ಕೋವಿಡ್ 19 ಸನ್ನಿವೇಶಕ್ಕೆ ಕಡಿಮೆ ವೆಚ್ಚದಲ್ಲಿ ಶವ ಸುಡುವ ಸಾಧನ ರೂಪಿಸಿದ ಐಐಟಿ ರೋಪರ್
ಕೋವಿಡ್ 19 ಸಂದರ್ಭದಲ್ಲಿ ಕಡಿಮೆ ವೆಚ್ಚದಲ್ಲಿ ಶವ ಸುಡುವಂಥ ಸಾಧನವನ್ನು ಐಐಟಿ ರೋಪರ್ನಿಂದ ಕಂಡುಹಿಡಿಯಲಾಗಿದೆ.
ಕೋವಿಡ್- 19 ಸಾವಿನ ಪ್ರಕರಣಗಳು ದಿನದಿನಕ್ಕೂ ಹೆಚ್ಚುತ್ತಲೇ ಇವೆ. ಇದು ಯಾವ ಪ್ರಮಾಣದಲ್ಲಿ ಆಗಿದೆ ಅಂದರೆ ಕೋವಿಡ್- 19ನಿಂದ ಮೃತಪಟ್ಟವರಿಗೆ ಮಾತ್ರವಲ್ಲ, ಬೇರೆ ಯಾವುದೇ ಕಾರಣಗಳಿಗೆ ಸಾವನ್ನಪ್ಪಿದವರಿಗೂ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವುದು ಕಷ್ಟವಾಗುತ್ತಿದೆ. ಇಂಥದ್ದೊಂದು ಸಮಸ್ಯೆಗೆ ಪರಿಷ್ಕಾರ ಎಂಬಂತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೋಪರ್ನಿಂದ ಪರಿಸರಸ್ನೇಹಿ ಶವ ಸುಡುವ ಸಾಧನವನ್ನು ರೂಪಿಸಲಾಗಿದೆ. ಕಡಿಮೆ ಮರದ ಬಳಕೆ ಆಗಬೇಕು. ಸ್ಟೇನ್ಲೆಸ್ ಸ್ಟೀಲ್ ಇನ್ಸುಲೇಷನ್ ಇರುವ ಕಾರಣಕ್ಕೆ ಕಾವು ಕಡಿಮೆ ಆಗಬಾರದು ಆ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ. ಈ ಸಾಧನವನ್ನು ಚೀಮಾ ಬಾಯ್ಲರ್ಸ್ ಲಿಮಿಟೆಡ್ನೊಂದಿಗೆ ಸೇರಿ ರೂಪಿಸಲಾಗಿದೆ ಎಂದು ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ಗುರುವಾರ ತಿಳಿಸಲಾಗಿದೆ.
ಬತ್ತಿಯ ಸ್ಟೌ ರೀತಿಯಲ್ಲಿ ಈ ತಂತ್ರಜ್ಞಾನ ಇದೆ. ಇದರಲ್ಲಿ ಬತ್ತಿಯ ರೀತಿ ಹೊತ್ತಿಕೊಂಡ ಮೇಲೆ ಹಳದಿ ಬಣ್ಣದಲ್ಲಿ ಪ್ರಜ್ವಲಿಸುತ್ತದೆ. ಆ ನಂತರ ಕಂಬಶ್ಚನ್ ಗಾಳಿಯ ವ್ಯವಸ್ಥೆ ಮಾಡಿದ ಮೇಲೆ ಯಾವುದೇ ಹೊಗೆ ಇಲ್ಲದಂತೆ ನೀಲಿ ಬಣ್ಣಕ್ಕೆ ತಿರುಗುತ್ತದೆ ಎಂದು ಹೇಳಲಾಗಿದೆ. ಬೂದಿಯನ್ನು ತೆಗೆಯುವುದಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಎರಡೂ ಬದಿಯಲ್ಲಿ ಸ್ಟೇನ್ಲೆಸ್ ಸ್ಟೀಲ್ ಟ್ರೇಗಳನ್ನು ಮಾಡಲಾಗಿದೆ.
ಪ್ರಾಥಮಿಕ ಹಾಗೂ ಎರಡನೇ ಹಂತದ ಬಿಸಿ ಗಾಳಿ ವ್ಯವಸ್ಥೆಗೆ ಈ ಸಾಧನದಲ್ಲಿ ವ್ಯವಸ್ಥೆ ಇದೆ. 12 ಗಂಟೆ ಅವಧಿಯೊಳಗೆ ಇಡೀ ದೇಹ ಬೂದಿಯಾಗುತ್ತದೆ. ಹಾಗೂ ಅದರ ಜತೆ ತಣ್ಣಗೂ ಆಗಿಹೋಗುತ್ತದೆ ಎಂದು ಐಐಟಿ ರೋಪರ್ ಡೀನ್ ಹರ್ಪ್ರೀತ್ ಸಿಂಗ್ ಹೇಳಿದ್ದಾರೆ. ಅಂತ್ಯಸಂಸ್ಕಾರದ ಈ ವ್ಯವಸ್ಥೆ 1044 ಡಿಗ್ರಿ ಸೆಲ್ಷಿಯಸ್ನಲ್ಲಿ ಬಿಸಿಯಾಗುತ್ತದೆ. ಕ್ರಿಮಿಗಳಿಂದ ಸಂಪೂರ್ಣ ಮುಕ್ತವಾಗಿರುತ್ತದೆ. ಒಂದು ಶವ ಸಂಸ್ಕಾರಕ್ಕೆ ಸಾಮಾನ್ಯವಾಗಿ ಸೌದೆಗೆ 2500 ರುಪಾಯಿ ಖರ್ಚಾಗುತ್ತದೆ. ಬಡ ಕುಟುಂಬಗಳು ಅದಕ್ಕಿಂತ ಕಡಿಮೆಯಲ್ಲಿ ಸಾಧ್ಯವೇ ಎಂದು ಪ್ರಯತ್ನಿಸುತ್ತವೆ. ಮತ್ತು ಎಷ್ಟೋ ಸಲ ಅವರ ಬಳಿ ಇರುವ ಹಣಕ್ಕೆ ಅರ್ಧವಷ್ಟೇ ಸುಡಲು ಸಾಧ್ಯವಾಗುತ್ತದೆ ಮತ್ತು ಇದರಿಂದಲೇ ನದಿಯ ನೀರಿಗೆ ಶವಗಳನ್ನು ಬಿಡುವ ಉದಾಹರಣೆಯೂ ಕಾಣಸಿಗುತ್ತದೆ ಎಂದು ಡೀನ್ ಹೇಳುತ್ತಾರೆ.
ಈ ಶವ ಸುಡುವ ಸಾಧನದಲ್ಲಿ ಚಕ್ರ ಇದ್ದು, ಹೆಚ್ಚಿನ ಶ್ರಮ ಇಲ್ಲದೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿಸಬಹುದು. ಚೀಮಾ ಬಾಯ್ಲರ್ಸ್ನ ಹರ್ಜಿಂದರ್ ಸಿಂಗ್ ಚೀಮಾ ಮಾತನಾಡಿ, ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದ ಅಂತ್ಯಸಂಸ್ಕಾರಕ್ಕೆ ಬೇಕಾದ ಸಾಧನವನ್ನು ಒದಗಿಸುತ್ತೇವೆ. ಸಾಮಾನ್ಯವಾಗಿ ಬೇಕಾಗುವ ಮರದ ಅರ್ಧದಷ್ಟು ಇದಕ್ಕೆ ಸಾಕಾಗುತ್ತದೆ. ಜತೆಗೆ ಕಾರ್ಬನ್ ಪ್ರಮಾಣವು ಅರ್ಧಕ್ಕೆ ಇಳಿಕೆ ಆಗುತ್ತದೆ. ಇದನ್ನು ಎಲ್ಪಿಜಿ ಗ್ಯಾಸ್ನಲ್ಲೂ ಮನೆಗೆ ಬಳಸುವ ಸಿಲಿಂಡರ್ನೊಂದಿಗೆ ಉಪಯೋಗಿಸಬಹುದು ಎಂದಿದ್ದಾರೆ.
IIT Ropar develops a portable tech-traditional eco-friendly mobile cremation system that uses first of its kind technology that involves smokeless cremation despite using wood.
Details: https://t.co/XyDUhcBpRu #IndiaFightsCorona @iitrpr pic.twitter.com/rzKlC8xUEM
— PIB in Chandigarh (@PIBChandigarh) May 13, 2021
(IIT Roper developed eco friendly cremation cart which requires less wood)