ಗೋಧಿ ಮೀಡಿಯಾಗೆ ಉದಾಹರಣೆ; ಸೋನಿಯಾ ಗಾಂಧಿ ಸಂದರ್ಶನಕ್ಕೆ ಬಿಜೆಪಿ ತಿರುಗೇಟು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಇಂದಿನ ಸಂದರ್ಶನವು ಗೋಧಿ ಮೀಡಿಯಾ ಸಂದರ್ಶನದ ಒಂದು ಶ್ರೇಷ್ಠ ಮಾದರಿಯಾಗಿದೆ. ಮೃದು ಮತ್ತು ಸಹಾನುಭೂತಿಯ ಪ್ರಶ್ನೆಗಳು, ಅವರ ಅರ್ಧ-ಸತ್ಯಗಳು ಮತ್ತು ಪೂರ್ಣ ಸುಳ್ಳುಗಳ ಕುರಿತು ಯಾವುದೇ ಅನುಸರಣೆಗಳಿಲ್ಲ. ಸಂದರ್ಶನವನ್ನು ಮುಖಾಮುಖಿಯಾಗಿ ನಡೆಸಲಾಗಿದೆಯೇ ಅಥವಾ ಬೇರೆ ಯಾರಾದರೂ ಅವರ ಪುಸ್ತಕವನ್ನು ಬರೆದಂತೆ ಅವರಿಗೆ ಅನುಕೂಲಕರವಾಗಿ ಉತ್ತರಗಳನ್ನು ಬರೆದಿದ್ದಾರೆಯೇ ಎಂಬುದೇ ನನ್ನ ಅನುಮಾನ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹೆರ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಗೋಧಿ ಮೀಡಿಯಾಗೆ ಉದಾಹರಣೆ; ಸೋನಿಯಾ ಗಾಂಧಿ ಸಂದರ್ಶನಕ್ಕೆ ಬಿಜೆಪಿ ತಿರುಗೇಟು
Lahar Singh And Sonia Gandhi

Updated on: Nov 07, 2026 | 3:39 PM

ನವದೆಹಲಿ, ನವೆಂಬರ್ 7: ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಖಾಸಗಿ ಪತ್ರಿಕೆ ಸಂಪಾದಕರಿಗೆ ನೀಡಿದ ಸಂದರ್ಶನವು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಶನವನ್ನು ರಾಜಕೀಯ ವಿಮರ್ಶಕರು, ಬಿಜೆಪಿ ಬೆಂಬಲಿಗರು ಮತ್ತು ಕಾಂಗ್ರೆಸ್ ಬೆಂಬಲಿಗರು ಪ್ರತ್ಯೇಕ ಕೋನಗಳಿಂದ ವಿಶ್ಲೇಷಿಸುತ್ತಿದ್ದಾರೆ. ಖಾಸಗಿ ಪತ್ರಿಕೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಸಂದರ್ಶನವೊಂದು ಪ್ರಕಟವಾಗಿದೆ. ಈ ಸಂದರ್ಶನದ ಕುರಿತು ಬಿಜೆಪಿ ನಾಯಕ ಲೆಹೆರ್ ಸಿಂಗ್ ಲೇವಡಿ ಮಾಡಿದ್ದಾರೆ. ಈ ಸಂದರ್ಶನ ಗೋಧಿ ಮೀಡಿಯಾಗೆ ಅತ್ಯಂತ ಸೂಕ್ತ ಮಾದರಿಯಾಗಿದೆ ಎಂದಿದ್ದಾರೆ.

ಸೋನಿಯಾ ಗಾಂಧಿಯವರ ಪುಸ್ತಕ ಬಿಡುಗಡೆಯ ಹಿನ್ನೆಲೆಯಲ್ಲಿ ನಡೆದ ಈ ಸಂದರ್ಶನದಲ್ಲಿ ಕಠಿಣವಾದ ರಾಜಕೀಯ ಮರುಪರಿಶೀಲನಾ ಪ್ರಶ್ನೆಗಳಿಗಿಂತ, ಸೋನಿಯಾ ಗಾಂಧಿ ಅವರ ವೈಯಕ್ತಿಕ ಜೀವನ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೀತಿ, ಇಂದಿರಾ ಗಾಂಧಿ ಅವರೊಂದಿಗಿನ ಸಂಬಂಧ ಹಾಗೂ ತ್ಯಾಗದ ಕಥನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಠಿಣವಾದ ಪ್ರಶ್ನೆಗಳನ್ನು ಕೇಳದೆ ಮೃದುವಾದ ಧೋರಣೆಯ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದು ಲೆಹೆರ್ ಸಿಂಗ್ ಆರೋಪ. ಈ ಸಂದರ್ಶನವು ಮುಖಾಮುಖಿ ಮಾತುಕತೆಯೇ ಅಥವಾ ಮುಂಚಿತವಾಗಿಯೇ ಸಿದ್ಧಪಡಿಸಿದ ಪ್ರಶ್ನೋತ್ತರಗಳ ಇಮೇಲ್ ಅಥವಾ ಲಿಖಿತ ರೂಪವೇ ಎಂಬ ಅನುಮಾನವನ್ನು ಲೆಹೆರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

Loading...

ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕತೆಗೆ ಹೊಸ ಪ್ರಕಾಶನ; ನ. 10ರಂದು ಹಾರ್ಪರ್ ಕಾಲಿನ್ಸ್​​ನಿಂದ ಬಿಲಾಂಗಿಂಗ್ ಪ್ರಕಟ

ತುರ್ತು ಪರಿಸ್ಥಿತಿ, ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪಗಳು ಅಥವಾ 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿದ ಪ್ರಕರಣಗಳ ಕುರಿತು ಸೋನಿಯಾ ಗಾಂಧಿ ನೀಡಿದ ಹೇಳಿಕೆಗಳಿಗೆ ಪತ್ರಕರ್ತರು ಮತ್ತೆ ಪ್ರಶ್ನೆ ಕೇಳಿಲ್ಲ ಎಂಬುದು ಲೆಹೆರ್ ಸಿಂಗ್ ಅವರ ವಾದವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಕುಸಿಯುತ್ತಿದ್ದು, ಮಾಧ್ಯಮಗಳ ಮೂಲಕ ಇಮೇಜ್ ಬದಲಾಯಿಸಲು ಸಾಧ್ಯವಿಲ್ಲ ಎಂದು ಕೂಡ ಲೆಹೆರ್ ಸಿಂಗ್ ವ್ಯಂಗ್ಯವಾಡಿದ್ದಾರೆ. ದಿ ಹಿಂದೂ ಪತ್ರಿಕೆ ಇಡೀ ಪುಟವನ್ನೇ ಸೋನಿಯಾ ಗಾಂಧಿಯ ಸಾಧನೆಗಳನ್ನು ಸಾರಲು ಮೀಸಲಾಗಿಟ್ಟಿದ್ದರೂ ಅವರ ಮಗ ಅಣಕು ಸಂಸತ್​​ನಲ್ಲಿ ಮಾತ್ರ ಪ್ರಧಾನಿಯಾಗಲು ಸಾಧ್ಯ, ಕಾಂಗ್ರೆಸ್ ಮುಳುಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಲೆಹೆರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಸೋನಿಯಾ ಗಾಂಧಿ ಹೇಳಿದ್ದೇನು?:

ತಮ್ಮ ಬಹುನಿರೀಕ್ಷಿತ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆಗೆ ಮುನ್ನ ‘ದಿ ಹಿಂದೂ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಮೌಲ್ಯಗಳು ಗಂಭೀರ ಹಾನಿಗೆ ಒಳಗಾಗಿವೆ ಎಂದು ಅವರು ಆರೋಪಿಸಿದ್ದಾರೆ. ಈ ಸರ್ಕಾರ ಹೋದ ಮೇಲೂ ನಮ್ಮ ಆಡಳಿತ ವ್ಯವಸ್ಥೆಯನ್ನು ಮತ್ತೆ ಹಳೇ ಸ್ಥಿತಿಗೆ ತರಲು ಸಾಕಷ್ಟು ಸಮಯ ಮತ್ತು ಅಪಾರ ರಾಜಕೀಯ ಪರಿಶ್ರಮ ಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ‘ರಾಜೀವ್ ಪ್ರಧಾನಿಯಾಗುವುದು ನನಗೆ ಇಷ್ಟವಿರಲಿಲ್ಲ, ನನ್ನ ಆತ್ಮಕತೆ ಬಿಡುಗಡೆಯಾದಾಗ ರಾದ್ಧಾಂತ ಖಚಿತ’; ಸೋನಿಯಾ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ವಿಭಿನ್ನ ರಾಜಕೀಯ ಶೈಲಿ ಮತ್ತು ಸಿದ್ಧಾಂತದ ಕುರಿತು ಮಾತನಾಡುತ್ತಾ, “ಮೋದಿ ಅವರು ಸಂಪೂರ್ಣವಾಗಿ ಭಿನ್ನವಾದ ಸಿದ್ಧಾಂತದಿಂದ ಬಂದವರು ಎಂಬುದು ನಿಜ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಡಾ. ಮನಮೋಹನ್ ಸಿಂಗ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಬೆಳೆದುಬಂದ ರೀತಿಯೇ ಬೇರೆ. ನಮಗೆ ಆರ್‌ಎಸ್‌ಎಸ್‌ನಿಂದ ಕಲಿಯಲು ಏನೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತರೂಢ ಬಿಜೆಪಿ ನಾಯಕರಿಂದ ಇದಕ್ಕೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us