ಡಿಆರ್‌ಡಿಒದ ಆಂಟಿ-ಕೊವಿಡ್ ಡ್ರಗ್ ಪ್ಯಾಕೆಟ್ಗೆ ₹990; ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಲಭ್ಯ
DRDO 2DG anti-Covid-19 Drug: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 2-ಡಿಜಿ ಔಷಧವು ಕೊವಿಡ್ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಬಹುದು ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಳೆದ ವಾರ ಹೇಳಿದ್ದರು.
ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) 2 ಡಿಜಿ ಆಂಟಿ-ಕೊವಿಡ್ -19 ಔಷಧಿಯನ್ನು ಡಾ. ರೆಡ್ಡೀಸ್ ಅವರ ಲ್ಯಾಬ್ ಪ್ರತಿ ಪುಟ್ಟ ಪ್ಯಾಕೆಟ್ಗೆ 990 ರೂ ನಂತೆ ಮಾರಾಟ ಮಾಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಔಷಧಿ ನೀಡಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿಮಾಡಿದೆ. ಕೊವಿಡ್ ಪ್ರತಿರೋಧ ಔಷಧದ 10,000 ಸ್ಯಾಶೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 2-ಡಿಜಿ ಔಷಧವು ಕೊವಿಡ್ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಬಹುದು ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಳೆದ ವಾರ ಹೇಳಿದ್ದರು.
The price of DRDO’s 2DG anti-COVID 19 drug has been kept at Rs 990 per sachet by Dr Reddy’s lab. Govt hospitals, central and state govt would be provided the medicine at a discounted price: Govt officials pic.twitter.com/FEic70fSq5
— ANI (@ANI) May 28, 2021
ಕೊವಿಡ್ ಪ್ರತಿರೋಧ ಔಷಧಿ 2-ಡಿಜಿ (2-ಡಿಯೋಕ್ಸಿ-ಡಿ-ಗ್ಲುಕೋಸ್) ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಡಿಆರ್‌ಡಿಒ (ಲ್ಯಾಬ್) ಮತ್ತು ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳ ಪ್ರಕಾರ ಇದು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಈ ತಿಂಗಳ ಆರಂಭದಲ್ಲಿ ಭಾರತದ ಔಷಧ ಮಹಾ ನಿಯಂತ್ರಕರು (Drugs Controller General of India – DGCI) ಈ ಔಷಧಿಯ ತುರ್ತು ಬಳಕೆಗೆ ಈ ತಿಂಗಳ ಆರಂಭದಲ್ಲಿ ಅನುಮತಿ ನೀಡಿದ್ದರು. ಸೋಂಕಿನ ತೀವ್ರತೆಯು ಕಡಿಮೆ ಅಥವಾ ತೀವ್ರವಾಗಿರುವ ರೋಗಿಗಳ ಚಿಕಿತ್ಸೆಗೆ ಈ ಔಷಧಿ ಬಳಸಬಹುದು ಎಂದು ತಿಳಿಸಿತ್ತು. ಅನೂಹ್ಯ ರೀತಿಯಲ್ಲಿ ದೇಶವು ಕೊರೊನಾ ಸೋಂಕಿನ 2ನೇ ಅಲೆಯ ಪಿಡುಗಿನ ಹಿಡಿತಕ್ಕೆ ಸಿಕ್ಕಿದ್ದ ಸಂದರ್ಭದಲ್ಲಿ ಈ ಅನುಮತಿ ದೊರೆತಿತ್ತು.
2ನೇ ಅಲೆಯ ಉತ್ತುಂಗದ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಆಮ್ಲಜನಕದ ತೀವ್ರ ಕೊರೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆ ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ಈ ಔಷಧಿಯನ್ನು ಡಿಆರ್ಡಿಒ ಬಿಡುಗಡೆ ಮಾಡಿತ್ತು.
ಈ ಅವಧಿಯಲ್ಲಿ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ರಕ್ಷಣಾ ಸಚಿವಾಲಯವು ‘ಈ ಔಷಧಿಯು ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಲಿದೆ. ಸೋಂಕಿತ ಜೀವಕೋಶಗಳನ್ನು ಸರಿಪಡಿಸಲು ಈ ಔಷಧಿ ನೆರವಾಗಲಿದೆ. ಕೊವಿಡ್ನಿಂದ ಬಳಲುತ್ತಿರುವ ಆಸ್ಪತ್ರೆಯಲ್ಲಿ ಕಳೆಯಬೇಕಾದ ಸಮಯವನ್ನೂ ಕಡಿತಗೊಳಿಸಲಿದೆ ಎಂದು ಹೇಳಿತ್ತು.
2 ಡಿಜಿ ಔಷಧಿಯ ಉತ್ಪಾದನೆಯನ್ನು ಹೆಚ್ಚಿಸಲು ಇನ್ನೂ ಎರಡು-ಮೂರು ಕಂಪನಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಳೆದ ವಾರ ಕೇಂದ್ರ ಸರ್ಕಾರವು ಹೇಳಿತ್ತು. 2ಡಿಜಿ ಔಷಧಿಗೆ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ತವಾಗಿದೆ. ಆದರೆ ಪೂರೈಕೆ ಮಿತಗೊಂಡಿದೆ. ಬೇಡಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಇನ್ನೂ ಮೂರ್ನಾಲ್ಕು ಕಂಪನಿಗಳಿಗೆ ಔಷಧಿ ಉತ್ಪಾದನೆಗೆ ಅವಕಾಶ ನೀಡಲಾಗುವುದು ಎಂದು ಹೇಳಿತ್ತು. ಪುಡಿ ರೂಪದಲ್ಲಿರುವ ಈ ಔಷಧಿಯನ್ನು ಡಿಆರ್‌ಡಿಒದ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆಯು ಹೈದರಾಬಾದ್‌ನ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರಿಸ್ ಕಂಪನಿಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.
2-ಡಿಜಿ ಯೊಂದಿಗೆ ಚಿಕಿತ್ಸೆ ಪಡೆದ ಹೆಚ್ಚಿನ ರೋಗಿಗಳು ಆರ್ ಟಿ-ಪಿಸಿಆರ್ ನಕಾರಾತ್ಮಕ ಪರಿವರ್ತನೆಯನ್ನು ತೋರಿಸಿದ್ದಾರೆ.
ಈ ಫಲಿತಾಂಶಗಳ ಆಧಾರದ ಮೇಲೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಸ್ (ಡಿಸಿಜಿಐ) ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಕೊವಿಡ್ -19 ರೋಗಿಗಳಲ್ಲಿ 2- ಡಿಜಿಯ 2 ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಮೇ 2020 ರಲ್ಲಿ ಅನುಮತಿಸಿತು. ಡಿಆರ್ಡಿಒ ಮತ್ತು ಅದರ ಉದ್ಯಮ ಪಾಲುದಾರ ಡಿಆರ್ಎಲ್ ಹೈದರಾಬಾದ್, ಕೊವಿಡ್ ರೋಗಿಗಳಲ್ಲಿ ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿತು. ಮೇ-ಅಕ್ಟೋಬರ್ 2020 ರಲ್ಲಿ ನಡೆಸಿದ ಹಂತ -2 ಪ್ರಯೋಗಗಳಲ್ಲಿ (ಡೋಸ್ ಶ್ರೇಣಿ ಸೇರಿದಂತೆ), ಕೊವಿಡ್-19 ರೋಗಿಗಳಲ್ಲಿ ಔಷಧಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಅವರ ಚೇತರಿಕೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದೆ.
ಹಂತ II ಅನ್ನು ಆರು ಆಸ್ಪತ್ರೆಗಳಲ್ಲಿ ನಡೆಸಲಾಯಿತು. ದೇಶದಾದ್ಯಂತ 11 ಆಸ್ಪತ್ರೆಗಳಲ್ಲಿ ಹಂತ IIb (ಡೋಸ್ ಶ್ರೇಣಿ) ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಯಿತು. ಹಂತ -2 ಪ್ರಯೋಗವನ್ನು 110 ರೋಗಿಗಳ ಮೇಲೆ ನಡೆಸಲಾಯಿತು.
ಇದನ್ನೂ ಓದಿ: Coronavirus Cases in India: 1.86 ಲಕ್ಷಕ್ಕೆ ಕುಸಿದ ಹೊಸ ಕೊವಿಡ್ ಪ್ರಕರಣ, 3660 ಮಂದಿ ಸಾವು
Published On - 3:54 pm, Fri, 28 May 21