
ನವದೆಹಲಿ, ಜುಲೈ 23: ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ದೆಹಲಿ ಪೊಲೀಸರು (Delhi Police) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪ್ರತಿಭಟನೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಯನ್ನು ಹರಡುತ್ತಿದ್ದ ಪಾಕಿಸ್ತಾನ ಮೂಲದ ಸುಮಾರು 480 ಸಾಮಾಜಿಕ ಜಾಲತಾಣದ ಖಾತೆಗಳನ್ನು ಗುರುತಿಸಿ ನಿರ್ಬಂಧ ಹೇರಿದ್ದಾರೆ.
ಭಾರತದ ಪ್ರಸ್ತುತ ಸ್ಥಿತಿಗತಿಯ ಲಾಭ ಪಡೆಯಲು ಈ ಖಾತೆಗಳು ವದಂತಿಗಳನ್ನು ಹರಡುತ್ತಿವೆ ಎಂದು ಪೊಲೀಸರು ತಿಳಿಸಿದ್ದು, ಪರಿಶೀಲಿಸದೆ ಯಾವುದೇ ಮಾಹಿತಿಯನ್ನು ನಂಬಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ದೆಹಲಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದ್ದು, ಇದರಲ್ಲಿ ಪಾಕಿಸ್ತಾನ ಮೂಲದ ಹಲವು ಖಾತೆಗಳು ಭಾಗಿಯಾಗಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ; ಗಾಂಧಿ ಸ್ಮೃತಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರ ಮೆರವಣಿಗೆ
“ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಪರಿಸ್ಥಿತಿಯ ದುರ್ಲಾಭ ಪಡೆದು ಸುಳ್ಳು ವಿಷಯಗಳು ಹಾಗೂ ವದಂತಿಗಳನ್ನು ಹರಡುತ್ತಿದ್ದ 400ಕ್ಕೂ ಹೆಚ್ಚು ಪಾಕಿಸ್ತಾನಿ ಜಾಲತಾಣದ ಖಾತೆಗಳನ್ನು ಇದುವರೆಗೆ ಗುರುತಿಸಲಾಗಿದೆ. ಅವುಗಳನ್ನು ನಿರ್ಬಂಧಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ನಡೆದ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಸಕ್ರಿಯವಾಗಿದ್ದ ಅದೇ ಖಾತೆಗಳೇ ಈಗಲೂ ಸುಳ್ಳು ಸುದ್ದಿ ಹರಡಲು ಮುಂದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರನ್ನು ಪ್ರಚೋದಿಸುವುದು ಮತ್ತು ಪ್ರತಿಭಟನೆಯ ನಡುವೆ ವಿದ್ಯಾರ್ಥಿಗಳ ಗಮನವನ್ನು ಬೇರೆಡೆಗೆ ಸೆಳೆಯುವುದೇ ಈ ಖಾತೆಗಳ ಮುಖ್ಯ ಉದ್ದೇಶವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಭರವಸೆಗೂ ಒಪ್ಪದ ಸಿಜೆಪಿ; ನಾಳೆ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ
“ಜನರನ್ನು ಪ್ರಚೋದಿಸುವುದು ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಹಾದಿತಪ್ಪಿಸುವುದು ಒಂದೇ ಇವರ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಅನಾಮಧೇಯ ಖಾತೆಗಳು ಹಂಚಿಕೊಳ್ಳುವ ಯಾವುದೇ ನಕಲಿ ಪೋಸ್ಟ್‌ಗಳು, ಎಡಿಟ್ ಮಾಡಿದ ವೀಡಿಯೊಗಳು ಅಥವಾ ಸುಳ್ಳು ಸುದ್ದಿಗಳಿಗೆ ಪ್ರಚೋದಿತರಾಗಬೇಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ” ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ವಿನಂತಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ