ಯಾವ ದೇಶದ ಒತ್ತಡದಿಂದ ಕಾಂಗ್ರೆಸ್ ಮುಂಬೈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಿಲ್ಲವೆಂಬುದು ಬಯಲಾಗಲಿ; ಪ್ರಧಾನಿ ಮೋದಿ ಸವಾಲು
ಪ್ರಧಾನ ಮಂತ್ರಿ ಮೋದಿ ಅವರು ಇಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದು, ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 1ನೇ ಹಂತವನ್ನು ಉದ್ಘಾಟಿಸಿದ್ದಾರೆ. 19,650 ಕೋಟಿ ರೂ. ವೆಚ್ಚದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ವೇಳೆ ನವಿ ಮುಂಬೈನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬೈ ಭಾರತದ ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾಗಿದೆ, ಅದಕ್ಕಾಗಿಯೇ 2008ರಲ್ಲಿ ಭಯೋತ್ಪಾದಕರು ಮುಂಬೈಯನ್ನು ಗುರಿಯಾಗಿಸಿಕೊಂಡರು ಎಂದಿದ್ದಾರೆ.

ಮುಂಬೈ, ಅಕ್ಟೋಬರ್ 8: ನವಿ ಮುಂಬೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಕಾಂಗ್ರೆಸ್ ಪಕ್ಷವು ದುರ್ಬಲಗೊಂಡಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷದ ರಾಜಕೀಯ ನಿರ್ಧಾರಗಳು ಬೇರೆ ದೇಶದ ಒತ್ತಡದಿಂದ ಪ್ರಭಾವಿತವಾಗಿವೆ. ಅದೇ ಕಾರಣಕ್ಕೆ ಮುಂಬೈ ದಾಳಿಗೆ ಆಗಿನ ಸರ್ಕಾರ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಎಂದು ತೀಕ್ಷ್ಣವಾದ ವಾಗ್ದಾಳಿ ನಡೆಸಿದರು.
ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ 1ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬೈ ಭಾರತದ ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ 2008ರಲ್ಲಿ ಭಯೋತ್ಪಾದಕರು ಈ ನಗರವನ್ನು ಗುರಿಯಾಗಿಸಿಕೊಂಡರು ಎಂದು ಹೇಳಿದರು.
ಇದನ್ನೂ ಓದಿ: ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
“ಮುಂಬೈ ಆರ್ಥಿಕ ರಾಜಧಾನಿ ನಗರ ಮಾತ್ರವಲ್ಲ, ಭಾರತದ ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾಗಿದೆ. 2008ರಲ್ಲಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಲು ಇದೇ ಕಾರಣ. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ ದೌರ್ಬಲ್ಯದ ಸಂದೇಶವನ್ನು ನೀಡಿತು” ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
#WATCH | Navi Mumbai, Maharashtra | Prime Minister Narendra Modi felicitated in Navi Mumbai
PM Modi inaugurated Phase 1 of the Navi Mumbai International Airport, built at a cost of around Rs 19,650 crore.
(Source: DD News) pic.twitter.com/jHhqFCbxZL
— ANI (@ANI) October 8, 2025
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
“ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಗೃಹ ಸಚಿವರೊಬ್ಬರು ಇದನ್ನು ಒಪ್ಪಿಕೊಂಡಿದ್ದಾರೆ. ಮುಂಬೈ ದಾಳಿಯ ನಂತರ ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು, ಆದರೆ ಬೇರೆ ದೇಶದ ಒತ್ತಡದಿಂದಾಗಿ ಆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ಭದ್ರತಾ ಪಡೆಗಳನ್ನು ತಡೆದುನಿಲ್ಲಿಸಬೇಕಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
The inauguration of Phase 1 of Navi Mumbai International Airport and other connectivity projects will strengthen the city’s position as a global hub of growth and opportunity. https://t.co/lYUzp3noBX
— Narendra Modi (@narendramodi) October 8, 2025
ಇದನ್ನೂ ಓದಿ: Video: ಭಾರತಕ್ಕೆ ಬಂದಿಳಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್
ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಂತೆ ಯಾವ ರಾಷ್ಟ್ರ ಅವರ ಮೇಲೆ ಅಂತಹ ಒತ್ತಡ ಹೇರಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮೋದಿ ಕಾಂಗ್ರೆಸ್‌ಗೆ ಸವಾಲು ಹಾಕಿದರು. “ಯಾವ ದೇಶದ ಒತ್ತಡದಿಂದ ಅಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆಯೋ ಆ ದೇಶದ ಹೆಸರನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು. ಯುಪಿಎ ಸರ್ಕಾರದ ಆ ನಿರ್ಧಾರದಿಂದಾಗಿ ಭಾರತವು ಬಹಳಷ್ಟು ತೊಂದರೆ ಅನುಭವಿಸಬೇಕಾಯಿತು. ವಿದೇಶಿ ಒತ್ತಡದಿಂದ ಕಾಂಗ್ರೆಸ್ ಸರ್ಕಾರ ಸೇನೆಯನ್ನು ತಡೆದಿದ್ದು ಭಯೋತ್ಪಾದಕರನ್ನು ಬಲಪಡಿಸಿ, ಅವರಿಗೆ ಕಾವಲಾಯಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಕಾಂಗ್ರೆಸ್‌ನ ದೌರ್ಬಲ್ಯವು ಭಯೋತ್ಪಾದಕರನ್ನು ಬಲಪಡಿಸಿತು. ಭಾರತ ದೇಶವು ಪದೇ ಪದೇ ಜೀವಗಳನ್ನು ಬಲಿಕೊಡುವ ಮೂಲಕ ಈ ತಪ್ಪಿಗೆ ಬೆಲೆ ತೆರಬೇಕಾಯಿತು. ಆದರೆ, ನಮಗೆ ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಗಿಂತ ಬೇರೇನೂ ಮುಖ್ಯವಲ್ಲ. ಈಗಿನ ನಮ್ಮ ಭಾರತ ತನ್ನ ಶತ್ರುಗಳನ್ನು ಅವರ ಸ್ವಂತ ಮನೆಗಳಿಗೆ ನುಗ್ಗಿ ಸಾಯಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Wed, 8 October 25




