Covid XXB.1.5 Variant: ಭಾರತಕ್ಕೆ ಕಾಲಿಟ್ಟ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್ಎಕ್ಸ್ಬಿ.1.5
Covid-19 Updates; ನ್ಯೂಯಾರ್ಕ್ನಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್ಎಕ್ಸ್ಬಿ.1.5 ದೇಶಕ್ಕೆ ವಕ್ಕರಿಸಿರುವ ಬಗ್ಗೆ ವರದಿಯಾಗಿದೆ. ಗುಜರಾತ್ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.
ನವದೆಹಲಿ: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ (Coronavirus) ಒಮಿಕ್ರಾನ್ ರೂಪಾಂತರಿ BF.7 (Omicron BF.7) ಭಾರತದಲ್ಲಿ ಹರಡುತ್ತಿರುವ ಬೆನ್ನಲ್ಲೇ ನ್ಯೂಯಾರ್ಕ್ನಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಮತ್ತೊಂದು ಒಮಿಕ್ರಾನ್ ರೂಪಾಂತರಿ ಎಕ್ಸ್ಎಕ್ಸ್ಬಿ.1.5 (XXB.1.5 Variant) ದೇಶಕ್ಕೆ ವಕ್ಕರಿಸಿರುವ ಬಗ್ಗೆ ವರದಿಯಾಗಿದೆ. ಕೋವಿಡ್ನ (Covid-19) ಹೊಸ ರೂಪಾಂತರಿ ಗುಜರಾತ್ನಲ್ಲಿ ಪತ್ತೆಯಾಗಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಅಮೆರಿಕದಲ್ಲಿ ಪ್ರಸ್ತುತ ವರದಿಯಾಗುತ್ತಿರುವ ಶೇಕಡಾ 40ಕ್ಕಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳಿಗೆ ಒಮಿಕ್ರಾನ್ XBB.1.5 ರೂಪಾಂತರಿ ಕಾರಣ ಎಂಬುದನ್ನು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ದೃಢಪಡಿಸಿದೆ.
ಒಮಿಕ್ರಾನ್ XBB.1.5 ಹೆಚ್ಚು ಸೋಂಕುಕಾರಕ; ಅಮೆರಿಕದ ತಜ್ಞರು
ಒಮಿಕ್ರಾನ್ XBB.1.5 ರೂಪಾಂತರಿ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಸೋಂಕು ಉಂಟುಮಾಡಬಲ್ಲಂಥದ್ದಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ತಿಳಿಸಿದ್ದಾರೆ. ಈ ರೂಪಾಂತರಿಯು BQ ಮತ್ತು XBB ಗಿಂತಲೂ ಹೆಚ್ಚು ಸೋಂಕುಕಾರಕ ಎಂದು ಅವರು ಹೇಳಿದ್ದಾರೆ. ಬಹುಶಃ ಜಗತ್ತು ಈಗ ಎದುರಿಸುತ್ತಿರುವ ಅತ್ಯಂತ ಕೆಟ್ಟ ಕೋವಿಡ್ ರೂಪಾಂತರವೆಂದರೆ XBB.1.5 ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಆದಂತೆ ಭಾರತದಲ್ಲಿ ಕೋವಿಡ್ ಅಲೆ ಬರಲ್ಲ ಯಾಕೆ? ಇಲ್ಲಿದೆ ಮೂರು ಕಾರಣಗಳು
ಅಮೆರಿಕದ ಈಶಾನ್ಯ ಭಾಗದಲ್ಲಿ ಅತಿಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿರುವ ರಾಜ್ಯಗಳ ಪೈಕಿ ಓಸ್ಟರ್ಹಾಮ್ ಕೂಡ ಮುಂಚೂಣಿಯಲ್ಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ XBB ರೂಪಾಂತರ ದೃಢಪಡುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಒಮಿಕ್ರಾನ್ ಉಪತಳಿ BF.7ನ ಹಲವು ಪ್ರಕರಣಗಳು ಈಗಾಗಲೇ ಪತ್ತೆಯಾಗಿದ್ದು, ಕರ್ನಾಟಕದಲ್ಲಿಯೂ ಕೆಲವು ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ತೀರಾ ಹೆಚ್ಚಳವೇನೂ ಆಗಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಆದರೆ ಈಗಿರುವ ಮತ್ತು ಮುಂಬರುವ ರೂಪಾಂತರಿಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ನಿಗಾ ಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಹೇಳಿದ್ದರು. ಇದೀಗ ಮತ್ತೊಂದು ಒಮಿಕ್ರಾನ್ ಉಪತಳಿ ಎಕ್ಸ್ಎಕ್ಸ್ಬಿ.1.5 ಸೋಂಕು ದೃಢಪಟ್ಟಿರುವ ಕಾರಣ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.