
ಚೆನ್ನೈ, ಸೆಪ್ಟೆಂಬರ್ 22: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು, ಹಿಂದಿನ ಎಂ.ಕೆ. ಸ್ಟಾಲಿನ್ ಆಡಳಿತದ ಪ್ರಮುಖ ಯೋಜನೆಯಾಗಿದ್ದ ‘ಮುಖ್ಯಮಂತ್ರಿಗಳ ಉಪಾಹಾರ ಯೋಜನೆ’ಯನ್ನು ರದ್ದುಗೊಳಿಸದೆ ಮತ್ತಷ್ಟು ವಿಸ್ತರಿಸಿದೆ. ಆದರೆ, ಈ ಯೋಜನೆಗೆ ಕಾಂಗ್ರೆಸ್‌ನ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರನ್ನಿಡುವ ಮೂಲಕ ‘ಪೆರುಂತಲೈವರ್ ಕಾಮರಾಜರ್ ಉಪಾಹಾರ ಯೋಜನೆ’ ಎಂದು ಮರುನಾಮಕರಣ ಮಾಡಿದೆ.
ವ್ಯಾಪ್ತಿ: ಈ ಹಿಂದೆ 1 ರಿಂದ 5ನೇ ತರಗತಿಯವರೆಗೆ ಮಾತ್ರ ಸೀಮಿತವಾಗಿದ್ದ ಈ ಯೋಜನೆಯನ್ನು ಈಗ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ರಾಜ್ಯದ 15,454 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಒಟ್ಟು 15.30 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಗ್ಗೆ ಉಚಿತ, ಪೌಷ್ಟಿಕ ಉಪಾಹಾರ ದೊರೆಯಲಿದೆ.
ಈ ವಿಸ್ತರಣೆಗಾಗಿ ಸರ್ಕಾರವು ಹೆಚ್ಚುವರಿಯಾಗಿ 217.63 ಕೋಟಿ ರೂಪಾಯಿ ಹಂಚಿಕೆ ಮಾಡಿದ್ದು, ಯೋಜನೆಯ ಒಟ್ಟು ವಾರ್ಷಿಕ ವೆಚ್ಚ 724 ಕೋಟಿ ರೂ.ಗೆ ತಲುಪಿದೆ.
ಅನುಷ್ಠಾನ: ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಹಾಗೂ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ಕೇಂದ್ರೀಕೃತ ಅಡುಗೆ ಮನೆಗಳ ಮೂಲಕ ಹಾಗೂ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ (SHG) ನೆರವಿನಿಂದ ಸ್ಥಳೀಯವಾಗಿಯೇ ಬಿಸಿ ಉಪಾಹಾರ ಸಿದ್ಧಪಡಿಸಲಾಗುತ್ತಿದೆ.
ಮತ್ತಷ್ಟು ಓದಿ: ಓಡಿಬಂದು ನಟ ಅಜಿತ್ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್; ಫ್ಯಾನ್ಸ್ ಫಿದಾ
ಯೋಜನೆಯ ಮರುನಾಮಕರಣವು ಡಿಎಂಕೆ ಹಾಗೂ ಆಡಳಿತಾರೂಢ ಟಿವಿಕೆ ನಡುವೆ ತೀವ್ರ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ನಾವು ಜಾರಿಗೆ ತಂದ ಯೋಜನೆಗಳ ಹೆಸರನ್ನು ಬದಲಾಯಿಸುವುದಷ್ಟೇ ಇವರ ಸಾಧನೆ, ಸ್ವಂತವಾಗಿ ಮಾಡಲು ಏನೂ ಇಲ್ಲ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್ ಕಿಡಿಕಾರಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಟಿವಿಕೆ ವಕ್ತಾರ ಅಮೆರಿಕಾಯ್ ನಾರಾಯಣನ್, “ಯೋಜನೆಯನ್ನು ಯಾರು ಆರಂಭಿಸಿದರು ಎಂಬುದು ಮುಖ್ಯವಲ್ಲ, ಜನರಿಗೆ ತಲುಪುತ್ತಿದೆಯೇ ಎಂಬುದು ಮುಖ್ಯ. ತಮಿಳುನಾಡಿನಲ್ಲಿ ಶಾಲಾ ಊಟದ ಕ್ರಾಂತಿಗೆ ನಾಂದಿ ಹಾಡಿದ ಕಾಮರಾಜ್ ಅವರ ಹೆಸರಿಡುವುದು ಅತ್ಯಂತ ಸೂಕ್ತ,” ಎಂದು ಸಮರ್ಥಿಸಿಕೊಂಡಿದ್ದಾರೆ.
ತಾರಾ ವರ್ಚಸ್ಸಿನಿಂದ ಅಧಿಕಾರಕ್ಕೇರಿದ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರ ಹೆಜ್ಜೆಯನ್ನೇ ಅನುಸರಿಸುತ್ತಿರುವ ವಿಜಯ್, ಕುಟುಂಬಗಳ ಮೇಲೆ ಪ್ರಭಾವ ಬೀರುವ ಮಕ್ಕಳು ಮತ್ತು ಮಹಿಳೆಯರನ್ನೇ ಕೇಂದ್ರವಾಗಿಟ್ಟುಕೊಂಡು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಶಾಲಾ ಉಪಾಹಾರದ ಜೊತೆಗೆ, ನವಜಾತ ಶಿಶುಗಳಿಗೆ ಚಿನ್ನದ ಉಂಗುರ, ಪ್ರೌಢಶಾಲಾ ಮಕ್ಕಳಿಗೆ ಸೈಕಲ್, ವಧುಗಳಿಗೆ ರೇಷ್ಮೆ ಸೀರೆ ಹಾಗೂ ಮಹಿಳಾ ಸುರಕ್ಷತಾ ಪಡೆ ಮುಂತಾದ ಯೋಜನೆಗಳ ಮೂಲಕ ವಿಜಯ್ ತಮ್ಮ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.
ವಿಧಾನಸಭೆಯಲ್ಲಿ ಸರಳ ಬಹುಮತಕ್ಕಾಗಿ ಕಾಂಗ್ರೆಸ್‌ನ ಬೆಂಬಲವನ್ನು ಅವಲಂಬಿಸಿರುವ ಟಿವಿಕೆ ಸರ್ಕಾರಕ್ಕೆ, ಕೆ. ಕಾಮರಾಜ್ ಅವರ ಹೆಸರನ್ನು ಯೋಜನೆಗೆ ಬಳಸುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಹುದ್ದೆಯ ಚರ್ಚೆಗಳಿಂದ ಮೈತ್ರಿಪಕ್ಷಗಳಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಶಮನಗೊಳಿಸಲು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಳೆಯ ತಲೆಮಾರಿನ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಕ್ರಮ ನೆರವಾಗಲಿದೆ ಎಂಬ ಲೆಕ್ಕಾಚಾರವಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Tue, 22 September 26