ದೆಹಲಿ: ಇಂದು ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಛನ್ನಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಜ್ಯದ 16ನೇ ಮುಖ್ಯಮಂತ್ರಿಯಾಗಿರುವ ಚರಣ್ಜಿತ್ ಸಿಂಗ್ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿಲ್ಲ ಎಂದು ಹೇಳಲಾಗಿದೆ. ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಣ್ಣ ಪ್ರಮಾಣದಲ್ಲಿ ನಡೆಯಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಬಹುತೇಕ ಪ್ರಮುಖ ನಾಯಕರು ಆಗಮಿಸುವುದಿಲ್ಲ ಎಂದು ಮೂಲಗಳಿಂದ ಗೊತ್ತಾಗಿದೆ. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ, ಕಾಂಗ್ರೆಸ್ ಚರಣ್ಜಿತ್ ಸಿಂಗ್ ಛನ್ನಿ ಅವರನ್ನು ಸರ್ವಾನುಮತದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಪಂಜಾಬ್ನಲ್ಲಿ ಹಿಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಬಹುಕಾಲದ ಜಗಳವೀಗ ಅಮರಿಂದರ್ ಸಿಂಗ್ ರಾಜೀನಾಮೆಯಲ್ಲಿ ಮುಕ್ತಾಯವಾಗಿದ್ದು ಗೊತ್ತೇ ಇದೆ. ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ 2022ರಲ್ಲಿ ನಡೆಯಲಿರುವ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆಯಾಗಿದೆ. ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಮರುದಿನ ಛನ್ನಿ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರು ಸಿಖ್ ದಲಿತ ನಾಯಕರಾಗಿದ್ದಾರೆ. ಚರಣ್ಜಿತ್ ಸಿಂಗ್ ಛನ್ನಿ ಅವರು ಅಮರಿಂದರ್ ಸಿಂಗ್ ಕ್ಯಾಬಿನೆಟ್ನಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಮುಖ್ಯಮಂತ್ರಿ ಹುದ್ದೆಗೆ ಏರಿದ ಮೊದಲ ದಲಿತ ಸಿಖ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಚರಣ್ಜಿತ್ ಸಿಂಗ್ ಛನ್ನಿ ಗಾಂಧಿ ಕುಟುಂಬಕ್ಕೆ ಆಪ್ತರು ಎಂದು ಹೇಳಲಾಗಿದೆ. ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ನವಜೋತ್ ಸಿಂಗ್ ಸಿಧು ಮತ್ತು ಸುಖ್ಜಿಂದರ್ ಸಿಂಗ್ ರಂಧಾವಾ ಹೆಸರು ಕೇಳಿಬಂದಿತ್ತು. ಸುನಿಲ್ ಜಾಖರ್ ಮತ್ತು ಪ್ರತಾಪ್ ಸಿಂಗ್ ಬಜ್ವಾ ಹೆಸರು ಕೂಡ ಸುಳಿದಾಡಿತ್ತು. ಬಳಿಕ, ಭಾನುವಾರ ಬೆಳಗ್ಗೆ ಅಂಬಿಕಾ ಸೋನಿ ಹೆಸರು ಕೂಡ ಪ್ರಸ್ತಾಪ ಆಗಿತ್ತು. ಅಂತಿಮವಾಗಿ ಚರಣ್ಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಈ ವರ್ಷ 18.90 ಲಕ್ಷಕ್ಕೆ ಹರಾಜಾಯ್ತು ಹೈದರಾಬಾದ್ನ ಚಿನ್ನದ ಲೇಪಿತ ಬಾಲಾಪುರ ಗಣೇಶನ ಲಡ್ಡು
ಬೆಂಗಳೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ; ಟ್ರಾಫಿಕ್ ಸಮಸ್ಯೆ ಸಾಧ್ಯತೆ ಹೆಚ್ಚು
(Congress leader Rahul Gandhi unlikely to attend oath taking ceremony of Charanjit Singh Channi in Punjab)