ರಾಜಕೀಯ ರಂಗ ಪ್ರವೇಶಿಸಿದ ಇ.ಡಿ. ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್
ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇ.ಡಿ. ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ತಯಾರಿ ನಡೆಸಿದ್ದು, ಬಿಜೆಪಿ ಹೈಕಮಾಂಡ್ ಟಿಕೇಟ್ ಕೂಡ ನೀಡಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಿಯೊಬ್ಬರು ಖಾಕಿ ಕಳಚಿಟ್ಟು ಖಾದಿ ತೊಟ್ಟು ರಾಜಕೀಯ ಪ್ರವೇಶ ಮಾಡಿದ್ದಾರೆ. ಹೈಪ್ರೊಫೈಲ್ ಕೇಸ್ ಗಳ ತನಿಖೆ ನಡೆಸಿ ಸುಪ್ರೀಂಕೋರ್ಟ್ ನಿಂದ ಶಹಬಾಸ್‌ಗಿರಿ ಪಡೆದ ಅಧಿಕಾರಿ ಈಗ ಜನತಾ ನ್ಯಾಯಾಲಯದಲ್ಲಿ ಜನರ ಮುಂದೆ ನಿಂತಿದ್ದಾರೆ. ಜನತಾ ನ್ಯಾಯಾಲಯ ಏನು ತೀರ್ಪು ಕೊಡುತ್ತೆ? ಆ ಅಧಿಕಾರಿಯ ಹಿನ್ನಲೆ ಏನು? ಎನ್ನುವುದರ ಫುಲ್ ರಿಪೋರ್ಟ್ ಇಲ್ಲಿದೆ ನೋಡಿ. ಮಾಜಿ ಗೃಹ ಸಚಿವ ಪಿ ಚಿದಂಬರಂ ಅವರಿಂದ ಹಿಡಿದು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ದೈತ್ಯರ ಬಗ್ಗೆ ಹಗರಣ, ಅವ್ಯವಹಾರದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ (ಇ.ಡಿ.) ರಾಜೇಶ್ವರ್ ಸಿಂಗ್ ಅವರ ಪಾತ್ರ ಇದೆ. ರಾಜೇಶ್ವರ್ ಸಿಂಗ್ ಅವರ ದೆಹಲಿ ಪ್ರಧಾನ ಇ.ಡಿ. ಕಚೇರಿಯಲ್ಲಿನ ಸಣ್ಣ ಮೇಜಿನ ಮೇಲೆ ಯಾವಾಗಲೂ ಕಡತಗಳಿಗೆ ಕೊರತೆ ಇರಲಿಲ್ಲ. ರಾಜೇಶ್ವರ್ ಸಿಂಗ್ ಇ.ಡಿ.ಯಲ್ಲಿ ಇದ್ದಷ್ಟು ದಿನಗಳ ಕಾಲ ಹೈ ಪ್ರೊಫೈಲ್ ಕೇಸ್ ಗಳ ತನಿಖೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ನ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇಂಥ ರಾಜೇಶ್ವರ್ ಸಿಂಗ್ ಈಗ ನೇರವಾಗಿ ರಾಜಕೀಯ ಅಖಾಡ ಪ್ರವೇಶಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋದ ಸರೋಜಿನಿ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಹೈಕಮ್ಯಾಂಡ್ ಸರೋಜಿನಿ ನಗರ ಕ್ಷೇತ್ರದ ಹಾಲಿ ಶಾಸಕಿ, ಸಚಿವೆ ಸ್ವಾತಿ ಸಿಂಗ್ ಅವರನ್ನು ಕೈ ಬಿಟ್ಟು ಸರೋಜಿನಿ ನಗರ ಕ್ಷೇತ್ರದ ಟಿಕೆಟ್ ಅನ್ನು ರಾಜೇಶ್ವರ್ ಸಿಂಗ್ ಗೆ ನೀಡಿದೆ.
ರಾಜೇಶ್ವರ್ ಸಿಂಗ್ ಕಳೆದ ವರ್ಷಾಂತ್ಯದಲ್ಲಿ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್)ಯಡಿ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ, ರಾಜೇಶ್ವರ್ ಸಿಂಗ್ ಅವರ ಮನವಿಯನ್ನು ಭಾರತ ಸರ್ಕಾರ ಸ್ವೀಕರಿಸಿದೆ ಎಂದು ತಿಳಿಸಿದ್ದಾರೆ. ಇ.ಡಿ.ಯಲ್ಲಿ ಸೇವೆಯಲ್ಲಿದ್ದಾಗ ರಾಜೇಶ್ವರ್ ಸಿಂಗ್ ಅವರು 2ಜಿ ಹಗರಣ, ಜಗನ್ ರೆಡ್ಡಿ ಪ್ರಕರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ, ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ, ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ ಮುಂತಾದ ಪ್ರಕರಣಗಳ ತನಿಖೆ ನಡೆಸಿದ್ದಾರೆ. 1994-ಬ್ಯಾಚ್ ನ ಪ್ರಾಂತೀಯ ಪೊಲೀಸ್ ಸೇವೆ (PPS) ಅಧಿಕಾರಿ, ಸಿಂಗ್ ಅವರು ಲಕ್ನೋದ ಗೋಮ್ತಿನಗರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ರಾಜೇಶ್ವರ್ ಸಿಂಗ್ ಪ್ರಯಾಗ್‌ರಾಜ್‌ನಲ್ಲಿಯೂ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. 2009 ರಲ್ಲಿ ನಿಯೋಜನೆಯ ಮೇಲೆ ಇ.ಡಿ.ಗೆ ಹೋದರು ಮತ್ತು ನಂತರ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಇ.ಡಿ.ಯಲ್ಲಿ ಹುದ್ದೆಗಳನ್ನು ಪಡೆದರು. ಸುಮಾರು 10 ವರ್ಷಗಳ ಕಾಲ ಉತ್ತರ ಪ್ರದೇಶ ಪೊಲೀಸ್ ಮತ್ತು 14 ವರ್ಷಗಳ ಇ.ಡಿ. ಸೇವೆ ಸಲ್ಲಿಸಿದ ನಂತರ ಅವರು ತಮ್ಮ ರಾಜಕೀಯ ಇನ್ನಿಂಗ್ಸ್‌ಗೆ ಸಿದ್ಧರಾಗಿದ್ದಾರೆ.
ರಾಜೇಶ್ವರ್ ಸಿಂಗ್ ಅವರು ಇಡಿ ಲಕ್ನೋದ ಕಮಾಂಡ್ ಅನ್ನು ವಹಿಸಿಕೊಂಡ ನಂತರ, ಅವರು ನಕಲಿ ಸ್ಕೀಮ್‌ಗಳು, ಗೋಮ್ತಿ ರಿವರ್‌ಫ್ರಂಟ್ ಹಗರಣ, ಸ್ಮಾರಕ ಹಗರಣ, ಗಣಿ ಹಗರಣ ಮತ್ತು ಬೈಕ್ ಬೋಟ್ ಹಗರಣಗಳ ತನಿಖೆಯನ್ನು ಪ್ರಾರಂಭಿಸಿದರು. ಮುಖ್ತಾರ್ ಅನ್ಸಾರಿ ಮತ್ತು ಅತೀಕ್ ಅಹ್ಮದ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಂಗ್ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನೂ ಪಡೆದಿದ್ದಾರೆ. ಇ.ಡಿ. ಯಲ್ಲಿ ಅವರ ಅವಧಿಯಲ್ಲಿ, ರಾಜೇಶ್ವರ್ ಸಿಂಗ್ 4,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ ಕಾಯ್ದೆ) ಅಡಿಯಲ್ಲಿ ವಶಪಡಿಸಿಕೊಂಡರು.
ಜನರು ಮತ್ತು ಪತ್ರಕರ್ತರನ್ನು ಭೇಟಿ ಮಾಡಲು ಅವರು ಎಂದಿಗೂ ಹಿಂಜರಿಯುತ್ತಿರಲಿಲ್ಲ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ. ತನ್ನ ಕಛೇರಿಗೆ ಆಗಾಗ ಬರುತ್ತಿದ್ದವರನ್ನು ಗಣನೆಗೆ ತೆಗೆದುಕೊಂಡು ಬಂದವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದರು. ತಮ್ಮ ಸಿಬ್ಬಂದಿ ಪ್ರಮುಖ ಕಡತಗಳನ್ನು ಇಡಲು ಚಿಕ್ಕ ಟೇಬಲ್ ಹಾಕಿದ್ದರು. ಇ.ಡಿಯಲ್ಲಿ ಅವರ ಆರಂಭಿಕ ದಿನಗಳಿಂದಲೂ ಅವರನ್ನು ಬಲ್ಲ ಜನರು ಹೇಳುವಂತೆ, ಅವರು ಒಬ್ಬ ವ್ಯಕ್ತಿಯನ್ನು ಒಮ್ಮೆ ಭೇಟಿಯಾದರೂ ಜನರನ್ನು ನೆನಪಿಸಿಕೊಳ್ಳುವ ಅಧಿಕಾರಿ. ಹಲವಾರು ಸಂದರ್ಭಗಳಲ್ಲಿ, ಅವರು ತಮ್ಮ ತನಿಖೆಗಾಗಿ ನ್ಯಾಯಾಲಯದಿಂದ ಮೆಚ್ಚುಗೆ ಪಡೆದರು. ರಾಜೇಶ್ವರ್ ಸಿಂಗ್ ಅವರ ಪತ್ನಿ ಲಕ್ಷ್ಮಿ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಲಕ್ನೋದಲ್ಲಿ ಐಜಿ ರೇಂಜ್ ನಲ್ಲಿ ನಿಯೋಜಿಸಲಾಗಿದೆ. ಅವರ ಸೋದರ ಮಾವ ರಾಜೀವ್ ಕೃಷ್ಣ ಆಗ್ರಾ ವಲಯದ ಎಡಿಜಿ. ಮತ್ತೊಬ್ಬ ಸೋದರ ಮಾವ ವೈ.ಪಿ. ಸಿಂಗ್ ಕೂಡ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಅವರು ವಿಆರ್‌ಎಸ್ ಅನ್ನು ಪಡೆದಿದ್ದಾರೆ.
ರಾಜೇಶ್ವರ್ ಸಿಂಗ್ ಅವರ ತಂದೆ ದಿವಂಗತ ರಾನ್ ಬಹದ್ದೂರ್ ಸಿಂಗ್ ಕೂಡ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿದ್ದರು. ಧನಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ನಿಂದ ಬಿಟೆಕ್ ಪದವಿ ಪಡೆದ ನಂತರ ರಾಜೇಶ್ವರ್ ಸಿಂಗ್ ಮಾನವ ಹಕ್ಕುಗಳಲ್ಲಿ ಎಲ್‌ಎಲ್‌ಬಿ ಮತ್ತು ಪಿಎಚ್‌ಡಿ ಮಾಡಿದ್ದಾರೆ. ಅವರ ಸಹೋದರ ರಾಮೇಶ್ವರ್ ಸಿಂಗ್ ಅವರು ಆದಾಯ ತೆರಿಗೆ ಆಯುಕ್ತರಾಗಿದ್ದಾರೆ. ಅವರ ಸಹೋದರಿ ಮೀನಾಕ್ಷಿ ಐಆರ್.ಎಸ್ ಅಧಿಕಾರಿಯಾಗಿದ್ದಾರೆ. ರಾಜೇಶ್ವರ್ ಸಿಂಗ್ ಅವರ ಹಿರಿಯ ಸಹೋದರಿ ಅಭಾ ಸಿಂಗ್ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ. ಅಭಾ ಸಿಂಗ್ ಭಾರತೀಯ ಅಂಚೆ ಸೇವೆಯಲ್ಲಿದ್ದರು.
ರಾಜೇಶ್ವರ್ ಸಿಂಗ್ ಈಗಾಗಲೇ ಲಕ್ನೋದ ಸರೋಜಿನಿ ನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕಳೆದ ಬಾರಿ ಸರೋಜಿನಿ ನಗರ ಕ್ಷೇತ್ರದಿಂದ ಸ್ವಾತಿ ಸಿಂಗ್ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಸ್ವಾತಿ ಸಿಂಗ್, ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಸಚಿವೆಯೂ ಆಗಿದ್ದರು. ಆದರೇ, ಹಾಲಿ ಶಾಸಕಿ, ಸಚಿವೆಯನ್ನು ಕೈ ಬಿಟ್ಟು ಬಿಜೆಪಿ ಹೈಕಮ್ಯಾಂಡ್ ರಾಜೇಶ್ವರ್ ಸಿಂಗ್ ಗೆ ಟಿಕೆಟ್ ನೀಡಿರುವುದು ವಿಶೇಷ. ಕಳೆದ ಬಾರಿ ಸ್ವಾತಿ ಸಿಂಗ್ ಪತಿ, ದಯಾಶಂಕರ್ ಸಿಂಗ್ ಸರೋಜಿನಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೇ, ದಯಾಶಂಕರ್ ಸಿಂಗ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಮಾತನಾಡಿದ್ದರು. ಇದರಿಂದಾಗಿ ದಯಾಶಂಕರ್ ಸಿಂಗ್ ಗೆ ಟಿಕೆಟ್ ನೀಡದೇ, ಬಿಜೆಪಿ ಪತ್ನಿ ಸ್ವಾತಿ ಸಿಂಗ್ ಗೆ ಟಿಕೆಟ್ ನೀಡಿತ್ತು. ಸ್ವಾತಿ ಸಿಂಗ್ ಚುನಾವಣೆಯನ್ನು ಗೆದ್ದೇಬಿಟ್ಟಿದ್ದರು. ಈಗ ರಾಜೇಶ್ವರ್ ಸಿಂಗ್ ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಟಿಕೆಟ್ ಪಡೆದ ಬಳಿಕ ರಾಜೇಶ್ವರ್ ಸಿಂಗ್ ಸೀದಾ ಸ್ವಾತಿ ಸಿಂಗ್ ಮನೆಗೆ ಹೋಗಿ ಸೌಜನ್ಯದ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಈ ಬಾರಿಯೂ ಸ್ವಾತಿ ಸಿಂಗ್ ಮತ್ತು ಪತಿ ದಯಾಶಂಕರ್ ಸಿಂಗ್ ಇಬ್ಬರೂ ಸರೋಜಿನಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೇ, ಬಿಜೆಪಿ ಹೈಕಮಾಂಡ್ ಗಂಡ-ಹೆಂಡತಿ ಇಬ್ಬರನ್ನೂ ಬಿಟ್ಟು ರಾಜೇಶ್ವರ್ ಸಿಂಗ್ ಗೆ ಟಿಕೆಟ್ ನೀಡಿದೆ.
ರಾಜೇಶ್ವರ್ ಸಿಂಗ್ ಗೆ ಟಿಕೆಟ್ ನೀಡಿರುವುದಕ್ಕೆ ಸ್ವಾತಿ ಸಿಂಗ್, ದಯಾಶಂಕರ್ ಸಿಂಗ್ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ರಾಜೇಶ್ವರ್ ಸಿಂಗ್ ಹಗರಣಗಳನ್ನು ಬಯಲಿಗೆಳೆದಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಿದ್ದಾರೆ. ನಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ವಾತಿ ಸಿಂಗ್ ಹಾಗೂ ದಯಾಶಂಕರ್ ಸಿಂಗ್ ಹೇಳಿದ್ದಾರೆ. ಸ್ವಾತಿ ಸಿಂಗ್ ಗೆ ಎಂಎಲ್.ಸಿ ಹುದ್ದೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಯಾಶಂಕರ್ ಸಿಂಗ್ ಗೆ ಬಲಿಯಾ ಕ್ಷೇತ್ರದಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ. ಬಿಜೆಪಿ ಪಕ್ಷದಲ್ಲಿ ಸೇವೆಯಲ್ಲಿದ್ದ ಅಧಿಕಾರಿಗಳನ್ನು ರಾಜಕಾರಣಕ್ಕೆ ಕರೆ ತಂದು ಚುನಾವಣಾ ಅಖಾಡಕ್ಕೆ ಇಳಿಸುವುದು ಇದೇ ಮೊದಲೇನೂ ಅಲ್ಲ. ಯುಪಿಎ ಸರ್ಕಾರದ ಕಾಲದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿಯಾಗಿದ್ದ ಆರ್.ಕೆ.ಸಿಂಗ್ ಗೆ ಬಿಹಾರದ ಅರಾ ಕ್ಷೇತ್ರದ ಲೋಕಸಭಾ ಟಿಕೆಟ್ ನೀಡಿತ್ತು. ಸತತ 2ನೇ ಬಾರಿಗೆ ಅರಾ ಕ್ಷೇತ್ರ ಗೆದ್ದಿರುವ ಆರ್.ಕೆ.ಸಿಂಗ್ ಈಗ ಕೇಂದ್ರದಲ್ಲಿ ಇಂಧನ ಖಾತೆ ಸಚಿವರಾಗಿದ್ದಾರೆ. ಯಶವಂತ್ ಸಿನ್ಹಾ ಕೂಡ ಅಖಿಲ ಭಾರತ ನಾಗರಿಕ ಸೇವೆಯ ಅಧಿಕಾರಿಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:
Published On - 3:01 pm, Sat, 5 February 22