Delhi Election Results: ಬಿಜೆಪಿ ವಿರುದ್ಧ ದೆಹಲಿ ಸಿಎಂ ಅತಿಶಿ 3,500 ಮತಗಳ ಅಂತರದ ಗೆಲುವು
ನವದೆಹಲಿಯಲ್ಲಿ ಇಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದ್ದು, ದೆಹಲಿಯ ಮುಖ್ಯಮಂತ್ರಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಗೆಲುವು ಸಾಧಿಸುವ ಮೂಲಕ ಕಲ್ಕಾಜಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ದೆಹಲಿ ಸಿಎಂ ಗೆಲುವು ಕಂಡಿದ್ದರೂ ಈ ಬಾರಿಯ ಸಿಎಂ ಅಭ್ಯರ್ಥಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಹೀನಾಯವಾಗಿ ಸೋಲನ್ನಪ್ಪಿದ್ದಾರೆ. ಈ ಬಾರಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷವನ್ನು ದೆಹಲಿ ಮತದಾರರು ತಿರಸ್ಕರಿಸಿದ್ದಾರೆ. ಬಿಜೆಪಿಯ ರಮೇಶ್ ಬಿಧುರಿ ಎದುರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅತಿಶಿ ಗೆಲುವು ಕಂಡಿದ್ದಾರೆ. ಆದರೆ, ದೆಹಲಿಯಾದ್ಯಂತ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, 27 ವರ್ಷಗಳ ಬಳಿಕ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಪಕ್ಷ ಅಧಿಕಾರುವುದು ಖಚಿತವಾಗಿದೆ. ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ಬೆಳಗ್ಗೆಯಿಂದಲೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಹೆಚ್ಚಾಗಿತ್ತು.

ನವದೆಹಲಿ: ನವದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತ ತಲುಪಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಅನುಭವಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ದೆಹಲಿಯ ಮುಖ್ಯಮಂತ್ರಿಯಾಗಿರುವ ಅತಿಶಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರನ್ನು ಸೋಲಿಸಿ ಗೆಲುವು ಕಂಡಿದ್ದಾರೆ. ಅತಿಶಿ ಸ್ಪರ್ಧಿಸಿದ್ದ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 32 ವರ್ಷಗಳಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಕ್ಷೇತ್ರದ ಕಡೆಗೆ ಬಿಜೆಪಿ ಹೈಕಮಾಂಡ್ ಹೆಚ್ಚು ಗಮನ ಹರಿಸಿತ್ತು. ಕಲ್ಕಾಜಿ 2025ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಮತ್ತು ಕುತೂಹಲ ಕೆರಳಿಸಿದ್ದ ಸ್ಥಾನಗಳಲ್ಲಿ ಒಂದಾಗಿತ್ತು. 1993ರ ಬಳಿಕ ಕಲ್ಕಾಜಿ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದರು. ಬಳಿಕ 2024ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ 2024ರ ಸೆಪ್ಟೆಂಬರ್ 21ರಂದು ಅತಿಶಿ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರು ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಬಳಿಕ ದೆಹಲಿಯ 3ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಧಾನಸಭಾ ಚುನಾವಣೆಯವರೆಗೆ ಮಾತ್ರ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲೇ ಅತಿಶಿ ಘೋಷಿಸಿದ್ದರು. ಹೀಗಾಗಿ, ಆಮ್ ಆದ್ಮಿ ಪಕ್ಷದಿಂದ ಅರವಿಂದ್ ಕೇಜ್ರಿವಾಲ್ ಅವರೇ ಈ ಬಾರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.
ಇದನ್ನೂ ಓದಿ: ಸಾಕ್ಷಿ ನೀಡಿ; ಕಳ್ಳಬೇಟೆ ಆರೋಪದ ಮೇಲೆ ಕೇಜ್ರಿವಾಲ್ ಅವರಿಗೆ ದೆಹಲಿಯ ಎಸಿಬಿ ನೋಟಿಸ್ ಜಾರಿ
ದೆಹಲಿಯ ಪ್ರಸ್ತುತ ಮುಖ್ಯಮಂತ್ರಿ ಅತಿಶಿ ಮರ್ಲೇನಾ ಸಿಂಗ್ 3,500 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅಭ್ಯರ್ಥಿ ಅಲ್ಕಾ ಲಂಬಾ ಮೂರನೇ ಸ್ಥಾನ ಪಡೆದಿದ್ದಾರೆ.
ಕಲ್ಕಾಜಿ ಸ್ಥಾನದ ಹಿಂದಿನ ಚುನಾವಣಾ ಫಲಿತಾಂಶಗಳು:
ಕಲ್ಕಾಜಿ ಕ್ಷೇತ್ರದ ದಾಖಲೆಯನ್ನು ನೋಡಿದರೆ, ಅತಿಶಿ ಕಳೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಅದಕ್ಕೂ ಮೊದಲು, ಆಪ್ ಅಭ್ಯರ್ಥಿ ಅವತಾರ್ ಸಿಂಗ್ ಈ ಕ್ಷೇತ್ರವನ್ನು ಗೆದ್ದಿದ್ದರು. 2013ರಲ್ಲಿ ಹರ್ಮೀತ್ ಸಿಂಗ್ ಕಲ್ಕಾ ಶಿರೋಮಣಿ ಅಕಾಲಿ ದಳದಿಂದ ಗೆದ್ದಿದ್ದರು. 1998ರಿಂದ 2008ರವರೆಗೆ ಈ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ಚೋಪ್ರಾ ತಮ್ಮದಾಗಿಸಿಕೊಂಡಿದ್ದರು.
ಇದನ್ನೂ ಓದಿ: Arvind Kejriwal: ದೆಹಲಿ ಚುನಾವಣೆಯಲ್ಲಿ ಅರವಿಂದ್ ಕ್ರೇಜಿವಾಲ್ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ
ಚುನಾವಣಾ ಆಯೋಗದ ಪ್ರಕಾರ, ದೆಹಲಿಯ ಈ ಬಾರಿಯ ಮತದಾನದ ಪ್ರಮಾಣವು ಶೇ. 54.59ರಷ್ಟಿದ್ದು, ಇದು 2020ರ ಚುನಾವಣೆಗಳಿಗಿಂತ ಕಡಿಮೆಯಾಗಿದೆ. ಬಿಜೆಪಿ 1993ರಿಂದ ಕಲ್ಕಾಜಿ ಸ್ಥಾನವನ್ನು ಗೆದ್ದಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಮೇಶ್ ಬಿಧುರಿ ಅವರ ಗೆಲುವು ಬಹಳ ಪ್ರಮುಖವಾಗಿತ್ತು.
ತುಘಲಕಾಬಾದ್‌ನಿಂದ ಮೂರು ಬಾರಿ ಶಾಸಕರಾಗಿರುವ ರಮೇಶ್ ಬಿಧುರಿ, 2003, 2008 ಮತ್ತು 2013ರಲ್ಲಿ ದೆಹಲಿಯಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸಿದ ಹಂತಗಳಲ್ಲಿಯೂ ಸಹ ಗೆಲುವು ಸಾಧಿಸಿದ್ದರು. ನಂತರ ಅವರು 2014 ಮತ್ತು 2019ರಲ್ಲೂ ದಕ್ಷಿಣ ದೆಹಲಿಯನ್ನು ಸಂಸದರಾಗಿ ಪ್ರತಿನಿಧಿಸಿದ್ದರು. ಆದರೆ 2024ರ ಲೋಕಸಭಾ ಚುನಾವಣೆಗೆ ಅವರಿಗೆ ಟಿಕೆಟ್ ನೀಡಿರಲಿಲ್ಲ. ಕೊನೆಗೆ, ಕಲ್ಕಾಜಿ ಕ್ಷೇತ್ರದಿಂದ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Sat, 8 February 25