ನನ್ನ ಹೆಣದ ಮೇಲೆ ಅದು ನಡೆದೀತು: ಜಿತಿನ್ ಪ್ರಸಾದ ಶೈಲಿಯಲ್ಲಿ ಕಾಂಗ್ರೆಸ್ ಬಿಡುವ ಕುರಿತ ಪ್ರಶ್ನೆಗೆ ಕಪಿಲ್ ಸಿಬಲ್ ಉತ್ತರ
ಕಪಿಲ್ ಸಿಬಲ್ ಸಹ ಜಿತಿನ್ ಪ್ರಸಾದ ಅವರಂತೆಯೇ ಪಕ್ಷ ತೊರೆಯಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಇಂಥ ಗಾಳಿಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಕಪಿಲ್ ಸಿಬಲ್, ‘ನನ್ನ ಹೆಣದ ಮೇಲೆ’ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿ: ರಾಹುಲ್ ಗಾಂಧಿಯ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆಯು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ನೀಡಿದೆ. ಪಕ್ಷದ ಹೈಕಮಾಂಡ್ಗೆ ‘ಜಿ-23’ ಬಳಗದ ಸದಸ್ಯರು ಕಾಂಗ್ರೆಸ್ನಲ್ಲಿ ಆಗಬೇಕಿರುವ ಬದಲಾವಣೆ ಕುರಿತು ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿಗೆ ಬರೆದಿದ್ದ ಪತ್ರ ಈ ಕಾರಣದಿಂದ ಇನ್ನೊಮ್ಮೆ ಚರ್ಚೆಗೆ ಬಂದಿದೆ. ಈ ತಂಡದ ಮುಖ್ಯ ಸದಸ್ಯರಾಗಿದ್ದ ಕಪಿಲ್ ಸಿಬಲ್ ಸಹ ಜಿತಿನ್ ಪ್ರಸಾದ ಅವರಂತೆಯೇ ಪಕ್ಷ ತೊರೆಯಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಇಂಥ ಗಾಳಿಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಕಪಿಲ್ ಸಿಬಲ್, ‘ನನ್ನ ಹೆಣದ ಮೇಲೆ’ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಮಾಜಿ ಸಚಿವರೂ ಆಗಿರುವ ಕಪಿಲ್ ಸಿಬಲ್ ಈ ಸಂದರ್ಭವನ್ನು ಪಕ್ಷಕ್ಕೆ ಪ್ರಬಲ ಸಂದೇಶ ರವಾನಿಸಲು ಬಳಸಿಕೊಂಡಿದ್ದಾರೆ. ‘ಇದು ಅವರು ಕೇಳಿಸಿಕೊಳ್ಳಬೇಕಾದ ಕಾಲ’ ಎಂದು ಹೇಳಿದ್ದಾರೆ. ‘ವೈಯಕ್ತಿಕ ಲಾಭಕ್ಕಾಗಿ ಪಕ್ಷಾಂತರ ಮಾಡುವ ಪ್ರಸಾದ ರಾಮ್ ಮಾದರಿ’ಯನ್ನು ನಾನೆಂದೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
‘ಪಕ್ಷದ ನಾಯಕತ್ವ ಏನು ಮಾಡಿದೆ ಅಥವಾ ಮಾಡಿಲ್ಲ ಎನ್ನುವ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಭಾರತೀಯ ರಾಜಕಾರಣದಲ್ಲಿ ಈಗ ನಾವು ಒಂದು ಹಂತಕ್ಕೆ ಮುಟ್ಟಿದ್ದೇವೆ. ರಾಜಕೀಯ ನಿರ್ಧಾರಗಳಿಗೂ ಸಿದ್ಧಾಂತಗಳಿಗೂ ಸಂಬಂಧವೇ ಇಲ್ಲ ಎನ್ನುವಂಥ ಸ್ಥಿತಿ ಮುಟ್ಟಿದ್ದೇವೆ. ನಾನು ಈಗ ಕರೆಯುವ ‘ಪ್ರಸಾದ ರಾಮ್ ರಾಜಕೀಯ’ದ ತಳಹದಿಯಲ್ಲಿ ಇಂಥವರು ನಡೆಯುತ್ತಾರೆ. ಈ ಹಿಂದೆ ಇದು ಆಯಾ ರಾಮ್ ಗಯಾ ರಾಮ್ ಆಗಿತ್ತು. ನಾವು ಪಶ್ಚಿಮ ಬಂಗಾಳದಲ್ಲಿ ಎಂಥ ವಿದ್ಯಮಾನ ಗಮನಿಸಿದೆವು? ಬಿಜೆಪಿಯು ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನರು ಇದ್ದಕ್ಕಿದ್ದಂತೆ ಪಕ್ಷಾಂತರ ಶುರು ಮಾಡಿಕೊಂಡರು. ನಿಮ್ಮ ಆಂತರಿಕ ನಂಬಿಕೆಗೆ ಅನುಗುಣವಾಗಿ ನೀವು ಚುನಾವಣೆಯನ್ನು ಎದುರಿಸುವುದಿಲ್ಲ. ನಿಮಗೆ ವೈಯಕ್ತಿಕವಾಗಿ ಏನು ಲಾಭ ಆಗುತ್ತೆ ಎಂಬುದನ್ನು ಗಮನದಲ್ಲಿಸಿಕೊಂಡು ಚುನಾವಣೆಗೆ ಹೋಗುತ್ತೀರಿ. ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಗಿದ್ದು ಇದೇ ರೀತಿ ಎಂದು ಅವರು ವಿಶ್ಲೇಷಿಸಿದರು.
ರಾಹುಲ್ ಗಾಂಧಿ ನಿಕಟವರ್ತಿಯಾಗಿದ್ದ ಜಿತಿನ್ ಪ್ರಸಾದ ಎರಡು ವರ್ಷಗಳ ಊಹಾಪೋಹದ ನಂತರ ನಿನ್ನೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ‘ನನಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೂರು ತಲೆಮಾರುಗಳ ಸಂಬಂಧವಿದೆ. ಕಳೆದ 8-10 ವರ್ಷಗಳಿಂದ ನನಗೆ ದೇಶದಲ್ಲಿ ಒಂದೇ ಒಂದು ರಾಷ್ಟ್ರೀಯ ಪಕ್ಷವಿದೆ ಎನ್ನಿಸುತ್ತಿದೆ. ಅದು ಬಿಜೆಪಿ. ಇತರ ಪಕ್ಷಗಳು ಪ್ರಾದೇಶಿಕ ಪಕ್ಷಗಳಷ್ಟೇ’ ಎಂದು ಹೇಳಿ, ಕಾಂಗ್ರೆಸ್ ಪಕ್ಷದೊಂದಿಗಿನ ತಮ್ಮ 20 ವರ್ಷಗಳ ನಂಟು ಕೊನೆಗಾಣಿಸಿಕೊಂಡಿದ್ದರು.
ಮಧ್ಯಪ್ರದೇಶದಲ್ಲಿ ಒಂದಿಷ್ಟು ಶಾಸಕರೊಂದಿಗೆ ಬಿಜೆಪಿ ಸೇರಿ ಅಲ್ಲಿನ ಕಾಂಗ್ರೆಸ್ ಸರ್ಕಾರದ ಪದಚ್ಯುತಿಗೆ ಕಾರಣರಾದ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದ ನಂತರ ಕಾಂಗ್ರೆಸ್ಗೆ ಆದ ಅತಿದೊಡ್ಡ ನಷ್ಟವಿದು ಎನ್ನಲಾಗಿದೆ. ಮಧ್ಯಪ್ರದೇಶದ ಪಕ್ಷಾಂತರ, ಒಂದಾದ ಮೇಲೆ ಒಂದರಂತೆ ಚುನಾವಣೆಗಳಲ್ಲಿ ಸೋಲನುಭವಿಸಿದ ನಂತರ ಕಾಂಗ್ರೆಸ್ನ ಹಿರಿಯ ನಾಯಕರಾದ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮ ಪಕ್ಷದಲ್ಲಿ ಬದಲಾವಣೆಗೆ ಮತ್ತು ಎದ್ದು ಕಾಣುವಂಥ ನಾಯಕತ್ವಕ್ಕೆ ಒತ್ತಾಯಿಸಿದ್ದರು.
(Congress Leader Kapil Sibal Answers Over My Dead Body for a question On Jitin Prasada Style Switch to BJP)
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಭವಿಷ್ಯದ ನಾಯಕರ ಉಗಮವಾಗಲಿದೆ: ಜಿ 23 ಬಣದ ನಾಯಕ ಕಪಿಲ್ ಸಿಬಲ್ ವಿಶ್ವಾಸ
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್
Published On - 10:37 pm, Thu, 10 June 21