Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ

ದೇಶಾದ್ಯಂತ ತೀವ್ರಗೊಂಡ ಯುವಜನರ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆ ಹಾಗೂ ಪರೀಕ್ಷಾ ಅಕ್ರಮಗಳ ಆಕ್ರೋಶದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆರಂಭದಲ್ಲಿ ಇಂಟರ್‌ನೆಟ್‌ನಲ್ಲಿ ವಿಡಂಬನಾತ್ಮಕವಾಗಿ ಹುಟ್ಟಿಕೊಂಡು, ಬಳಿಕ ಕೋಟ್ಯಂತರ ಯುವಕರ ಧ್ವನಿಯಾದ ಈ 'ಕಾಕ್ರೋಚ್ ಜನತಾ ಪಾರ್ಟಿ' ಉಗಮ ಮತ್ತು ಹಿನ್ನೆಲೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ
ಕಾಕ್ರೋಚ್ ಜನತಾ ಪಾರ್ಟಿ

Updated on: Jul 28, 2026 | 11:24 AM

ಮುಖ್ಯಾಂಶಗಳು

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ
  • ಮೇ 16, 2026 ರಂದು ಅಭೀಜಿತ್ ದೀಪ್ಕೆ ಆರಂಭಿಸಿದ 'ಕಾಕ್ರೋಚ್ ಜನತಾ ಪಾರ್ಟಿ'
  • 'ಕಾಕ್ರೋಚ್ ಜನತಾ ಪಾರ್ಟಿ' ಉಗಮ ಮತ್ತು ಹಿನ್ನೆಲೆಯ ಸಂಪೂರ್ಣ ವಿವರ ಇಲ್ಲಿದೆ

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಬೃಹತ್ ಪ್ರತಿಭಟನೆಗಳ ಬೆನ್ನಲ್ಲೇ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಅವರು ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ತೀವ್ರ ವಿಫಲತೆ ಹಾಗೂ ಪರೀಕ್ಷೆಗಳ ಭದ್ರತೆಯಲ್ಲಿ ಆದ ಲೋಪಗಳಿಗೆ ನೈತಿಕ ಹೊಣೆ ಹೊತ್ತು ಅವರು ತಮ್ಮ ಹುದ್ದೆಯನ್ನು ತೊರೆದಿದ್ದು, ಈ ಬೆಳವಣಿಗೆಯು ಯುವಜನರ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವೆಂದು ವಿಶ್ಲೇಷಿಸಲಾಗುತ್ತಿದೆ.

‘ಕಾಕ್ರೋಚ್ ಜನತಾ ಪಾರ್ಟಿ’ ಉಗಮ ಮತ್ತು ಹಿನ್ನೆಲೆ:

ಈ ಇಡೀ ಯುವ ಕ್ರಾಂತಿಯ ಹಿಂದೆ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party – CJP) ಎಂಬ ಚಳವಳಿಯ ಕೈಯಿದೆ. ಪ್ರಮುಖ ಪರೀಕ್ಷಾ ಅಕ್ರಮಗಳ ನಂತರ ಹುಟ್ಟಿಕೊಂಡ ಈ ಚಳವಳಿಯನ್ನು ಮೇ 16 ರಂದು ಅಭೀಜಿತ್ ದೀಪ್ಕೆ (Abhijeet Dipke) ಎಂಬ 30 ವರ್ಷದ ಯುವಕ ಪ್ರಾರಂಭಿಸಿದರು. ಬೋಸ್ಟನ್ ವಿಶ್ವವಿದ್ಯಾಲಯದ ಪಿಆರ್ ಪದವೀಧರ ಹಾಗೂ ಆಮ್ ಆದ್ಮಿ ಪಾರ್ಟಿಯ ಮಾಜಿ ಸೋಶಿಯಲ್ ಮೀಡಿಯಾ ತಂತ್ರಜ್ಞರಾಗಿರುವ ಅಭೀಜಿತ್, ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ವೇಳೆ ಹಿರಿಯ ನ್ಯಾಯಮೂರ್ತಿಯೊಬ್ಬರು ಯುವ ಉದ್ಯೋಗಿಗಳ ಕುರಿತು ನೀಡಿದರೆನ್ನಲಾದ ಹೇಳಿಕೆಗಳಿಗೆ ಪ್ರತಿಯಾಗಿ, “ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ” (Voice of the Lazy and Unemployed) ಎಂಬ ಶೀರ್ಷಿಕೆಯಡಿ ಈ ಡಿಜಿಟಲ್ ಚಳವಳಿಯನ್ನು ರೂಪಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾದ ಕ್ರಾಂತಿ:

ಆರಂಭದಲ್ಲಿ ಕೇವಲ ವಿಡಂಬನಾತ್ಮಕ (satirical) ಮೀಮ್ ಆಂದೋಲನವಾಗಿ ಶುರುವಾದ CJP, ಕೆಲವೇ ದಿನಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಧೂಳೆಬ್ಬಿಸಿತು. ಸ್ಥಾಪನೆಯಾದ ಒಂದೇ ವಾರದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 2.05 ಕೋಟಿಗೂ ಹೆಚ್ಚು ಫಾಲೋವರ್ಸ್‌ಗಳನ್ನು ಸಂಪಾದಿಸಿತು. ಸರ್ಕಾರದ ಕಾನೂನು ಕ್ರಮಗಳಿಂದಾಗಿ ‘X’ (ಟ್ವಿಟರ್) ಖಾತೆ ಭಾರತದಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಆಗಿದ್ದರೂ, 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಬೆಂಬಲಿಸಿದರು. ಪ್ರತ್ಯೇಕ ವೆಬ್‌ಸೈಟ್ ಮತ್ತು ಮ್ಯಾನಿಫೆಸ್ಟೋ ಬಿಡುಗಡೆ ಮಾಡಿ ಲಕ್ಷಾಂತರ ಯುವಕರನ್ನು ತನ್ನತ್ತ ಸೆಳೆಯಿತು.

ಬೀದಿಗಿಳಿದ ಯುವಜನತೆ;ಸಂಸತ್ ಚಲೋ ಮತ್ತು ಲಾಠಿ ಪ್ರಹಾರ:

ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದ ಈ ಆಕ್ರೋಶ ಶೀಘ್ರದಲ್ಲೇ ಬೀದಿಗಿಳಿಯಿತು. ರಾಜಧಾನಿ ದೆಹಲಿಯಲ್ಲಿ ವಾರಗಳ ಕಾಲ ನಡೆಸಿದ ಧರಣಿ ಸತ್ಯಾಗ್ರಹವು ಅಂತಿಮವಾಗಿ ಸಂಸತ್ ಭವನದತ್ತ ಬೃಹತ್ ಮೆರವಣಿಗೆಯಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು (Tear gas) ಮತ್ತು ಲಾಠಿ ಪ್ರಹಾರ ನಡೆಸಿದ್ದು ತೀವ್ರ ಉದ್ವಿಗ್ನತೆಗೆ ಕಾರಣವಾಯಿತು. ವ್ಯವಸ್ಥೆಯ ವಿರುದ್ಧ ಯುವ ಪೀಳಿಗೆ (Gen Z) ನಡೆಸಿದ ಈ ಬೃಹತ್ ಹೋರಾಟವು ಅಂತಿಮವಾಗಿ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದೆ. ಅಲ್ಲಿಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಎಲ್ಲ ಬೇಡಿಕೆಗಳೂ ಈಡೇರಿದಂತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Sat, 25 July 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us