ಹೌಸ್ವೈಫ್ನಂತೆಯೆ ‘ಹೌಸ್ ಹಸ್ಬೆಂಡ್’ ಸಂಪ್ರದಾಯ ಸಾಮಾನ್ಯವಾಗಲಿ: ಮದ್ರಾಸ್ ಹೈಕೋರ್ಟ್
ಹೌಸ್‌ವೈಫ್‌ನಂತೆ ಪುರುಷರು 'ಹೌಸ್ ಹಸ್ಬೆಂಡ್' ಆಗುವುದು ಸಮಾಜದಲ್ಲಿ ಸಾಮಾನ್ಯವಾಗಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ನೀಡಿಕೆ ನೀಡಿದೆ. ವೈದ್ಯ ದಂಪತಿಯ ವಿಚ್ಛೇದನ ಮೇಲ್ಮನವಿ ವಿಚಾರಣೆ ವೇಳೆ, ಗೃಹ ನಿರ್ವಹಣೆ ಲಿಂಗಾತೀತವಾಗಿದ್ದು ಪತಿಯಂದಿರು ಮನೆಗೆಲಸದ ಜವಾಬ್ದಾರಿ ಹಂಚಿಕೊಳ್ಳುವುದು ಮದುವೆ ಉಳಿಸಲು ಸಹಕಾರಿ ಎಂದು ಪೀಠ ವ್ಯಾಖ್ಯಾನಿಸಿದೆ. ಜೊತೆಗೆ 2.5 ಕೋಟಿ ರೂ. ಪರಿಹಾರದೊಂದಿಗೆ ವಿಚ್ಛೇದನ ಮಂಜೂರು ಮಾಡಿದೆ.

ಮುಖ್ಯಾಂಶಗಳು
- 'ಹೌಸ್ ಹಸ್ಬೆಂಡ್' ಸಂಪ್ರದಾಯ ಸಾಮಾನ್ಯವಾಗಬೇಕು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ.
- ವೈದ್ಯ ದಂಪತಿಯ ಸುದೀರ್ಘ ವೈವಾಹಿಕ ವಿವಾದಕ್ಕೆ ಹೈಕೋರ್ಟ್‌ನಲ್ಲಿ ಪರಸ್ಪರ ವಿಚ್ಛೇದನದ ಮುಕ್ತಿ.
- ಪತ್ನಿಗೆ ಪರಿಹಾರವಾಗಿ 2.5 ಕೋಟಿ ರೂ. ಪಾವತಿಸಲು ಪತಿಗೆ ಕೋರ್ಟ್ ಆದೇಶ.
ಚೆನ್ನೈ, ಸೆಪ್ಟೆಂಬರ್ 26: ಮನೆ ಮತ್ತು ಮಕ್ಕಳ ಜವಾಬ್ದಾರಿ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ, ಮನೆಕೆಲಸಗಳಲ್ಲಿ ಪುರುಷರೂ ತೊಡಗಿಸಿಕೊಳ್ಳಬೇಕೆಂಬುದು ಹೊಸ ಪೀಳಿಗೆಯವರ ವಾದ. ಇದಕ್ಕೆ ಪುಷ್ಠಿ ಕೊಟ್ಟಂತೆ “ಮಹಿಳೆಯರಂತೆಯೇ ಪುರುಷರೂ ‘ಹೌಸ್ ಹಸ್ಬೆಂಡ್’ ಆಗುವ ಸಂಪ್ರದಾಯ ಸಮಾಜದಲ್ಲಿ ಸಾಮಾನ್ಯವಾಗಬೇಕು” ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಅಭಿಪ್ರಾಯಪಟ್ಟಿದೆ. ಈ ಬದಲಾವಣೆಯು ಕುಟುಂಬ ವ್ಯವಸ್ಥೆ ಹಾಗೂ ವಿವಾಹವನ್ನು ಉಳಿಸಲು ಸಹಕಾರಿಯಾಗಲಿದೆ ಎಂದು ಕೋರ್ಟ್ ಪ್ರತಿಪಾದಿಸಿದೆ. ವೈದ್ಯ ದಂಪತಿಯೊಂದರ ವಿಚ್ಛೇದನ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಹಾಗೂ ನ್ಯಾಯಮೂರ್ತಿ ಎಂ.ಡಿ. ಸುಮಾತಿ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಹೇಳಿಕೆ ನೀಡಿದೆ.
ಏನಿದು ಪ್ರಕರಣ?
ದಂಪತಿಯು 2011ರಫೆಬ್ರವರಿ 9 ರಂದು ತಿರುವಣ್ಣಾಮಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಆ ಸಮಯದಲ್ಲಿ ಇಬ್ಬರೂ ಪಾಂಡಿಚೇರಿಯ ಶ್ರೀ ವೆಂಕಟೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು. ಅವರಿಗೆ 2012 ರಲ್ಲಿ ಮೊದಲ ಮಗ ಹಾಗೂ 2016 ರಲ್ಲಿ ಎರಡನೇ ಮಗು ಜನಿಸಿತು.
ಈಗಾಗಲೇ ಎಂಡಿ (MD) ಪದವಿ ಹೊಂದಿದ್ದ ಪತಿಯು ಉನ್ನತ ವ್ಯಾಸಂಗ ಮಾಡಲು ಬಯಸಿ ಡಿಎಂ ಕಾರ್ಡಿಯಾಲಜಿ ಕೋರ್ಸ್‌ಗೆ ಸೇರಿದರು. ಪತ್ನಿ ತನ್ನ ಮಗುವನ್ನು ನೋಡಿಕೊಳ್ಳಲು ತೇನಿಯಲ್ಲಿರುವ ತನ್ನ ಹೆತ್ತವರೊಂದಿಗೆ ಉಳಿದುಕೊಂಡರು. ಪತಿಯು ಓದುತ್ತಲೇ ತಿಂಗಳಿಗೊಮ್ಮೆ ಕುಟುಂಬವನ್ನು ಭೇಟಿ ಮಾಡುತ್ತಿದ್ದು, 2017 ರಲ್ಲಿ ಕಾರ್ಡಿಯಾಲಜಿ ಕೋರ್ಸ್ ಪೂರ್ಣಗೊಳಿಸಿದರು.
ನಂತರ ಅವರು ಇಂಟರ್ವೆನ್ಷನಲ್ ಕಾರ್ಡಿಯಾಲಜಿಯಲ್ಲಿ ಎಫ್‌ಎನ್‌ಬಿ ಅರ್ಹತೆ ಪಡೆಯಲು ಬಯಸಿದರು ಮತ್ತು ತಿಂಗಳಿಗೊಮ್ಮೆ ಬಂದು ಹೋಗುವುದನ್ನು ಮುಂದುವರಿಸಿದರು. ಏಪ್ರಿಲ್ 2020ರ ನಂತರವಷ್ಟೆ ದಂಪತಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದು. ನಂತರ ಪತಿಯ ವೃತ್ತಿಜೀವನ ಸುಧಾರಿಸಿದ ಮೇಲೆ, ಅವರು ಪತ್ನಿಯ ಹೆತ್ತವರ ಮನೆಯಿಂದ ಹೊರಹೋಗಲು ಬಯಸಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಕೈ ಕೈ ಮಿಲಾಯಿಸುವವರೆಗೂ ಹೋಯಿತು.
ಪತ್ನಿಯು ಗೃಹಸ್ಥ ಜೀವನದ ಹಕ್ಕುಗಳ ಮರುಸ್ಥಾಪನೆ ಕೋರಿ 2022 ರಲ್ಲಿ ಅರ್ಜಿ ಸಲ್ಲಿಸಿದರೆ, ಪತಿಯು ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದರು. ಎರಡೂ ಪ್ರಕರಣಗಳನ್ನು ತೇನಿಯ ಕುಟುಂಬ ನ್ಯಾಯಾಲಯಕ್ಕೆ ವರ್ಗಾಯಿಸಿ ಒಟ್ಟಿಗೆ ವಿಚಾರಣೆ ನಡೆಸಲಾಯಿತು. ಕುಟುಂಬ ನ್ಯಾಯಾಲಯವು 2024ರ ಆಗಸ್ಟ್ 1ರಂದು ಎರಡೂ ಅರ್ಜಿಗಳನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಎರಡೂ ಕಡೆಯವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
ಕೋರ್ಟ್ ಹೇಳಿದ್ದೇನು?
‘ಹೋಮ್ ಮೇಕರ್’ (ಗೃಹ ನಿರ್ವಾಹಕ) ಎಂಬುದು ಲಿಂಗಾತೀತ ಪದವಾಗಿದ್ದು, ಸುಪ್ರೀಂ ಕೋರ್ಟ್ ಕೂಡ ಮನೆಗೆಲಸದ ಆರ್ಥಿಕ ಮೌಲ್ಯವನ್ನು ಗುರುತಿಸಿದೆ. ‘ಹೌಸ್ ವೈಫ್’ ಇದ್ದಂತೆ ‘ಹೌಸ್ ಹಸ್ಬೆಂಡ್’ ಇರುವುದರಲ್ಲಿ ತಪ್ಪೇನೂ ಇಲ್ಲ. ಐಟಿ ಹಾಗೂ ಇತರ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ವೃತ್ತಿ ಮತ್ತು ಸಂಸಾರ ಸರಿದೂಗಿಸುವುದು ಕಷ್ಟವಾಗುತ್ತಿದ್ದು, ಮದುವೆಯನ್ನು ತಮ್ಮ ವೃತ್ತಿ ಬೆಳವಣಿಗೆಗೆ ತೊಡಕು ಎಂದು ಭಾವಿಸುತ್ತಿದ್ದಾರೆ. ಇದರಿಂದಾಗಿ ಅವಿವಾಹಿತ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಪತಿಯಂದಿರು ಮನೆಗೆಲಸದ ಜವಾಬ್ದಾರಿ ಹಂಚಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.
ಪ್ರಸ್ತುತ ಪ್ರಕರಣದಲ್ಲಿ, ಗಂಡ ಉನ್ನತ ಶಿಕ್ಷಣ ಪಡೆಯುವವರೆಗೆ ಪತ್ನಿ ತನ್ನ ವೃತ್ತಿ ಬದಿಗಿಟ್ಟು ಕುಟುಂಬ ಹಾಗೂ ಇಬ್ಬರು ಮಕ್ಕಳನ್ನು ನೋಡಿಕೊಂಡಿದ್ದರು. ಆದರೆ ಗಂಡ ಯಶಸ್ವಿ ವೈದ್ಯನಾದ ನಂತರ ‘ಪುರುಷ ಅಹಂ’ ಜಾಗೃತಗೊಂಡು ದಂಪತಿ ನಡುವೆ ಬಿರುಕು ಮೂಡಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ದಂಪತಿ ಕಳೆದ 5 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಸಂಬಂಧ ಸರಿಪಡಿಸಲಾಗದ ಹಂತ ತಲುಪಿರುವುದರಿಂದ ಪತಿಯು ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಒಟ್ಟು 2.5 ಕೋಟಿ ರೂ. ಪರಿಹಾರ ಪಾವತಿಸುವ ಷರತ್ತಿನೊಂದಿಗೆ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Sat, 26 September 26




