ದಿವಾಳಿಯಂಚಿನಲ್ಲಿದ್ದ ದೇಶವನ್ನು ಆ ಒಂದು ಬಜೆಟ್​ನಿಂದ ರಕ್ಷಿಸಿದ್ದ ಮನಮೋಹನ್ ಸಿಂಗ್!

1991ರಲ್ಲಿ ಭಾರತ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಡಾ. ಮನಮೋಹನ್ ಸಿಂಗ್ ಅವರು ಮಂಡಿಸಿದ್ದ ಬಜೆಟ್ ದೇಶದ ಆರ್ಥಿಕತೆಗೆ ಹೊಸ ತಿರುವು ನೀಡಿತು. ಉದಾರೀಕರಣ, ಖಾಸಗೀಕರಣ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಒತ್ತು ನೀಡಿದ್ದರಿಂದಾಗಿ ಉದ್ಯಮಗಳಿಗೆ ಸ್ವಾತಂತ್ರ್ಯ ಹೆಚ್ಚಿತು ಮತ್ತು ಭಾರತ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಿತು. 1991ರ ಬಜೆಟ್​​ ಮೂಲಕ ಮನಮೋಹನ್ ಸಿಂಗ್ ದೇಶವನ್ನು ರಕ್ಷಿಸಿದ್ದು ಹೇಗೆಂಬುದನ್ನು ತಿಳಿಯಲು ಮುಂದೆ ಓದಿ.

ದಿವಾಳಿಯಂಚಿನಲ್ಲಿದ್ದ ದೇಶವನ್ನು ಆ ಒಂದು ಬಜೆಟ್​ನಿಂದ ರಕ್ಷಿಸಿದ್ದ ಮನಮೋಹನ್ ಸಿಂಗ್!
ಡಾ. ಮನಮೋಹನ್ ಸಿಂಗ್‌

Updated on: Dec 27, 2024 | 9:40 AM

ನವದೆಹಲಿ, ಡಿಸೆಂಬರ್ 27: ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದ ಸಮಯವದು. 1991ರಲ್ಲಿ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಹಳ್ಳಹಿಡಿದಿತ್ತು. ಪಿವಿ ನರಸಿಂಹರಾವ್‌ ಅವರಿಗೂ ಹಿಂದೆ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಅವರು ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟು ಬಂದಿದ್ದರು. ಭಾರತದ ಕೈಯಲ್ಲಿ ಆಗ ಇದ್ದದ್ದು 1 ಶತಕೋಟಿ ಡಾಲರ್‌ ವಿದೇಶಿ ವಿನಿಮಯದ ಮೀಸಲು ನಿಧಿ ಮಾತ್ರ. 15 ದಿನಗಳಲ್ಲಿ ದೇಶ ದಿವಾಳಿಯಾಗುವ ಸ್ಥಿತಿ ತಲುಪಿತ್ತು. ಇಂತಹ ಹೊತ್ತಿನಲ್ಲಿ ಕೇಂದ್ರ ಕೇಂದ್ರ ಹಣಕಾಸು ಸಚಿವನಾಗುವಂತೆ ಆಗಿನ ಪ್ರಧಾನಿ ಪಿವಿ ನರಸಿಂಹರಾವ್‌ ಅವರು ಡಾ. ಮನಮೋಹನ್ ಸಿಂಗ್‌ರನ್ನು ಆಹ್ವಾನಿಸಿದ್ದರು. ಒಂದು ಕಡೆ ಆತಂಕ. ಆದರೆ ಆಹ್ವಾನ ಸ್ವೀಕರಿಸಲು ಸಿಂಗ್‌ ಹಿಂದೆ ಮುಂದೆ ನೋಡಲಿಲ್ಲ. ವಿತ್ತ ಸಚಿವನಾಗಿ ಅಧಿಕಾರ ಸ್ವೀಕರಿಸಿಬಿಟ್ಟರು. ನೆಹರೂ ಯುಗಕ್ಕೆ ಸಂಬಂಧಿಸಿದ ಸಮಾಜವಾದಿ ಆರ್ಥಿಕತೆಯ ನಿರ್ಬಂಧಗಳಿಂದ ಭಾರತೀಯ ಆರ್ಥಿಕತೆಯನ್ನು ಹೊರ ತರಲು ದಿಟ್ಟ ಹೆಜ್ಜೆ ಇಟ್ಟರು.

ಆರ್ಥಿಕತೆಗೆ ಹೊಸ ತಿರುವು ನೀಡಿದ1991ರ ಬಜೆಟ್

1991ರಲ್ಲಿ ಭಾರತವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಯಿತು. ವಿದೇಶಿ ವಿನಿಮಯದ ಕೊರತೆ, ಚಲಾವಣೆಯ ಕುಸಿತ, ಮತ್ತು ಉನ್ನತ ದರದ ದೇಣಿಗೆಯ ಜವಾಬ್ದಾರಿ ಸರ್ಕಾರದ ಮೇಲೆ ಹೊರೆಯಾಗಿತ್ತು. ಇಂತಹ ಸಮಯದಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಾಗಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು 1991ರ ಬಜೆಟ್ ಮೂಲಕ ಅಂದಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಪಾರು ಮಾಡಿದರು. 1991ರ ಬಜೆಟ್ ಅನ್ನು ಭಾರತೀಯ ಇತಿಹಾಸದಲ್ಲಿ ದೇಶದ ಆರ್ಥಿಕತೆಗೆ ಹೊಸ ತಿರುವು ನೀಡಿದ ಬಜೆಟ್ ಎಂದು ಕರೆಯಲಾಗುತ್ತದೆ.

ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನರಸಿಂಹರಾವ್ ಸರ್ಕಾರದ ಈ ಬಜೆಟ್ ದೇಶದ ಆರ್ಥಿಕತೆಯನ್ನು ಜಾಗತಿಕ ವಾಣಿಜ್ಯಕ್ಕೆ ಬಾಗಿಲನ್ನು ತೆರೆಯಿತು. ಆ ಮೂಲಕ ಅಂದಿನಿಂದ ಭಾರತ ಮುಕ್ತ ಮಾರುಕಟ್ಟೆಗೆ ತನ್ನನ್ನು ತೆರೆದುಕೊಂಡಿತು. ಆ ಬಜೆಟ್​​ನ ಪ್ರಮುಖ ನಿರ್ಧಾರಗಳು ಯಾವುವೆಂಬ ಮಾಹಿತಿ ಇಲ್ಲಿದೆ.

ಆರ್ಥಿಕ ಉದಾರೀಕರಣ

ಬಜೆಟ್ ಮೂಲಕ ವಾಣಿಜ್ಯ ನಿಯಂತ್ರಣಗಳನ್ನು ಕಡಿತಗೊಳಿಸಿ, ದೇಶದ ಆರ್ಥಿಕತೆಯನ್ನು ಜಾಗತಿಕ ವಾಣಿಜ್ಯಕ್ಕೆ ತೆರೆದರು. ಇಂಪೋರ್ಟ್ ಮತ್ತು ಎಕ್ಸ್‌ಪೋರ್ಟ್ ನಿಯಮಗಳನ್ನು ಸರಳಗೊಳಿಸಲಾಯಿತು.

ಖಾಸಗೀಕರಣ

ಸರ್ಕಾರ ಹಿತಾಸಕ್ತಿಯಲ್ಲಿರುವ ಸಾರ್ವಜನಿಕ ವಲಯದ ಘಟಕಗಳಲ್ಲಿ ಖಾಸಗೀಕರಣವನ್ನು ಪ್ರಾರಂಭಿಸಿ, ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲಾಯಿತು.

ಉದ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯ

ಕೈಗಾರಿಕಾ ಪರವಾನಗಿ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ, ಉದ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದರು.

ವಿದೇಶಿ ಬಂಡವಾಳ ಹೂಡಿಕೆಗೆ ಹೊಸ ನೀತಿ

ವಿದೇಶಿ ಬಂಡವಾಳ ಹೂಡಿಕೆ (FDI) ಹೆಚ್ಚಿಸಲು ಹೊಸ ನೀತಿಗಳನ್ನು ಅಳವಡಿಸಿದರು. ವಿದೇಶಿ ವಿನಿಮಯ ರಿಸರ್ವ್‌ಗಳನ್ನು ವೃದ್ಧಿಸಲು ರೂಪಾಯಿ ಚಲಾವಣೆಯಲ್ಲಿ ಬದಲಾವಣೆ ಮಾಡಿದರು.

ತೆರಿಗೆ ಸುಧಾರಣೆಗಳು

ಸರಕು ಮತ್ತು ಸೇವೆಗಳ ತೆರಿಗೆಯನ್ನು ಸರಳಗೊಳಿಸಿ, ಆರ್ಥಿಕ ಪ್ರಕ್ರಿಯೆಗಳನ್ನು ಸುಗಮಗೊಳಿಸಿದರು.

ಇದನ್ನೂ ಓದಿ: ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

ಇದೆಲ್ಲದರ ಪರಿಣಾಮ ಭಾರತದ ಆರ್ಥಿಕತೆಯ ಬೆಳವಣಿಗೆಯ ದರ ದ್ವಿಗುಣಗೊಂಡಿತು. ಭಾರತ ವಿದೇಶಿ ಬಂಡವಾಳ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಆಕರ್ಷಣೆ ತಾಣವಾಯಿತು. ಉದ್ಯೋಗಾವಕಾಶಗಳು ಹೆಚ್ಚಿದ್ದು ಉದ್ಯಮಶೀಲತೆಯನ್ನು ಪ್ರೋತ್ಸಾಹ ಪ್ರಾರಂಭವಾಯಿತು. 1991ರ ಬಜೆಟ್ ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯದ ನಾಂದಿಯಾಗಿ ಕಾಣಿಸಿಕೊಂಡಿದೆ. ಇದುವರೆಗೆ, ಈ ಬಜೆಟ್ ಅನ್ನು ದೇಶದ ಆರ್ಥಿಕತೆಯನ್ನು ಸಶಕ್ತಗೊಳಿಸಿದ ಪ್ರಮುಖ ಹೆಜ್ಜೆಯಾಗಿಯೇ ಗುರುತಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 am, Fri, 27 December 24

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us