ದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಮಹತ್ವದ ಚರ್ಚೆ
ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಚನಾವಣೆ ತಯಾರಿ ಬಗ್ಗೆ ಸಿಎಂ ಬೊಮ್ಮಾಯಿ ಪ್ರಸ್ತಾಪಿಸಿದ್ದಾರೆ.
ನವದೆಹಲಿ: ಇಂದು(ಜ.16) ಮತ್ತು ನಾಳೆ (ಜ. 17) ದೆಹಲಿಯ ಬಿಜೆಪಿ (BJP) ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಮೊದಲ ದಿನದ ಕಾರ್ಯಕಾರಿಣಿ ಸಭೆ ಇಂದು ಮುಕ್ತಾಯವಾಗಿದೆ. ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ಮಾಡಲಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಉಪಸ್ಥಿತರಿದ್ದರು.
ಸಭೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ಸಿಎಂ ಬೊಮ್ಮಾಯಿ ಪ್ರಸ್ತಾಪ
ಇಂದಿನ ಸಭೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲುರಿಂದ ಪ್ರಸ್ತಾಪ ಮಾಡಲಾಗಿದೆ. ಚುನಾವಣೆಗೆ ತಯಾರಿ ಮಾಡಿಕೊಂಡ ಬಗ್ಗೆ, ಪಕ್ಷ ಸಂಘಟನೆ, ಬೂತ್ ನಿರ್ವಹಣೆ, ಸಮಾವೇಶ, ಮುಂದಿನ ದಿನಗಳಲ್ಲಿ ಆಯೋಜಿಸಿರುವ ರ್‍ಯಾಲಿ, ವಿಜಯ ಸಂಕಲ್ಪ ಯಾತ್ರೆ ಹಾಗೂ ಅದರ ಲಾಭಗಳ ಬಗ್ಗೆ ವಿವರಣೆ ನೀಡಲಾಗಿದೆ. ಸರ್ಕಾರದ ಯೋಜನೆ ಮೂಲಕ ಜನರನ್ನು ಸೆಳೆಯುವ ಬಗ್ಗೆ, ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಮೂಲಕ ಸೆಳೆಯುವ ಬಗ್ಗೆ, ಕೇಂದ್ರದ ಯಾವ್ಯಾವ ಯೋಜನೆಗೆ ಮತಗಳನ್ನು ಸೆಳೆಯುವ ಶಕ್ತಿ ಇದೆ ಎಂದು ಸಿಎಂ ಬೊಮ್ಮಾಯಿ ಪ್ರಸ್ತಾಪಿಸಿದ್ದಾರೆ.
ದೇಶದ 4 ರಾಜ್ಯಗಳು ಚುನಾವಣೆ ಹೊಸ್ತಿಲಲ್ಲಿವೆ-ಆರ್.ಅಶೋಕ್
ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕಳೆದ 15 ವರ್ಷಗಳಿಂದ ಕಾರ್ಯಕಾರಿಣಿ ಸಭೆಗೆ ಬರುತ್ತಿದ್ದೇನೆ. ಚುನಾವಣೆ ನಡೆಯುವ ರಾಜ್ಯಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ದೇಶದ 4 ರಾಜ್ಯಗಳು ಚುನಾವಣೆ ಹೊಸ್ತಿಲಲ್ಲಿವೆ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ಅತಿ ಹೆಚ್ಚು ಚರ್ಚೆ ನಡೆಸಲಾಗಿದೆ. ಬಿಜೆಪಿ ಗೆಲ್ಲಬೇಕು, ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇಂದಿನ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಹೈಕಮಾಂಡ್ ತಿಳಿಸಿದೆ ಎಂದರು.
BJP National Executive meeting being held at NDMC Convention Centre in Delhi.
(Source: DD) pic.twitter.com/eYEEwrOhiW
— ANI (@ANI) January 16, 2023
ನಾವು ಕೂಡ ಇವತ್ತಿನ ಸಭೆಯಲ್ಲಿ ಸ್ಫೂರ್ತಿಯಿಂದ ಭಾಗವಹಿಸಿದ್ದೇವೆ. ನಮಗೆ ಮೋದಿ ಬಹಳ ಸ್ಫೂರ್ತಿ ತುಂಬಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಚುನಾವಣೆ ಗೆಲ್ಲೋಕೆ ಸಹಾಯ ಆಗಲಿದೆ. ಬೊಮ್ಮಾಯಿ, ಕಟೀಲು ವೇದಿಕೆ ಮೇಲೆ ಅರ್ಧ ಗಂಟೆ ಮಾತಾಡಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.
ಕಾಂಗ್ರೆಸ್ ಪಕ್ಷದವರು ನಮ್ಮನ್ನು ಕಾಪಿ ಮಾಡಿದ್ದಾರೆ
ಇನ್ನು ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ಕಾಂಗ್ರೆಸ್ ಭರವಸೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷದವರು ನಮ್ಮನ್ನು ಕಾಪಿ ಮಾಡಿದ್ದಾರೆ. ಇವತ್ತು ನಾವು ಎಲ್ಲಾ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟಿದ್ದೆವು. ಅದನ್ನೇ ನೋಡಿ ಕಾಪಿ ಮಾಡಿದ್ದಾರೆ. RSSನವರ ತರಹ ಕೆಲಸ ಮಾಡಬೇಕೆಂದು ಖರ್ಗೆ ಹೇಳಿದ್ದಾರೆ. ಅದೇ ರೀತಿಯಾಗಿ ಅವರೆಲ್ಲಾ ನಮ್ಮನ್ನು ನೋಡಿ ಕಾಪಿ ಮಾಡ್ತಾರೆ. ಅಧಿಕಾರ ಇದ್ದಾಗ ಏನೂ ಮಾಡಿಲ್ಲ, ಈಗ ಮಾಡ್ತೀನಿ ಅಂತಿದ್ದಾರೆ. ಅದು ಕಾಂಗ್ರೆಸ್ನಿಂದ ಸಾಧ್ಯವಿಲ್ಲದ ಕೆಲಸ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರೋಡ್ ಶೋ ಮೂಲಕ ಕಾರ್ಯಕಾರಿಣಿ ಸಭೆಗೆ ಆಗಮಿಸಿದ ಮೋದಿ
ಇನ್ನು ರೋಡ್ ಶೋ ಮೂಲಕ ಕಾರ್ಯಕಾರಿಣಿ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ಪಟೇಲ್ ವೃತ್ತದಿಂದ NDMC ಸಭಾಂಗಣದವರೆಗೆ 1 ಕಿ.ಮೀ ರೋಡ್ ಶೋ ನಡೆಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.