ಲೋಕಸಭಾ ಸ್ಪೀಕರ್ ನಿರ್ಣಯ ಪ್ರಶ್ನಿಸಿ ಚಿರಾಗ್ ಪಾಸ್ವಾನ್ ಸಲ್ಲಿಸಿದ್ದ ಮನವಿ ದೆಹಲಿ ಹೈಕೋರ್ಟ್​ನಲ್ಲಿ ತಿರಸ್ಕೃತ

ಲೋಕಸಭೆಯಲ್ಲಿ ಪಕ್ಷವೊಂದರ ನಾಯಕತ್ವವನನ್ನು ಬದಲಿಸುವುದು ಆ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ. ಆದರೆ, ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರು ಸದನದ ನಿಯಮಗಳು ಮತ್ತು ಸ್ವಾಭಾವಿಕ ನ್ಯಾಯದ ತತ್ವಗಳಿಗೆ ವ್ಯತಿರಿಕ್ತವಾಗಿ ಕ್ರಮ ತೆಗೆದುಕೊಂಡಿದ್ದಾರೆ, ಮತ್ತು ಯಾರ ಗಮನಕ್ಕೂ ತಾರದೆ ಸದರಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ಹೇಳಿದ್ದರು.

ಲೋಕಸಭಾ ಸ್ಪೀಕರ್ ನಿರ್ಣಯ ಪ್ರಶ್ನಿಸಿ ಚಿರಾಗ್ ಪಾಸ್ವಾನ್ ಸಲ್ಲಿಸಿದ್ದ ಮನವಿ ದೆಹಲಿ ಹೈಕೋರ್ಟ್​ನಲ್ಲಿ ತಿರಸ್ಕೃತ
ದೆಹಲಿ ಹೈಕೋರ್ಟ್​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2021 | 7:50 PM

ನವದೆಹಲಿ: ಲೋಕ ಸಭಾ ಸ್ಪೀಕರ್ ಅವರ ನಿರ್ಣಯವೊಂದನ್ನು ಪ್ರಶ್ನಿಸಿ ಲೋಕ ಜನ ಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಮನವಿದಾರರು ಮಾಡಿರುವ ದಾವೆಗಳಲ್ಲಿ ಯಾವುದೇ ಹುರುಳಿಲ್ಲ ಅಂತ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಅರ್ಜಿಯನ್ನು ತಿಸ್ಕರಿಸಿದರು. ಈ ಅರ್ಜಿ ಸಲ್ಲಿಸುವ ಮೂಲಕ ಅರ್ಜಿದಾರರು ವೈಯಕ್ತಿಕ ವೈಷಮ್ಯಗಳನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ‘ಸದನದೊಳಗಿನ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಅಧಿಕಾರ ಸ್ಪೀಕರ್​ ಅವರಿಗಿದೆ,’ ಎಂದು ಅರ್ಜಿಯನ್ನು ತಿರಸ್ಕರಿಸುತ್ತಾ ಕೋರ್ಟ್​ ಹೇಳಿತು.

ಲೋಕಸಭೆಯಲ್ಲಿ ಪಕ್ಷವೊಂದರ ನಾಯಕತ್ವವನನ್ನು ಬದಲಿಸುವುದು ಆ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ. ಆದರೆ, ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರು ಸದನದ ನಿಯಮಗಳು ಮತ್ತು ಸ್ವಾಭಾವಿಕ ನ್ಯಾಯದ ತತ್ವಗಳಿಗೆ ವ್ಯತಿರಿಕ್ತವಾಗಿ ಕ್ರಮ ತೆಗೆದುಕೊಂಡಿದ್ದಾರೆ, ಮತ್ತು ಯಾರ ಗಮನಕ್ಕೂ ತಾರದೆ ಸದರಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ಹೇಳಿದ್ದರು.

ಅರ್ಜಿದಾರರ ಪರವಾಗಿ ವಿಚಾರನೆ ನಡೆಯುವಾಗ ವಾದಿಸಿದ ವಕೀಲ ಎ ಕೆ ಬಾಜ್ಪಾಯಿ ಅವರು, ಲೋಕಸಭೆಯಲ್ಲಿ ಚಿರಾಗ್ ಪಾಸ್ವಾನ್ ಅವರನ್ನು ಲೋಕ ಜನ ಶಕ್ತಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಸರಿಸಿ ಅವರ ಸ್ಥಾನದಲ್ಲಿ ಪಶುಪತಿ ಕುಮಾರ್ ಪಾರಸ್ ಅವರನ್ನು ಪರಿಗಣಿಸಿದ್ದು ನಿರಂಕುಶಕಾರಿ ಕ್ರಮ ಮತ್ತು ಪಕ್ಷದ ಸಂವಿಧಾನಕ್ಕೆ ವಿರುದ್ಧವಾದದ್ದು,’ ಎಂದು ಹೇಳಿದರು.

‘ಈ ನಿರ್ಣಯವನ್ನು ಪಾರ್ಲಿಮೆಂಟರಿ ಬೋರ್ಡ್ ತೆಗೆದುಕೊಳ್ಳಬೇಕು. ಲೋಕಸಭೆಯ ಪ್ರಧಾನ ಕಾರ್ಯದರ್ಶಿ ತೆಗೆದುಕೊಂಡಿರುವ ಕ್ರಮ ಪಕ್ಷದ ಸಂವಿಧಾನಕ್ಕೆ ವಿರುದ್ಧವಾಗಿದೆ,’ ಎಂದು ಬಾಜ್ಪಾಯಿ ವಾದಿಸಿದರು.

ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಅರ್ಜಿದಾರರ ಮನವಿಯು ಮೂಲ ಸಾಂವಿಧಾನಿಕ ಅಂಶಗಳ ಬಗ್ಗೆ ಅಸ್ಪಷ್ಟವಾಗಿದೆ,’ ಎಂದು ಹೇಳಿದರು.

‘ಆಯ್ಕೆಯಾಗಿರುವ 6 ಸಂಸದರಲ್ಲಿ 5 ಜನ ಮನವಿದಾರರಲ್ಲ. ಪಕ್ಷದ ಸಂವಿಧಾನವನನ್ನು ಜಾರಿಗೊಳಿಸಲು ಮನವಿ ಸಲ್ಲಿಸಲಾಗಿದೆ. ಆ ಐವರಲ್ಲಿ ಒಬ್ಬರು ನ್ಯಾಯಾಲಯದ ಮುಂದೆ ಬಂದಿದ್ದಾರೆ ಎಂದು ಭಾವಿಸೋಣ, ಆಗ ರಿಟ್ ಆ ವಿವಾದವನ್ನು ಹೇಗೆ ಪರಿಶೀಲನೆ ಮಾಡುತ್ತಾರೆ. ಈ ವಿವಾದವು ನ್ಯಾಯಾಂಗ ಪರಿಶೀಲನೆಗೆ ಸೂಕ್ತವಾದ ವಿಷಯವೇ ಅಲ್ಲ,’ ಎಂದು ಮೆಹ್ತಾ ಹೇಳಿದರು.

‘ಕೋರ್ಟ್​ಗೆ ಈಗ ಸ್ಪಷ್ಟವಾಗಿದೆ. ಇದನ್ನು ನೀವು ಮುಂದುವರಿಸಲು ಇಚ್ಛಿಸುವುದಾದರೆ ಅದು ನಿಮ್ಮಿಷ್ಟ. ನನ್ನ ಅಭಿಪ್ರಾಯಗಳನ್ನು ನಾನು ತಿಳಿಸುತ್ತೇನೆ. ಇದು ನಿಮ್ಮ ಪಕ್ಷದೊಳಗಣ ಕಲಹವೆಂದು ನಾನು ಹೇಳುತ್ತೇನೆ. ಅದಕ್ಕೆ ಪರಿಹಾರಗಳನ್ನು ನೀವೇ ಕಂಡುಕೊಳ್ಳಬೇಕು,’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಅದಕ್ಕೆ ಅರ್ಜಿದಾರರ ಪರ ವಕೀಲರು, ‘ಮುಖ್ಯ ಸಚೇತಕರು ಕೇವಲ ಒಬ್ಬ ಕಮ್ಯುನಿಕೇಟರ್​​ ಆಗಿರುತ್ತಾರೆ, ಸದನದಲ್ಲಿ ಕಲಾಪ ನಡೆಯುವಾಗ ಅವರು ಯಾವುದೇ ಪಾತ್ರ ವಹಿಸುವುದಿಲ್ಲ. ಆದರೆ ಇಲ್ಲಿ ಮೂರನೇ ಪ್ರತಿವಾದಿಯಾಗಿರುವ ಪಶುಪತಿ ಪಾರಸ್ ಅವರು ಪಕ್ಷದ ನಿಲುವಿಗೆ ವಿರದ್ಧವಾಗಿ ತಾವೇ ನಿರ್ಧಾರ ತೆಗೆದುಕೊಂಡಿದ್ದಾರೆ ಮತ್ತು ಸೂಕ್ತವಾದ ಕ್ರಮವನ್ನು ಪಾಲಿಸದೆ ಸ್ಪೀಕರ್ ಅವರು ಅವಸರದ ನಿರ್ಣಯ ತೆಗೆಗಕೊಂಡಿದ್ದಾರೆ,’ ಎಂದ ವಾದಿಸಿದರು.

ಪಕ್ಷದ ಅಥವಾ ಸದನದಲ್ಲಿ ಪಕ್ಷದ ನಾಯಕ ಮನವಿದಾರ ನಂ. 1 (ಚಿರಾಗ್ ಪಾಸ್ವಾನ್) ಅವರ ಗಮನಕ್ಕೆ ತಾರದೆ ಅಂಥ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಮುಖ್ಯ ಸಚೇತಕರಿಗೆ ಯಾವತ್ತೂ ಇಲ್ಲ. ಸದನದಲ್ಲಿ ಪಕ್ಷದ ನಾಯಕನನ್ನು ಬದಲಿಸುವುದು ಸ್ಪೀಕರ್ ನೀಡುವ ಸೂಚನೆ ಮೇಲೆ ಅವಲಂಬಿತವಾಗಿರುತ್ತದೆ ಆದರೆ, ಸ್ಪೀಕರ್ ಅಸ್ತಿತ್ವದಲ್ಲಿರುವ ನಾಯಕನ (ಚಿರಾಗ್ ಪಾಸ್ವಾನ್) ಜೊತೆ ಪರಾಮರ್ಶೆ ನಡೆಸಿ ಸೂಚನೆ ನೀಡಬೇಕಾಗುತ್ತದೆ. ಹಾಗಾಗಿ ಇಲ್ಲಿ ತಗೆದುಕೊಂಡಿರುವ ನಿರ್ಣಯವು , ನ್ಯಾಯಸಮ್ಮತವಲ್ಲ,’ ಎಂದು ಅವರು ವಾದಿಸಿದರು.

ಜೂನ್ 13ರಂದು ಸಂಸದರಾದ ಪಶುಪತಿ ಪಾರಸ್, ಬೀನಾ ದೇವಿ, ಚೌಧುರಿ ಮೆಹಬೂಬ್ ಅಲಿ, ಚಂದನ್ ಸಿಂಗ್ ಮತ್ತು ಪ್ರಿನ್ಸ್ ರಾಜ್ ಅವರು ಲೋಕ ಸಭಾ ಸ್ಪೀಕರ್ ಓಮ್ ಬಿರ್ಲಾ ಅವರಿಗೆ ಬರೆದ ಪತ್ರದ ಆಧಾರದ ಮೇಲೆಯೇ, ಪಕ್ಷದ ಪರಿಷ್ಕೃತ ನಾಯಕತ್ವ ಕುರಿತಂತೆ ಒಂದು ಸರ್ಕ್ಯೂಲರ್ ಜಾರಿಗೊಳಿಸಲಾಗಿ ಅದರಲ್ಲಿ ಪಾರಸ್ ಅವರು ಸದನದಲ್ಲಿ ಎಲ್​ಜಿಪಿ ಪಕ್ಷದ ನಾಯಕ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Chirag Paswan ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಯಿತು’: ಚಿರಾಗ್ ಪಾಸ್ವಾನ್