Rahul Gandhi: ಮೋದಿ ಉಪನಾಮ ಹೇಳಿಕೆ; ರಾಹುಲ್​ ಗಾಂಧಿ ಮೇಲ್ಮನವಿ ವಿಚಾರಣೆಗೆ ಸಮ್ಮತಿ, ಜಾಮೀನು ವಿಸ್ತರಣೆ

ಮೋದಿ ಉಪನಾಮ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಅವರ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಗುಜರಾತ್​​ನ ಸೂರತ್​​ನ ಸೆಷನ್ಸ್ ಕೋರ್ಟ್ ಸಮ್ಮತಿಸಿದೆ. ಜತೆಗೆ ರಾಹುಲ್ ಗಾಂಧಿ ಅವರಿಗೆ ಜಾಮೀನು ಮಂಜೂರು ಮಾಡಿದೆ.

Follow us
Ganapathi Sharma
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 03, 2023 | 5:26 PM

ಸೂರತ್: ಮೋದಿ ಉಪನಾಮ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  (Rahul Gandhi) ಅವರ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಗುಜರಾತ್​​ನ ಸೂರತ್​​ನ ಸೆಷನ್ಸ್ ಕೋರ್ಟ್ ಸೋಮವಾರ ಸಮ್ಮತಿಸಿದೆ. ಜತೆಗೆ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಜಾಮೀನನ್ನು ಏಪ್ರಿಲ್ 13ರ ವರೆಗೆ ವಿಸ್ತರಣೆ ಮಾಡಿದೆ. ಏಪ್ರಿಲ್ 13ರಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಇತ್ತೀಚೆಗೆ ತೀರ್ಪು ನೀಡಿದ್ದ ಸೂರತ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜತೆಗೆ ಮೇಲ್ಮನವಿ ಸಲ್ಲಿಕೆಗೆ ಕಾಲಾವಕಾಶ ನೀಡಿ, ಅಲ್ಲಿಯವರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇದೀಗ ರಾಹುಲ್ ಗಾಂಧಿ ಅವರು ಸೂರತ್ ಸೆಷನ್ಸ್ ಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಕೆಲವೇ ದಿನಗಳಲ್ಲಿ, ಸಂಸದರ ಅಧಿಕೃತ ನಿವಾಸವನ್ನು ತೊರೆಯುವಂತೆಯೂ ಅವರಿಗೆ ಸೂಚಿಸಲಾಗಿದೆ. ಇದಕ್ಕೆ, ಏಪ್ರಿಲ್ 22ರ ಗಡುವು ನೀಡಲಾಗಿತ್ತು. ಇದೀಗ ಅದಕ್ಕೂ ಮುನ್ನ ರಾಹುಲ್ ಅವರ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಸೆಷನ್ಸ್ ಕೋರ್ಟ್ ದಿನಾಂಕ ನಿಗದಿ ಮಾಡಿರುವುದು ಕುತೂಹಲ ಮೂಡಿಸಿದೆ.

ಈ ಮಧ್ಯೆ, ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ವಿಚಾರದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿದಿದೆ. ಲೋಕಸಭೆ ಮತ್ತು ರಾಜ್ಯಸಭಾ ಸಂಸದರು ಸೋಮವಾರ ಕೂಡ ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ್ದರು. ಪ್ರತಿಪಕ್ಷಗಳ ಗದ್ದಲದ ಕಾರಣ ಕಲಾಪವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ವಯನಾಡಿನಿಂದ ಸ್ಪರ್ಧಿಸಿದ್ದ ಇನ್ನೊಬ್ಬ ರಾಹುಲ್ ಗಾಂಧಿ ಕೂಡ ಅನರ್ಹ; ಯಾರು ಇವರು?

2019 ರ ಚುನಾವಣೆಗೆ ಪೂರ್ವಭಾವಿಯಾಗಿ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ, ಪರಾರಿಯಾದ ಉದ್ಯಮಿಗಳಾದ ಲಲಿತ್ ಮೋದಿ ಮತ್ತು ನೀರವ್ ಮೋದಿಯನ್ನು ಉಲ್ಲೇಖಿಸಿ ಎಲ್ಲಾ ಕಳ್ಳರಿಗೂ ಮೋದಿ ಎಂಬ ಸರ್ ನೇಮ್ ಯಾಕಿದೆ ಎಂದು ರಾಹುಲ್ ಕೇಳಿದ್ದರು. ಇದನ್ನು ಇತರೆ ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿತ್ತು. ಗುಜರಾತ್‌ನ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ರಾಹುಲ್ ನಿರಾಕರಿಸಿದ್ದರು. ಪ್ರಕರಣದ ವಿಚಾರಣೆ ನಡೆದು, ನ್ಯಾಯಾಲಯವು ಅವರನ್ನು ದೋಷಿ ಎಂದು ಪರಿಗಣಿಸಿದ್ದರ ಜತೆಗೆ ಜೈಲು ಶಿಕ್ಷೆಯನ್ನೂ ಪ್ರಕಟಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Mon, 3 April 23