AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್​​ ಹೆಸರಲ್ಲಿ ದೇಶದ ಪುತ್ರಿಯರ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ; ಉಡುಪಿ ಕಾಲೇಜು ವಿವಾದದಲ್ಲಿ ಕಾಲಿಟ್ಟ ರಾಹುಲ್ ಗಾಂಧಿ

ಟ್ವೀಟ್ ಮಾಡಿದ್ದ ಒಮರ್​ ಅಬ್ದುಲ್ಲಾ, ಪ್ರತಿ ವ್ಯಕ್ತಿಯೂ  ತನಗಿಷ್ಟವಾದ ಉಡುಪು ಧರಿಸಲು ಸ್ವತಂತ್ರ. ಇನ್ನೊಬ್ಬರು ಅದನ್ನು ಇಷ್ಟಪಡಲಿ, ಬಿಡಲಿ ಅದು ಅವರ ಹಕ್ಕು ಆಗಿರುತ್ತದೆ ಎಂದಿದ್ದರು.

ಹಿಜಾಬ್​​ ಹೆಸರಲ್ಲಿ ದೇಶದ ಪುತ್ರಿಯರ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ; ಉಡುಪಿ ಕಾಲೇಜು ವಿವಾದದಲ್ಲಿ ಕಾಲಿಟ್ಟ ರಾಹುಲ್ ಗಾಂಧಿ
ರಾಹುಲ್​ ಗಾಂಧಿ
TV9 Web
| Edited By: |

Updated on:Feb 05, 2022 | 12:46 PM

Share

ಸದ್ಯ ಉಡುಪಿ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಅಲ್ಲಿ ಹಿಜಾಬ್​  (Hijab)ಮತ್ತು ಕೇಸರಿ ಶಾಲು ವಿವಾದ ಬಹುದಿನಗಳಿಂದ ನಡೆಯುತ್ತಿದ್ದರೂ, ಕುಂದಾಪುರ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದ ನಂತರ ಆ ವಿವಾದ ಇನ್ನಷ್ಟು ಹೊತ್ತಿ ಉರಿಯುತ್ತಿದೆ.  ಇದು ಕಾಲೇಜು, ಇಲ್ಲಿ ಎಲ್ಲರೂ ಸಮವಸ್ತ್ರ ಧರಿಸಿ ಬರಬೇಕು ಹೊರತು ಹಿಜಾಬ್​​ಗೆ ಅವಕಾಶವಿಲ್ಲ ಎಂಬುದು ಕಾಲೇಜಿನವರ ವಾದ. ಆದರೆ ಇದನ್ನು ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಆ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಶಿಕ್ಷಣದಿಂದ ವಂಚಿಸಿ ಕಳಿಸಿದ್ದು ಸರಿಯಲ್ಲ ಎಂದು ಒಂದೆಡೆ ರಾಜ್ಯದ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಷ್ಟ್ರಮಟ್ಟದಲ್ಲಿ ಮೆಹಬೂಬಾ ಮುಫ್ತಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಮತ್ತಿತರರೂ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇಂದು ಸರಸ್ವತಿ ಪೂಜೆ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ನಡೆಯುತ್ತಿರುವ ಜಿಜಾಬ್​ ವಿವಾದದ ಪ್ರಸ್ತಾಪವನ್ನಿಟ್ಟಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣದ ದಾರಿಯಲ್ಲಿ ಅವರು ಧರಿಸುವ ಹಿಜಾಬ್​ನ್ನು ಅಡ್ಡ ತರುತ್ತಿರುವುದು ಖೇದಕರ. ಈ ಮೂಲಕ ನಮ್ಮ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನೇ ಲೂಟಿ ಮಾಡಲಾಗುತ್ತಿದೆ. ತಾಯಿ ಸರಸ್ವತಿ ಪ್ರತಿಯೊಬ್ಬರಿಗೂ ಜ್ಞಾನ ನೀಡುತ್ತಾಳೆ. ಯಾರಿಗೂ ಬೇಧಭಾವ ಮಾಡಲಾರಳು ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಒಮರ್​ ಅಬ್ದುಲ್ಲಾ ಕೂಡ ಟ್ವೀಟ್ ಮೂಲಕ ಉಡುಪಿ ಹಿಜಾಬ್​ ವಿವಾದವನ್ನು ಖಂಡಿಸಿದ್ದಾರೆ. ಫೆ.3ರಂದು ಟ್ವೀಟ್ ಮಾಡಿರುವ ಮುಫ್ತಿ, ಕೇಂದ್ರ ಸರ್ಕಾರದ ಬೇಟಿ ಪಡಾವೋ, ಬೇಟಿ ಬಚಾವೋ ಎಂಬುದು ಒಂದು ಪೊಳ್ಳು ಘೋಷಣೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಮುಸ್ಲಿಂ ಹುಡುಗಿಯರು ಅವರ ಉಡುಪಿನಿಂದಾಗಿ ಶಿಕ್ಷಣ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಮುಸಲ್ಮಾನರನ್ನು ಕಡೆಗಣಿಸುವುದನ್ನು ಕಾನೂನು ಬದ್ಧಗೊಳಿಸುವುದೂ ಕೂಡ, ಗಾಂಧಿ ಭಾರತವನ್ನು, ಗೋಡ್ಸೆ ಭಾರತವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಇಡಲಾದ ಒಂದು ಹೆಜ್ಜೆ ಎಂದು ಹೇಳಿದ್ದರು. ಹಾಗೇ, ಕುಂದಾಪುರ ಕಾಲೇಜಿನಲ್ಲಿ ಹಿಜಾಬ್​ ಧರಿಸಿದ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟ್​ ಬಳಿಯೇ ತಡೆಯುತ್ತಿರುವ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಹಾಗೇ, ಟ್ವೀಟ್ ಮಾಡಿದ್ದ ಒಮರ್​ ಅಬ್ದುಲ್ಲಾ, ಪ್ರತಿ ವ್ಯಕ್ತಿಯೂ  ತನಗಿಷ್ಟವಾದ ಉಡುಪು ಧರಿಸಲು ಸ್ವತಂತ್ರ. ಇನ್ನೊಬ್ಬರು ಅದನ್ನು ಇಷ್ಟಪಡಲಿ, ಬಿಡಲಿ ಅದು ಅವರ ಹಕ್ಕು ಆಗಿರುತ್ತದೆ. ಜನಪ್ರತಿನಿಧಿಗಳು ಕೇಸರಿ ಬಟ್ಟೆ ಧರಿಸುತ್ತಾರೆ ಎಂದಾದ ಮೇಲೆ ಈ ಹುಡುಗಿಯರು ಯಾಕೆ ಹಿಜಾಬ್ ಧರಿಸಬಾರದು. ಮುಸ್ಲಿಮರು ಎರಡನೇ ದರ್ಜೆ ನಾಗರಿಕರಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಕೇಸರಿ ಖಾವಿ ಧರಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಬಿಜೆಪಿ ನಾಯಕಿ ಉಮಾಭಾರತಿ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ: ‘ಜೇಮ್ಸ್​’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಗುಡ್​ ನ್ಯೂಸ್​ ಕೇಳಿ ಖುಷಿಯಾದ ಪುನೀತ್​ ಫ್ಯಾನ್ಸ್​

Published On - 12:43 pm, Sat, 5 February 22