ಬ್ಯಾಂಕ್ ಮತ್ತಿತರ ಹಣಕಾಸು ವಲಯದ ನೌಕರರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಮನವಿ
ಬ್ಯಾಂಕ್ ಕಚೇರಿಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇರುವುದು ಹಾಗೂ ಲಾಕ್ಡೌನ್ ಅವಧಿಯಲ್ಲಿ ಕೂಡ ಕಾರ್ಯನಿರ್ವಹಿಸಲು ಅವಕಾಶ ಇರುವುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ.
ದೆಹಲಿ: ಬ್ಯಾಂಕ್ ನೌಕರರು, ಇನ್ಶೂರೆನ್ಸ್ ಕಂಪೆನಿ ಸಿಬ್ಬಂದಿ, ಬ್ಯುಸಿನೆಸ್ ಕರೆಸ್ಪಾಂಡೆಂಟ್ಗಳು, ಪಾವತಿ ಸೇವೆ ಮತ್ತು ಇತರ ಹಣಕಾಸು ಸೇವಾದಾರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವಂತೆ ಹಣಕಾಸು ಸಚಿವಾಲಯದ ಕಾರ್ಯದರ್ಶಿ ದೇಬಸಿಶ್ ಪಾಂಡ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳನ್ನು ಪತ್ರದ ಮುಖೇನ ಕೇಳಿಕೊಂಡಿದ್ದಾರೆ. ಜೊತೆಗೆ, ಕೊರೊನಾ ಸಂದರ್ಭದಲ್ಲಿ ಈ ಕ್ಷೇತ್ರದ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆಯೂ ಅವರು ತಿಳಿಸಿದ್ದಾರೆ.
ಹಣಕಾಸು ವ್ಯವಹಾರ ಸೂಕ್ತ ರೀತಿಯಲ್ಲಿ ನಡೆಯಲು, ತಮ್ಮ ಗ್ರಾಹಕರಿಗೆ ಸೇವೆ ಒದಗಿಸಲು ಕೊರೊನಾ ಕಾಲದಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ಸಾಮಾಜಿಕ ಜವಾಬ್ದಾರಿ ಮರೆಯದೆ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಕೆಲವರು ಸೋಂಕಿಗೆ ತುತ್ತಾಗಿದ್ದಾರೆ. ಮತ್ತೆ ಕೆಲವರು ಸೋಂಕಿನಿಂದ ಜೀವವನ್ನು ಕೂಡ ಕಳೆದುಕೊಂಡಿದ್ದಾರೆ. ಹಾಗಾಗಿ, ಸದರಿ ವಿಭಾಗದ ಕೆಲಸಗಾರರಿಗೆ ಆದ್ಯತೆ ಮೇರೆಗೆ ಲಸಿಕೆ ವಿತರಿಸಬೇಕು ಎಂದು ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.
ಜೊತೆಗೆ, ಕೆಲವೊಂದು ಕಡೆಗಳಲ್ಲಿ ಅಹಿತಕರ ಘಟನೆಗಳು ವರದಿಯಾಗಿರುವ ಬಗ್ಗೆಯೂ ಪತ್ರದಲ್ಲಿ ಹೇಳಲಾಗಿದೆ. ಕೆಲ ರಾಜ್ಯದ ಕಾನೂನು ಪಾಲಕರು ಬ್ಯಾಂಕ್ ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕಾರ್ಯನಿರ್ವಹಿಸಲು ಅವಕಾಶ ಇದ್ದ ಅವಧಿಯಲ್ಲೂ ಬ್ಯಾಂಕ್, ಕಚೇರಿಗಳನ್ನು ಮುಚ್ಚುವಂತೆ ಕೆಲವೆಡೆ ಒತ್ತಡ, ಬೆದರಿಕೆ ಹಾಕಲಾಗಿದೆ. ನೌಕರರು ಈಗಾಗಲೇ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ಕೆಲಸ ಮಾಡಬೇಕಿದೆ. ತಮ್ಮ ಕುಟುಂಬವನ್ನೂ ಕಾಪಾಡಬೇಕಿದೆ. ಹಾಗಾಗಿ, ಅವರ ರಕ್ಷಣೆಯ ಬಗ್ಗೆ ಗಮನಕಕೊಡಬೇಕು ಎಂದು ಹೇಳಲಾಗಿದೆ. ಜನರಿಗೆ ನಿಗದಿತ ಅವಧಿಯಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ಸಾಗುವಂತೆ ಅನುವು ಮಾಡಿಕೊಡಬೇಕು ಎಂದು ಕೇಳಲಾಗಿದೆ.
ಬ್ಯಾಂಕ್ ಕಚೇರಿಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇರುವುದು ಹಾಗೂ ಲಾಕ್ಡೌನ್ ಅವಧಿಯಲ್ಲಿ ಕೂಡ ಕಾರ್ಯನಿರ್ವಹಿಸಲು ಅವಕಾಶ ಇರುವುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ, ಈ ನೌಕರರ ಬಗ್ಗೆ ಕಾಳಜಿ ಹೊಂದುವಂತೆ, ಅದಕ್ಕೆ ತಕ್ಕುದಾಗಿ ನಿಯಮಾವಳಿ ಸೂಚಿಸುವಂತೆ ಮತ್ತು ವಿಶೇಷವಾಗಿ ಲಸಿಕೆ ನೀಡುವಲ್ಲಿ ಆದ್ಯತೆ ವಹಿಸುವಂತೆ ಕೇಳಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಶೀಘ್ರದಲ್ಲೇ ಕೊವಿಡ್ ಲಸಿಕೆ ಅಭಿವೃದ್ಧಿ
ತಮ್ಮವರಿಗೆ ಲಸಿಕೆ ನೀಡುವಂತೆ ಒತ್ತಾಯ; ಆರೋಗ್ಯ ಅಧಿಕಾರಿ ವಿರುದ್ಧ ದೂರು ದಾಖಲು
Published On - 9:50 pm, Fri, 14 May 21