ಅಮ್ಮನ ಬಳಿ ಬದುಕೋಕೇ ಇಷ್ಟವಿಲ್ಲ ಎಂದಿದ್ದೆ; ಮಾನಸಿಕ ಖಿನ್ನತೆಯ ದಿನಗಳನ್ನು ನೆನಪಿಸಿಕೊಂಡ ದೀಪಿಕಾ ಪಡುಕೋಣೆ
Pariksha Pe Charcha: ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಾದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ ಮತ್ತು ಪರೀಕ್ಷಾ ಆತಂಕವನ್ನು ನಿವಾರಿಸುವ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳೊಂದಿಗೆ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಗೇ, ತಾನು ಖಿನ್ನತೆಯಿಂದ ಯಾವ ರೀತಿ ಹೊರಬಂದೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
ನವದೆಹಲಿ: ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಕೇಂದ್ರ ಸರ್ಕಾರದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಭಾಗವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದಿನ ಎಪಿಸೋಡ್ನಲ್ಲಿ ಮಾನಸಿಕ ಆರೋಗ್ಯ, ಖಿನ್ನತೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಮುಂಬೈಗೆ ಬಂದು ನಟನಾ ವೃತ್ತಿಯನ್ನು ಆರಂಭಿಸಿದ ಆರಂಭಿಕ ದಿನಗಳಲ್ಲಿ ತಾನು ಯಾವ ರೀತಿಯ ಮಾನಸಿಕ ಖಿನ್ನತೆಯನ್ನು ಅನುಭವಿಸಿದ್ದೆ, ಅದರಿಂದ ಹೊರಗೆ ಬರಲಾರದೆ ಹೇಗೆ ಒದ್ದಾಡಿದ್ದೆ, ಜೀವವನ್ನೇ ಕಳೆದುಕೊಳ್ಳಲು ಯೋಚಿಸಿದ್ದೆ ಎಂಬುದೆಲ್ಲದರ ಬಗ್ಗೆಯೂ ದೀಪಿಕಾ ಮುಕ್ತವಾಗಿ ಮಾತನಾಡಿದ್ದಾರೆ. ಒಂದು ಸಮಯದಲ್ಲಿ ನಾನು ನನ್ನ ತಾಯಿಯ ಬಳಿ ನನಗೆ ಇನ್ನು ಬದುಕೋಕೇ ಇಷ್ಟವಿಲ್ಲ ಎಂದು ಹೇಳಿದ್ದನ್ನು ದೀಪಿಕಾ ಪಡುಕೋಣೆ ನೆನಪಿಸಿಕೊಂಡಿದ್ದಾರೆ.
ಮಾನಸಿಕ ಆರೋಗ್ಯವೆನ್ನುವುದು ಎಲ್ಲರಿಗೂ ಬಹಳ ಮುಖ್ಯ. ಆದರೆ, ಬಹುತೇಕ ಜನರು ಖಿನ್ನತೆಗೆ ಒಳಗಾಗಿದ್ದರೂ ಅದನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ ಮತ್ತು ಅದಕ್ಕೆ ಪರಿಹಾರ ಪಡೆಯುವುದಿಲ್ಲ. ಆದರೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾನು ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಬಹಿರಂಗಪಡಿಸುವ ಮೂಲಕ ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯಿಸಬೇಡಿ ಎಂದು ಕರೆ ನೀಡಿದ್ದರು. ಇದೀಗ ಇಂದಿನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಎಪಿಸೋಡ್ನಲ್ಲಿ ವಿದ್ಯಾರ್ಥಿಗಳ ಜೊತೆ ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಸಂವಾದ ನಡೆಸಿದ್ದಾರೆ.
#WATCH | ‘Pariksha Pe Charcha’ | Actress Deepika Padukone shares her journey of overcoming depression while interacting with students.
(Source: DD) pic.twitter.com/iVVldrEWIH
— ANI (@ANI) February 12, 2025
ಇಂದಿನ ಚರ್ಚೆಯ ಸಮಯದಲ್ಲಿ ದೀಪಿಕಾ ಪಡುಕೋಣೆ ಖಿನ್ನತೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮತ್ತು ಆತ್ಮಹತ್ಯೆಯ ಯೋಚನೆಯ ಬಗ್ಗೆ ತನ್ನ ತಾಯಿಯಲ್ಲಿ ಹೇಳಿಕೊಂಡ ಕ್ಷಣದ ಬಗ್ಗೆ ಮಾತನಾಡಿದ್ದಾರೆ. “ಮಾಡೆಲಿಂಗ್ ಮತ್ತು ನಟನೆಯಲ್ಲಿ ಯಶಸ್ಸನ್ನು ಸಾಧಿಸಿದ್ದರೂ ನನಗೆ ನನ್ನ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬುದು ಗೊತ್ತಾಗಿತ್ತು. ಆದರೆ, ಅದೇನೆಂದು ಅರ್ಥವಾಗಿರಲಿಲ್ಲ. ನಾನು ಶಾಲಾ ದಿನಗಳಿಂದಲೂ ಕ್ರೀಡೆ, ಮಾಡೆಲಿಂಗ್ ಮತ್ತು ನಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಹೀಗಾಗಿ, ನನಗೆ ಸ್ಟೇಜ್ ಭಯವೇನೂ ಇರಲಿಲ್ಲ. ಆದರೆ, 2014ರಲ್ಲಿ ನಾನು ಇದ್ದಕ್ಕಿದ್ದಂತೆ ಮೂರ್ಛೆ ಹೋಗುವವರೆಗೂ ನನಗೆ ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಗೊತ್ತಾಗಲೇ ಇಲ್ಲ. ನನ್ನ ಮನಸಿನ ಮೇಲೆ ನಾನು ಸಾಕಷ್ಟು ಒತ್ತಡ ಹೇರುತ್ತಿದ್ದೆ ಎಂದು ಆಗಲೇ ನನಗೆ ಅರ್ಥವಾಗಿದ್ದು.” ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.
#WATCH | ‘Pariksha Pe Charcha’ | Actress Deepika Padukone interacts with students.
While speaking with the students, Deepika Padukone says, “… Focus on the things that you can control… You can control whether you are prepared or not. To manage stress, talk to your parents… pic.twitter.com/tVdMuT53B9
— ANI (@ANI) February 12, 2025
ಇದನ್ನೂ ಓದಿ: Deepika Padukone: ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ; ವಿದ್ಯಾರ್ಥಿಗಳಿಗೆ ನೀಡಿದ ಸಲಹೆಗಳೇನು?
ಖಿನ್ನತೆಯು ಯಾವಾಗಲೂ ಗೋಚರಿಸುವುದಿಲ್ಲ ಮತ್ತು ಬಾಹ್ಯವಾಗಿ ಸಂತೋಷ ಮತ್ತು ಸಾಮಾನ್ಯವಾಗಿ ಕಾಣುವ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು. “ಒಮ್ಮೆ ನನ್ನ ತಾಯಿ ಮುಂಬೈನಲ್ಲಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಅಲ್ಲಿಯವರೆಗೂ ಮುಂಬೈನಲ್ಲಿ ನಾನೊಬ್ಬಳೇ ಇರುತ್ತಿದ್ದೆ. ಅಮ್ಮ ಆಗಾಗ ಬಂದು ಹೋಗುತ್ತಿದ್ದರು. ಅಮ್ಮ ಸ್ವಲ್ಪ ದಿನ ಇದ್ದು ಮುಂಬೈನಿಂದ ಬೆಂಗಳೂರಿಗೆ ವಾಪಾಸ್ ಹೊರಟಾಗ ನಾನು ಅಳಲಾರಂಭಿಸಿದ್ದೆ. ಅವರು ಏನಾಯಿತೆಂದು ಕೇಳಿದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ನನಗೆ ಏನಾಗ್ತಿದೆ ಎಂದು ಗೊತ್ತಿಲ್ಲ. ನಾನು ಅಸಹಾಯಕಳಾಗಿದ್ದೇನೆ ಮತ್ತು ಹತಾಶಳಾಗಿದ್ದೇನೆ. ನನಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದೆ” ಎಂದು ದೀಪಿಕಾ ಪಡುಕೋಣೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Join actor @deepikapadukone as she shares valuable insights on mental health, stress management, and overcoming exam anxiety with #ExamWarriors at #ParikshaPeCharcha2025.
Tune in on 12th February at 10 AM!#PPC2025 #ParikshaPeCharcha @PMOIndia @EduMinOfIndia @dpradhanbjp… pic.twitter.com/1DP86Xqfi0
— Ministry of Information and Broadcasting (@MIB_India) February 11, 2025
ನಾನು ಆತ್ಮಹತ್ಯೆಯ ಬಗ್ಗೆ ಮಾತನಾಡಿದಾಗ ನನ್ನ ತಾಯಿ ನನ್ನ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದನ್ನು ಗುರುತಿಸಿದರು. ತಕ್ಷಣ ಅವರು ಮನಶಾಸ್ತ್ರಜ್ಞರನ್ನು ಸಂಪರ್ಕಿಸಲು ಸೂಚಿಸಿದರು. ಆಮೇಲೆ ನಾನು ವೈದ್ಯರ ಸಹಾಯ ಪಡೆದು ಖಿನ್ನತೆಯಿಂದ ಹೊರಬಂದೆ. ಇಂದಿಗೂ ಮಾನಸಿಕ ಆರೋಗ್ಯದ ಸಮಸ್ಯೆ ಇದೆ ಎಂದು ಗೊತ್ತಾದರೆ ಸಮಾಜದಲ್ಲಿ ಜನರು ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ ಎಂಬ ಆತಂಕ ಹಲವರಿಗಿದೆ. ಇದೇ ಕಾರಣಕ್ಕೆ ಆ ಸಮಸ್ಯೆಗೆ ವೃತ್ತಿಪರರ ಬಳಿ ಹೋಗದೆ ಕೊನೆಗೆ ಆತ್ಮಹತ್ಯೆಯ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ದೀಪಿಕಾ ಪಡುಕೋಣೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 8 ಎಪಿಸೋಡ್ಗಳಲ್ಲಿ ಪ್ರಸಾರವಾಗಲಿದೆ ಪರೀಕ್ಷಾ ಪೇ ಚರ್ಚೆ; ಮಿಸ್ ಮಾಡದೆ ನೋಡಿ ಎಂದ ಮೋದಿ
“ಆತಂಕ, ಒತ್ತಡ ಮತ್ತು ಖಿನ್ನತೆ ಯಾರ ಮೇಲೂ ಪರಿಣಾಮ ಬೀರಬಹುದು. ಅದರ ಬಗ್ಗೆ ಮಾತನಾಡುವುದರಿಂದ ನಿಜವಾಗಿಯೂ ನಮ್ಮ ಮನಸಿನ ಮೇಲಿನ ಹೊರೆ ಕಡಿಮೆಯಾಗುತ್ತದೆ.” ಎಂದು ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರನ್ನು ಬೆಂಬಲಿಸಲು ಲಿವ್ ಲವ್ ಲಾಫ್ ಎಂಬ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




