
ನವದೆಹಲಿ, ನವೆಂಬರ್ 09: ದೀಪಾವಳಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಪಟಾಕಿಗಳ ಅಬ್ಬರದ ಪರಿಣಾಮ ದೆಹಲಿಯ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಇಂದು ಬೆಳಗಿನ ಜಾವವೇ ವಾಯು ಗುಣಮಟ್ಟ ಸೂಚ್ಯಂಕ 400ರ ಗಡಿ ದಾಟಿದ್ದು, ಹಲವು ಪ್ರದೇಶಗಳು ತೀವ್ರ ಮಾಲಿನ್ಯದ ವರ್ಗಕ್ಕೆ ಸೇರಿವೆ. ದಟ್ಟ ಹೊಗೆ ಮತ್ತು ಮಂಜಿನಂತಹ ವಾತಾವರಣದಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಜನರು ಉಸಿರಾಟದ ಸಮಸ್ಯೆ ಎದುರಿಸುವ ಆತಂಕ ಹೆಚ್ಚಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ದೆಹಲಿಯ ಬುರಾರಿ ಕ್ರಾಸಿಂಗ್ನಲ್ಲಿ ಗರಿಷ್ಠ 441 AQI ದಾಖಲಾಗಿದೆ. ವಿವೇಕ್ ವಿಹಾರ್ನಲ್ಲಿ 437, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 434, ಉತ್ತರ ದೆಹಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಮತ್ತು ಜಹಾಂಗೀರ್ಪುರಿಯಲ್ಲಿ ತಲಾ 433 ಸೂಚ್ಯಂಕ ದಾಖಲಾಗಿದೆ. ರೋಹಿಣಿಯಲ್ಲಿ 430, ಘಾಜಿಪುರದಲ್ಲಿ 418 ಮತ್ತು ಮುಂಡ್ಕಾದಲ್ಲಿ 417 AQI ದಾಖಲಾಗಿದೆ.
ಇನ್ನು ದೆಹಲಿಯ ಐಟಿಒ ಪ್ರದೇಶದಲ್ಲಿ ಬೆಳಗಿನ ಜಾವ 4.20ರ ಸುಮಾರಿಗೆ 406 AQI ದಾಖಲಾಗಿದ್ದು, ತೀವ್ರ ಮಾಲಿನ್ಯದ ವರ್ಗಕ್ಕೆ ಸೇರಿದೆ. ರಾಜೀವ್ ಚೌಕ್ನಲ್ಲಿ 381 ಮತ್ತು ಸೌತ್ ಎಕ್ಸ್ಟೆನ್ಷನ್ನಲ್ಲಿ 360 ಸೂಚ್ಯಂಕ ದಾಖಲಾಗಿದೆ.
ಮುಂಬೈನಲ್ಲೂ ಸೋಮವಾರ ಬೆಳಗ್ಗೆ ಮಂಜು ಮತ್ತು ಹೊಗೆಯ ವಾತಾವರಣ ಕಂಡುಬಂದಿದೆ. ನಗರದ ಸರಾಸರಿ AQI 170 ದಾಖಲಾಗಿದ್ದು, ಮಧ್ಯಮ ಮಾಲಿನ್ಯದ ವರ್ಗದಲ್ಲಿದೆ. ಖೇರ್ವಾಡಿ-ಬಾಂದ್ರಾ ಪೂರ್ವದಲ್ಲಿ 264, ಸೆವ್ರಿಯಲ್ಲಿ 226 ಮತ್ತು ಘಾಟ್ಕೋಪರ್ನಲ್ಲಿ 221 AQI ದಾಖಲಾಗಿದೆ. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಮುಂಬೈನ ವಾಯು ಗುಣಮಟ್ಟ ಶೇಕಡಾ 30ರಷ್ಟು ಉತ್ತಮವಾಗಿದೆ ಎಂದು ವರದಿಯಾಗಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ-ಎನ್ಸಿಆರ್ನಲ್ಲಿ ಈಗಾಗಲೇ GRAP ಹಂತ 3 ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ವಾಹನಗಳ ಹೊಗೆ, ಪಟಾಕಿ ಸಿಡಿಸುವಿಕೆ, ನೆರೆಯ ರಾಜ್ಯಗಳ ಕೃಷಿ ತ್ಯಾಜ್ಯ ಸುಡುವಿಕೆ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿವೆ. AQI 401ರಿಂದ 500ರವರೆಗೆ ಇದ್ದರೆ ಅದನ್ನು ತೀವ್ರ ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ