ ಹಾಸ್ಟೆಲ್​ನಲ್ಲಿ ಸುರಕ್ಷಿತಳಾಗಿದ್ದಾಳೆ ಎಂದು ಆಕೆಯ ಪೋಷಕರು ಕೂಡ ನಿರಾಳವಾಗಿದ್ದರು. ಆದರೆ, ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ತಿಳಿದು ಅವರ ಎದೆ ಒಡೆದುಹೋಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವನ್ನು ಹೆರಲು ಸಾಧ್ಯವಿಲ್ಲವೆಂದು ಆ ಮಗುವನ್ನು ಅಬಾರ್ಷನ್ ಮಾಡಿಸೋಣ ಎಂದು ಅವರು ನಿರ್ಧಾರ ಮಾಡುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಇನ್ನೇನು 3-4 ತಿಂಗಳಲ್ಲಿ ಡೆಲಿವರಿಯೇ ಆಗುತ್ತದೆ ಎಂದು ವೈದ್ಯರು ಹೇಳಿದ್ದರು. ಅಲ್ಲಿಯವರೆಗೂ ತಾನು ಗರ್ಭಿಣಿ (Pregnant) ಎಂಬ ವಿಷಯ ಆ ಬಾಲಕಿಗೂ ಗೊತ್ತಿರಲಿಲ್ಲ.

ಮಧ್ಯ ಪ್ರದೇಶದ ಬಾಲಘಾಟ್​​ನ ಸರ್ಕಾರಿ ಹಾಸ್ಟೆಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿತ್ತು. ಹಲವು ತಿಂಗಳುಗಳ ಕಾಲ ಆಕೆಯ ಮೇಲೆ ದೌರ್ಜನ್ಯ ನಡೆಸಿದ ಕಾಮುಕರು ಆಕೆಗೆ ಕೊಲೆ ಬೆದರಿಕೆ ಹಾಕಿದ್ದರು. ಆಕೆ ಗರ್ಭಿಣಿಯಾದ ನಂತರ ಈ ಘೋರ ಕೃತ್ಯ ಬಯಲಾಗಿತ್ತು. ಇದೀಗ ಆಕೆ ಮಗುವಿಗೂ ಜನ್ಮ ನೀಡಿದ್ದಾಳೆ.

ಹಾಸ್ಟೆಲ್​ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆದರೆ, ಆಕೆ ಈ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಆರೋಪಿಯು ಸುಮಾರು 4 ತಿಂಗಳ ಕಾಲ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಆತ ಆಕೆಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಇತ್ತೀಚೆಗೆ ಆ ಬಾಲಕಿಯ ಆರೋಗ್ಯ ಹದಗೆಟ್ಟಾಗ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ತಪಾಸಣೆ ಮಾಡಿದಾಗ ಆಕೆ 5 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತ್ತು. ಈ ಘಟನೆಯು ಖುರೈನಲ್ಲಿರುವ ಬುಡಕಟ್ಟು ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ. ವಿದ್ಯಾರ್ಥಿನಿಯನ್ನು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ!

ಆ ಬಾಲಕಿ 2 ವರ್ಷಗಳಿಂದ ಹಾಸ್ಟೆಲ್​ನಲ್ಲಿ ವಾಸವಾಗಿದ್ದಳು. ಆರೋಪಿಗಳು ಹಾಸ್ಟೆಲ್‌ಗೆ ತರಕಾರಿ ಕೊಡಲು ಬರುತ್ತಿದ್ದರು. ಅಲ್ತಾಫ್ ಎಂಬ ಯುವಕ ಹಾಸ್ಟೆಲ್‌ಗೆ ತರಕಾರಿ ನೀಡಲು ಬರುತ್ತಿದ್ದ. ಸೆಪ್ಟೆಂಬರ್ 2025ರಲ್ಲಿ ಆತ ಆ ವಿದ್ಯಾರ್ಥಿನಿಯ ಕೋಣೆಗೆ ಬಲವಂತವಾಗಿ ನುಗ್ಗಿ ಬಾಗಿಲು ಮುಚ್ಚಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆ ವಿರೋಧಿಸಿದಾಗ, ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಭಯಗೊಂಡ ವಿದ್ಯಾರ್ಥಿನಿ ಈ ಬಗ್ಗೆ ಯಾರಿಗೂ ಹೇಳಲಿಲ್ಲ. ನಂತರ, ಆರೋಪಿಗೆ ಅವಕಾಶ ಸಿಕ್ಕಾಗಲೆಲ್ಲಾ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಆ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ, ಅವಳು ವಾರ್ಡನ್ ಮತ್ತು ಕಾವಲುಗಾರನಿಗೆ ಮಾಹಿತಿ ನೀಡಿದ್ದಳು. ಆ ವಾರ್ಡನ್ ವಿದ್ಯಾರ್ಥಿನಿಯ ಪೋಷಕರಿಗೆ ಕರೆ ಮಾಡಿದ್ದರು. ಕುಟುಂಬದ ಸದಸ್ಯರು ಆಕೆಯನ್ನು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಪರೀಕ್ಷೆಯ ಸಮಯದಲ್ಲಿ ವೈದ್ಯರು ಆಕೆ ಗರ್ಭಿಣಿ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಐದು ವರ್ಷದ ಬಾಲಕಿಯನ್ನು ಬೆದರಿಸಿ 55 ವರ್ಷದ ವ್ಯಕ್ತಿಯಿಂದ 5 ದಿನಗಳ ಕಾಲ ಅತ್ಯಾಚಾರ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತರು ಕಸ್ತೂರ್ಬಾ ಗಾಂಧಿ ಬಾಲಿಕಾ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್ ಚೈನ್‌ಬಾಟಿ ಸೈಯಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಆ ಬಾಲಕಿಯ ದೇಹದಲ್ಲಿ ಯಾವ ಬದಲಾವಣೆಯನ್ನೂ ನೀವು ಗುರುತಿಸಲಿಲ್ಲವೇ? ಎಂಬ ಪ್ರಶ್ನೆ ಮಾಡಿರುವ ಅವರು ಈ ಆದೇಶ ಹೊರಡಿಸಿದ್ದಾರೆ.

ಈ ಘಟನೆ ವರದಿಯಾದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಆ ಗ್ರಾಮದ ಯುವಕನನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us