ಕೇಂದ್ರ ಸರ್ಕಾರದ ಭರವಸೆಗೂ ಒಪ್ಪದ ಸಿಜೆಪಿ; ನಾಳೆ ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ
ನೀಟ್ (NEET) ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹೋರಾಟ ನಡೆಸುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ಶುಕ್ರವಾರ (ನಾಳೆ) ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದೆ. ಪರೀಕ್ಷಾ ಅಕ್ರಮಗಳ ವಿರುದ್ಧ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಜುಲೈ 24ರಂದು ದೇಶದ ಎಲ್ಲಾ ಪ್ರಮುಖ ನಗರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶಾಂತಿಯುತ ಧರಣಿ ಹಾಗೂ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವಂತೆ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರಲ್ಲಿ ಸಿಜೆಪಿ ನಾಯಕರು ಮನವಿ ಮಾಡಿದ್ದಾರೆ.

ನವದೆಹಲಿ, ಜುಲೈ 23: ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ ನಡೆದ ಅಕ್ರಮಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಳೆ (ಜುಲೈ 24) ದೇಶಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಸುವುದಾಗಿ ಕೇಂದ್ರ ಸರ್ಕಾರವು ಪದೇ ಪದೇ ಭರವಸೆ ನೀಡಿ, ಮಾತುಕತೆಗೆ ಆಹ್ವಾನಿಸುತ್ತಿದ್ದರೂ ಸಿಜೆಪಿ ಬೆಂಬಲಿಗರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಒಂದೇ ದಿನ, ಒಂದೇ ಬೇಡಿಯೊಂದಿಗೆ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲು ಸಿಜೆಪಿ ಸಜ್ಜಾಗಿದೆ.
“ದೇಶಾದ್ಯಂತ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಈ ದೇಶವ್ಯಾಪಿ ಪ್ರತಿಭಟನೆಯನ್ನು ಕರೆಯಲಾಗಿದೆ” ಎಂದು ಸಿಜೆಪಿ ತಿಳಿಸಿದೆ. ಪ್ರತಿಭಟನೆಯ ಅನುಮತಿ ಮತ್ತು ಸಾರಿಗೆ ವ್ಯವಸ್ಥೆಗಳಿಗಾಗಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಮತ್ತು ಗುಂಪುಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದೆ.
“ಸಾರ್ವಜನಿಕರ ಮುಂದೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಟ್ಟಿಯಾಗಿ ಓದಿ ಹೇಳಿ. ಪೊಲೀಸ್ ದೌರ್ಜನ್ಯ ಎದುರಿಸಿದವರಿಗೆ ಬೆಂಬಲ ಹಾಗೂ ಒಗ್ಗಟ್ಟು ಪ್ರದರ್ಶಿಸಿ. ಇಂಕಿಲಾಬ್ ಜಿಂದಾಬಾದ್, ಭಾರತ ಮಾತಾ ಕಿ ಜೈ” ಎಂದು ಸಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ‘ಯಾವುದೇ ಸ್ಥಳದಲ್ಲಿ, ಯಾವ ಸಮಯದಲ್ಲಾದರೂ ಚರ್ಚೆಗೆ ಸಿದ್ಧ’; 4ನೇ ಬಾರಿ ಸಿಜೆಪಿಗೆ ಕೇಂದ್ರ ಸರ್ಕಾರ ಆಹ್ವಾನ
ಪ್ರಧಾನಿ ಮೋದಿಯ ಭರವಸೆ ನಡುವೆಯೂ ಪ್ರತಿಭಟನೆ:
ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಭರವಸೆ ನೀಡಿದೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇಂದು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ತನಿಖೆಗೆ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಸರ್ಕಾರವು ಸಿಜೆಪಿ ಪ್ರತಿನಿಧಿಗಳನ್ನು ಮಾತುಕತೆಗೆ ಆಹ್ವಾನಿಸಿದ್ದರೂ, ಪ್ರತಿಭಟನಾಕಾರರು ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟವನ್ನು ಅಂತ್ಯಗೊಳಿಸುವುದಿಲ್ಲ ಎಂದು ಸಿಜೆಪಿ ನಾಯಕರು ತಿಳಿಸಿದ್ದಾರೆ.
ಪ್ರತಿಭಟನಾಕಾರರಿಗೆ ಸಿಜೆಪಿ ನೀಡಿದ ಪ್ರಮುಖ ಸೂಚನೆಗಳು:
ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಇಳಿಯದೆ, ಸಂಪೂರ್ಣ ಶಾಂತಿಯುತವಾಗಿ ಹಾಗೂ ಅಹಿಂಸಾತ್ಮಕವಾಗಿ ನಡೆದುಕೊಳ್ಳಬೇಕು ಎಂದು ಸಿಜೆಪಿ ಸೂಚನೆ ನೀಡಿದೆ. ಪ್ರತಿಭಟನಾಕಾರರಿಗೆ ನೀಡಿದ ಮುಖ್ಯ ಸೂಚನೆಗಳೆಂದರೆ,
ಸಕಾರಾತ್ಮಕ ಘೋಷಣೆಗಳನ್ನು ಕೂಗಿ:
ಪ್ರತಿಭಟನಾಕಾರರು ಕೇವಲ “ಜೈ ಹಿಂದ್, ಭಾರತ ಮಾತಾ ಕಿ ಜೈ, ಇಂಕಿಲಾಬ್ ಜಿಂದಾಬಾದ್, ಜೈ ಭೀಮ್”ನಂತಹ ಸಕಾರಾತ್ಮಕ ಘೋಷಣೆಗಳನ್ನು ಮಾತ್ರ ಕೂಗಬೇಕು. ಪ್ರತಿಯೊಂದು ಘಟನೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್ ಟ್ರ್ಯಾಕ್ ಕೋರ್ಟ್ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ
ನಿಯಮಗಳ ಪಾಲನೆ:
ನಿಗದಿಪಡಿಸಿದ ಸ್ಥಳದಲ್ಲಿ ಹಾಗೂ ಮಾರ್ಗಗಳಲ್ಲಿ ಮಾತ್ರ ಮೆರವಣಿಗೆ ನಡೆಸಬೇಕು. ಯಾವುದೇ ಪ್ರಚೋದನಕಾರಿ, ನಿಂದನೀಯ, ಕೋಮು ದ್ವೇಷದ ಅಥವಾ ಆಕ್ಷೇಪಾರ್ಹ ಭಾಷೆಯನ್ನು ಬಳಸಬಾರದು.
ಆಯುಧಗಳ ನಿಷೇಧ:
ಲಾಠಿ, ಕೋಲು ಸೇರಿದಂತೆ ಯಾವುದೇ ರೀತಿಯ ಆಯುಧಗಳನ್ನು ತರಲು ಯಾರಿಗೂ ಅನುಮತಿಯಿಲ್ಲ. ಪ್ರತಿಭಟನಾಕಾರರು 2-3 ಜನರ ಗುಂಪುಗಳಲ್ಲಿಯೇ ಇರಬೇಕು.
ಸಂಚಾರಕ್ಕೆ ಅಡ್ಡಿ ಬೇಡ:
ಪ್ರತಿಭಟನೆಯ ವೇಳೆ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿಪಡಿಸಬಾರದು. ಯಾವುದೇ ಸುಳ್ಳು ಸುದ್ದಿ ಅಥವಾ ದೃಢಪಡಿಸದ ಮಾಹಿತಿಯನ್ನು ಹರಡಬಾರದು.
ತುರ್ತು ಸಂಪರ್ಕ ಸಂಖ್ಯೆಗಳು:
“ನಿಮ್ಮ ಮುಂಗೈ ಮೇಲೆ ಮಾರ್ಕರ್‌ನಿಂದ ಮತ್ತು ಜೇಬಿನಲ್ಲಿರುವ ಕಾರ್ಡ್‌ನಲ್ಲಿ ವಕೀಲರ ಅಥವಾ ಕಾನೂನು ವಿದ್ಯಾರ್ಥಿಯ ನಂಬರ್ ಹಾಗೂ ಒಂದು ತುರ್ತು ಸಂಪರ್ಕ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. ಒತ್ತಡದ ಸಮಯದಲ್ಲಿ ನೆನಪು ತಪ್ಪಬಹುದು ಅಥವಾ ಮೊಬೈಲ್ ಬ್ಯಾಟರಿ ಖಾಲಿಯಾಗಬಹುದು ಅಥವಾ ಹಾಳಾಗಬಹುದು” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.
ಪ್ರಚೋದನೆಗೆ ಒಳಗಾಗಬೇಡಿ:
ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸಲು ಯತ್ನಿಸುವ ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರಲು ಮತ್ತು ಪೋಲಿಸರೊಂದಿಗೆ ಸಹಕರಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಕಿಡಿಗೇಡಿತನ ಕಂಡರೆ ಸುಮ್ಮನಿರಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವರದಿ ಮಾಡಿ ಮತ್ತು ಸುತ್ತಮುತ್ತಲಿನವರ ನೆರವು ಪಡೆಯಿರಿ. ಯಾರಾದರೂ ಪ್ರಚೋದಿಸಿದರೆ ಪ್ರತಿಕ್ರಿಯಿಸದೆ, ಮಾರ್ಷಲ್‌ಗಳಿಗೆ ಮಾಹಿತಿ ನೀಡಿ ಎಂದು ಪ್ರತಿಭಟನಾಕಾರರಿಗೆ ಸೂಚಿಸಲಾಗಿದೆ.
ರಾಜಧಾನಿ ದೆಹಲಿ ಸೇರಿದಂತೆ ಮುಂಬೈ, ಕೊಲ್ಕತ್ತಾ ಹಾಗೂ ಇತರ ಪ್ರಮುಖ ನಗರಗಳಲ್ಲಿ ಜುಲೈ 24ರ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದ್ದು, ಭದ್ರತಾ ಪಡೆಗಳು ಹೆಚ್ಚಿನ ಎಚ್ಚರ ವಹಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Thu, 23 July 26




