ಕಾಂಗ್ರೆಸ್‌ನಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿ ಇನ್ನೂ ಜೀವಂತವಾಗಿದೆ; ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ತಿರುಗೇಟು

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ವಾಗ್ದಾಳಿ ಆರಂಭವಾಗಿದೆ. "ಇಂದು ಇಂದಿರಾ ಗಾಂಧಿ ಅಧಿಕಾರದಲ್ಲಿದ್ದರೆ ಬಿಜೆಪಿಯನ್ನು ನಿಷೇಧಿಸುತ್ತಿದ್ದರು" ಎಂಬ ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಹೇಳಿಕೆ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

ಕಾಂಗ್ರೆಸ್‌ನಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿ ಇನ್ನೂ ಜೀವಂತವಾಗಿದೆ; ಅಶೋಕ್ ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ತಿರುಗೇಟು
Ashok Gehlot

Updated on: Jun 15, 2026 | 8:18 PM

ನವದೆಹಲಿ, ಜೂನ್ 15: ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ (Ashok Gehlot) ಇಂದು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಇಂದು ಇಂದಿರಾ ಗಾಂಧಿ ಬದುಕಿರುತ್ತಿದ್ದರೆ, ಅವರು ಅಧಿಕಾರದಲ್ಲಿರುತ್ತಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡುತ್ತಿದ್ದರು ಎಂದು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ನಾಯಕತ್ವಕ್ಕೆ ಇಂದಿಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅವರು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಬಯಸುತ್ತಾರೆ ಎಂದು ಬಿಜೆಪಿ ಆರೋಪಿಸಿದೆ.

“ಕಾಂಗ್ರೆಸ್ ಪಕ್ಷಕ್ಕೆ ಇಂದಿಗೂ 1975ರ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಒಂದು ವೇಳೆ ಇವರು ಮತ್ತೆ ಅಧಿಕಾರಕ್ಕೆ ಬಂದರೆ ವಿರೋಧ ಪಕ್ಷಗಳನ್ನೇ ನಿಷೇಧಿಸಿ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುತ್ತಾರೆ” ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಇಂದಿರಾ ಗಾಂಧಿ ಬದುಕಿದ್ದರೆ ಬಿಜೆಪಿಗೆ ನಿಷೇಧ ಹೇರುತ್ತಿದ್ದರು; ವಿವಾದಕ್ಕೀಡಾದ ಅಶೋಕ್ ಗೆಹ್ಲೋಟ್

ಜೈಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೈದ್ಧಾಂತಿಕ ನಿಲುವುಗಳು ದೇಶಕ್ಕೆ ಅಪಾಯಕಾರಿ. ಒಂದು ವೇಳೆ ಇಂದು ಇಂದಿರಾ ಗಾಂಧಿಯವರಂತಹ ನಾಯಕರು ಅಧಿಕಾರದಲ್ಲಿರುತ್ತಿದ್ದರೆ, ಅವರು ಬಿಜೆಪಿಯಂತಹ ಪಕ್ಷವನ್ನು ಖಂಡಿತವಾಗಿಯೂ ನಿಷೇಧಿಸುತ್ತಿದ್ದರು. ಹಿಂದುತ್ವ ಮತ್ತು ಧರ್ಮದ ಹೆಸರಿನಲ್ಲಿ ನೀವು ರಾಜಕೀಯ ಪಕ್ಷವನ್ನು ನಡೆಸಲು ಸಾಧ್ಯವಿಲ್ಲ. ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಲು ನಮ್ಮ ಸಂವಿಧಾನ ಅನುಮತಿ ನೀಡುವುದಿಲ್ಲ. ದೇಶದಲ್ಲಿ ಸದ್ಯದ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ” ಎಂದು ಹೇಳಿದ್ದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಡಿ (ED), ಸಿಬಿಐ (CBI) ಮತ್ತು ಐಟಿ ಇಲಾಖೆಗಳಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆ. ಚುನಾವಣಾ ಆಯೋಗವು ಬಿಜೆಪಿಯ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ 2ನೇ ಪಟ್ಟಿ ಪ್ರಕಟ; ಕಮಲನಾಥ್, ಅಶೋಕ್ ಗೆಹ್ಲೋಟ್ ಪುತ್ರರಿಗೆ ಸ್ಥಾನ

ಅಶೋಕ್ ಗೆಹ್ಲೋಟ್ ಹೇಳಿಕೆ ಹೊರಬೀಳುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಮತ್ತು ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ವಿರುದ್ಧ ವೀಡಿಯೊ ಮೂಲಕ ವಾಗ್ದಾಳಿ ನಡೆಸಿದ್ದಾರೆ. “ಅಶೋಕ್ ಗೆಹ್ಲೋಟ್ ಅವರ ಹೇಳಿಕೆ ಕಾಂಗ್ರೆಸ್ ಇಂದಿಗೂ ಪ್ರಜಾಪ್ರಭುತ್ವ ವಿರೋಧಿ ಎಂಬುದನ್ನು ಸ್ಪಷ್ಟಪಡಿಸಿದೆ. ಗಾಂಧಿ-ವಾದ್ರಾ ಕುಟುಂಬವೇ ಭಾರತೀಯ ಪ್ರಜಾಪ್ರಭುತ್ವಕ್ಕೆ ಇರುವ ಅತಿ ದೊಡ್ಡ ಗಂಡಾಂತರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂಬುದು ಇದರಿಂದ ಸಾಬೀತಾಗಿದೆ” ಎಂದು ಪ್ರದೀಪ್ ಭಂಡಾರಿ ಹೇಳಿದ್ದಾರೆ.

“ವಿರೋಧ ಪಕ್ಷಗಳನ್ನು ನಿಷೇಧಿಸುವುದು ಕಾಂಗ್ರೆಸ್‌ನ ಹಳೆಯ ರೋಗ. ಜನಬೆಂಬಲ ಕಳೆದುಕೊಂಡಿರುವ ಕಾಂಗ್ರೆಸ್, ಈಗ ಇಂತಹ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದೆ. ಕಾಂಗ್ರೆಸ್ ಈ ಹಿಂದೆ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗಾಗಿ ದೇಶದ ಜನರ ಕ್ಷಮೆ ಕೇಳುವ ಬದಲು, ಇಂದಿಗೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕುಟುಂಬಕ್ಕೆ ರಾಜಕೀಯ ಎದುರಾಳಿಗಳನ್ನು ನಿಷೇಧಿಸುವ ಸರ್ವಾಧಿಕಾರಿ ಆಸೆ ಇದೆ” ಎಂದು ಬಿಜೆಪಿ ಆರೋಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us