
ಹೈದರಾಬಾದ್, ಸೆಪ್ಟೆಂಬರ್ 22: ಭಾರತದಲ್ಲಿ ಅರ್ನಬ್ ಚಂಡಮಾರುತದ ಭೀತಿ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನತ್ತ ರಭಸದಿಂದ ಚಲಿಸುತ್ತಿದ್ದು, ಕರಾವಳಿ ತಲುಪುವ ಮೊದಲು ತೀವ್ರ ವಾಯುಭಾರ ಕುಸಿತವಾಗಿ ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಅಧಿಕೃತ ವರದಿಯ ಪ್ರಕಾರ, ಮುಂದಿನ 12 ಗಂಟೆಗಳಲ್ಲಿ ಇದು ಮತ್ತಷ್ಟು ಪ್ರಬಲಗೊಂಡು, ಬುಧವಾರ ರಾತ್ರಿ ಅಥವಾ ಗುರುವಾರ ಮುಂಜಾನೆಯ ವೇಳೆಗೆ ವಿಶಾಖಪಟ್ಟಣಂ ಮತ್ತು ಗೋಪಾಲಪುರ ನಡುವೆ ಕರಾವಳಿಯನ್ನು ದಾಟಲಿದೆ.
ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸೃಷ್ಟಿಯಾಗುವ ಮುಂದಿನ ಚಂಡಮಾರುತಕ್ಕೆ ‘ಅರ್ನಬ್’ಎಂದು ಹೆಸರಿಡಲಾಗುತ್ತದೆ. ‘ಅರ್ನಬ್’ ಎಂದರೆ ಬಂಗಾಳಿ ಭಾಷೆಯಲ್ಲಿ “ಸಮುದ್ರ” ಎಂದರ್ಥ. ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆ ಹೊಂದಿರುವ ಚಂಡಮಾರುತಗಳ ಹೆಸರುಗಳ ಪಟ್ಟಿಗೆ ಈ ಹೆಸರನ್ನು ಬಾಂಗ್ಲಾದೇಶ ನೀಡಿದೆ.
ಇದನ್ನೂ ಓದಿ: ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ: ಕರಾವಳಿಯಲ್ಲಿ ವರುಣಾರ್ಭಟದ ಎಚ್ಚರಿಕೆ
ಆಂಧ್ರಪ್ರದೇಶದ ಜಿಲ್ಲೆಗಳಿಗೆ ರೆಡ್ ಅಲರ್ಟ್:
ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ನೀಡಿರುವ ಎಚ್ಚರಿಕೆಯ ಪ್ರಕಾರ, ತೀವ್ರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದು, ಸಂಚಾರ ದಟ್ಟಣೆ, ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿಬೀಳುವುದು, ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಅಣೆಕಟ್ಟುಗಳು ಹಾಗೂ ಜಲಾಶಯಗಳ ಮಟ್ಟ ಹೆಚ್ಚಿ ನೀರು ಹರಿಯುವ ಭೀತಿಯೂ ಇದೆ.
ಇದನ್ನೂ ಓದಿ: ಬೀಸಿಲಿನ ಬೇಗೆಯ ನಡುವೆ ರಾಜ್ಯದ ಹಲವೆಡೆ ತಂಪೆರೆದ ವರುಣ: ಬೆಂಗಳೂರು, ಯಾದಗಿರಿಯಲ್ಲಿ ಭರ್ಜರಿ ಮಳೆ
ಆಂಧ್ರಪ್ರದೇಶದ ಉತ್ತರ ಕರಾವಳಿ ಜಿಲ್ಲೆಗಳಾದ ವಿಶಾಖಪಟ್ಟಣಂ, ವಿಜಯನಗರಂ, ಶ್ರೀಕಾಕುಲಂ ಹಾಗೂ ಒಡಿಶಾದ ಗಂಜಾಂ, ಪುರಿ, ಜಗತ್‌ಸಿಂಗ್‌ಪುರ ಜಿಲ್ಲೆಗಳಿಗೆ ಭಾರಿ ಯಿಂದ ಅತಿ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ‘ಆರೆಂಜ್’ ಹಾಗೂ ‘ರೆಡ್’ ಅಲರ್ಟ್ ನೀಡಲಾಗಿದೆ. ಕರಾವಳಿಯುದ್ದಕ್ಕೂ ಸಮುದ್ರ ತೀವ್ರ ಪ್ರಕ್ಷುಬ್ಧವಾಗಿರಲಿದ್ದು, ಗಂಟೆಗೆ 55ರಿಂದ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಮುಂದಿನ 48 ಗಂಟೆಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ