
ನವದೆಹಲಿ, ಸೆಪ್ಟೆಂಬರ್ 7: ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಐದು ಅಂತಸ್ತಿನ ಹಳೆಯ ಪೇಯಿಂಗ್ ಗೆಸ್ಟ್ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿದ್ದರು. ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೌತ್ ಕ್ಯಾಂಪಸ್‌ನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮುಖ ವಸತಿ ಪ್ರದೇಶವಾಗಿರುವ ಸತ್ಯ ನಿಕೇತನದ ಕಿರಿದಾದ ರಸ್ತೆಯೊಂದರಲ್ಲಿ ಸುಮಾರು 30 ವರ್ಷ ಹಳೆಯ ಕಟ್ಟಡವಿತ್ತು. ಈ ಐದು ಅಂತಸ್ತಿನ ಕಟ್ಟಡದಲ್ಲಿ ಸುಮಾರು 15 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ ಇಬ್ಬರಿಂದ ಮೂವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರು ಎನ್ನಲಾಗಿದೆ.
ಸ್ಥಳೀಯ ನಿವಾಸಿ ಹಾಗೂ ದೆಹಲಿ ಪೊಲೀಸ್ ಸಿಬ್ಬಂದಿ ರಾಜನ್ ಛೇತ್ರಿ ಅವರ ಪ್ರಕಾರ, ವಿದ್ಯಾರ್ಥಿಗಳಿಂದ ಪ್ರತಿ ಹಾಸಿಗೆಗೆ ತಿಂಗಳಿಗೆ ಸುಮಾರು ₹12 ಸಾವಿರದವರೆಗೆ ಬಾಡಿಗೆ ಪಡೆಯಲಾಗುತ್ತಿತ್ತು. ಕೇರಳ, ಹರಿಯಾಣ ಹಾಗೂ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್ ನೆಹರು ಕಾಲೇಜು, ಆತ್ಮಾರಾಮ ಸನಾತನ ಧರ್ಮ (ARSD) ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಕಳೆದ 20–22 ವರ್ಷಗಳಿಂದ ಸತ್ಯ ನಿಕೇತನದಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿ ಪ್ರಿಯಾಂಕಾ, ಪ್ರದೇಶದಲ್ಲಿ ಐದರಿಂದ ಆರು ಅಂತಸ್ತಿನ ಕಟ್ಟಡಗಳನ್ನು ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸೂಕ್ತ ಗಮನವಿಲ್ಲದೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಕಟ್ಟಡಗಳಿಗೆ ಪಿಜಿ ಎಂಬ ಫಲಕ ಹಾಕಿ ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಬಳಿಕ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಪ್ರತಿ ತಿಂಗಳು ಆನ್‌ಲೈನ್ ಮೂಲಕ ಬಾಡಿಗೆ ಪಡೆಯುವುದಕ್ಕಷ್ಟೇ ಗಮನ ಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಕಟ್ಟಡದ ಸ್ಥಿತಿ ಮತ್ತು ನಿರ್ವಹಣೆ ಬಗ್ಗೆ ಮಾಲೀಕರು ನಿಯಮಿತವಾಗಿ ಪರಿಶೀಲನೆ ನಡೆಸುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಸುಮಾರು 30 ವರ್ಷ ಹಳೆಯ ಈ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಕೆಲವು ನಿರ್ಮಾಣ ಕಾಮಗಾರಿಗಳು ನಡೆಯುತ್ತಿತ್ತು. ತೆರೆದ ಚರಂಡಿ ಹಾಗೂ ಮಳೆಯಿಂದಾಗಿ ಬೇಸ್‌ಮೆಂಟ್‌ನಲ್ಲಿ ನಿರಂತರವಾಗಿ ನೀರು ಸಂಗ್ರಹವಾಗುತ್ತಿತ್ತು. ಇದರಿಂದ ಕಟ್ಟಡದ ಅಡಿಪಾಯ ದುರ್ಬಲಗೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಭಾನುವಾರ ಮಳೆ ಹಾಗೂ ವಾರಾಂತ್ಯವಾಗಿದ್ದರಿಂದ ಹಲವು ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದಿರುವುದು ಮತ್ತಷ್ಟು ಪ್ರಾಣಹಾನಿಯಾಗುವುದನ್ನು ತಪ್ಪಿಸಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಕಟ್ಟಡ ಕುಸಿದ ಬಳಿಕ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದ್ದವರಿಗಾಗಿ ಕಾರ್ಯಾಚರಣೆ ನಡೆಸಿದವು. ಈ ವೇಳೆ 12 ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ
ಈ ದುರಂತದ ಬೆನ್ನಲ್ಲೇ ದೆಹಲಿಯ ಸತ್ಯ ನಿಕೇತನ, ಮುಖರ್ಜಿ ನಗರ, ಕರೋಲ್ ಬಾಗ್ ಸೇರಿದಂತೆ ವಿದ್ಯಾರ್ಥಿಗಳ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಕಟ್ಟಡಗಳ ನಿರ್ವಹಣೆ, ಸುರಕ್ಷತಾ ಪರಿಶೀಲನೆ, ಸುರಕ್ಷತಾ ಮಾನದಂಡಗಳ ಪಾಲನೆ ಹಾಗೂ ಅಗತ್ಯ ಪೊಲೀಸ್ ಪರಿಶೀಲನೆ ಇಲ್ಲದೆ ನಡೆಯುತ್ತಿರುವ PGಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ