
ನವದೆಹಲಿ, (ಸೆಪ್ಟೆಂಬರ್ 29): 2024ರ ಲೋಕಸಭಾ ಚುನಾವಣೆ ಸಮರದ ಬಳಿಕ, ಕಾಂಗ್ರೆಸ್ ಇದೀಗ ಚುನಾವಣಾ ಆಯೋಗದ ವಿರುದ್ಧ ಸಮರ ಸಾರಿದೆ. ಇಂದು (ಸೆಪ್ಟೆಂಬರ್ 29) ದೆಹಲಿಯ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಅಂದ್ರೆ CWC ಸಭೆಯಲ್ಲಿ SIR ಅಂದ್ರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಚರ್ಚೆ ನಡೆದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಖರ್ಗೆ, ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನ ಮೋದಿ ಸರ್ಕಾರದ ಕೈಗೊಂಬೆ ಎಂದು ಜರಿದಿರುವ ಖರ್ಗೆ, ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು CWC ಸಭೆಯಲ್ಲಿ 3 ನಿರ್ಣಯಗಳನ್ನೂ ಕೈಗೊಳ್ಳಲಾಗಿದೆ. ಅದೇನಂದ್ರೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು. ಹಾಗೂ SIR ಅನ್ನು ತಕ್ಷಣವೇ ಅಮಾನತುಗೊಳಿಸಬೇಕು. ಹಾಗೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 13 ಕೋಟಿ 30 ಲಕ್ಷ ಹೆಸರುಗಳನ್ನು ತಕ್ಷಣವೇ ಮರುಸೇರ್ಪಡೆಗೊಳಿಸಬೇಕೆಂದು CWC ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.
ಒಂದು ಷಡ್ಯಂತ್ರದ ಮೂಲಕ ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಮತ್ತು ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಖರ್ಗೆ, ಚುನಾವಣಾ ಆಯೋಗದ ಮುಂದೆ 5 ಬೇಡಿಕೆ ಇಟ್ಟಿದ್ದಾರೆ .
ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ, ಸೇರಿಸಿರುವ ದತ್ತಾಂಶವನ್ನ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು. ಯಾರ ಮತ ಡಿಲೀಟ್ ಆಗಿವೆಯೋ ಅವರಿಗೆ ಮಾಹಿತಿ ನೀಡಿ, ಮೇಲ್ಮನವಿಗೆ ಅವಕಾಶ ಕೊಡಬೇಕು ಅಲ್ಲದೇ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಾಮಾನ್ಯ ಫಾರ್ಮೆಟ್‌ನಲ್ಲಿ ವೋಟರ್ ಲಿಸ್ಟ್ ದತ್ತಾಂಶವನ್ನ ನೀಡಬೇಕು ಹಾಗೂ ವೋಟರ್ ಲಿಸ್ಟ್‌ನಲ್ಲಿ ಆಗಿರುವ ಲೋಪಗಳ ಬಗ್ಗೆ ಸ್ವತಂತ್ರ ತನಿಖೆ ಆಗಬೇಕು. ಅಂತಿಮವಾಗಿ ಚುನಾವಣಾ ಪ್ರಕ್ರಿಯೆ, ನಿರ್ಧಾರ ಹಾಗೂ ಡೇಟಾದಲ್ಲಿ 100% ಪಾರದರ್ಶಕತೆ ಇರಬೇಕು ಅಂತಾ CWC ಸಭೆಯಲ್ಲಿ ಬೇಡಿಕೆ ಇಡಲಾಗಿದೆ.

ಈ ನಡುವೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯ ಬೆಲಾ ಎಸ್ಟೇಟ್ ನ ವೋಟ್ ಚೋರಿ ಬಾಂಬ್ ಸಿಡಿಸಿದ್ದಾರೆ. 728 ಜನರ ಪೈಕಿ ಬರೋಬ್ಬರಿ 727 ಜನರ ವೋಟರ್ ಐಡಿಯನ್ನೇ ಡಿಲೀಟ್ ಮಾಡಲಾಗಿದೆ. ಬಡವರ ಹಕ್ಕನ್ನ ಕಸಿದುಕೊಳ್ಳಲಾಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯೋಗ, ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನ ವಿಸ್ತರಿಸಲಾಗಿದೆ ಎಂದು
ತಿಳಿಸಿದೆ. SIR ಕುರಿತು ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ, ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರೋ ಆರೋಪಕ್ಕೆ, ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.
ವರದಿ: ನಟರಾಜ್, ದೆಹಲಿ ಪ್ರತಿನಿಧಿ
Published On - 7:18 pm, Tue, 29 September 26