ಜುಲೈ 21 ರಂದು ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಇ.ಡಿ. ಹೊಸ ಸಮನ್ಸ್
ಜುಲೈ 21 ರಂದು ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಇ.ಡಿ. ಹೊಸ ಸಮನ್ಸ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ.ವಿಚಾರಣೆಗೆ ಹಾಜರಾಗಲು ಸಮನ್ಸ್
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald) ಇ.ಡಿ.ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ (Sonia Gandhi) ಜಾರಿ ನಿರ್ದೇಶನಾಲಯ (ED) ಹೊಸ ಸಮನ್ಸ್ ಕಳುಹಿಸಿದೆ. 75ರ ಹರೆಯದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಈ ಹಿಂದೆ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಹಾಜರಾಗುವ ದಿನಾಂಕ ಬದಲಾಯಿಸಬೇಕು ಎಂದು ಮನವಿ ಮಾಡಿದ್ದರು. ಕೋವಿಡ್ ಮತ್ತು ಶ್ವಾಸಕೋಶ ಸೋಂಕಿನಿಂದಾಗಿ ಆಸ್ಪತ್ರೆದ ದಾಖಲಾಗಿ ಬಿಡುಗಡೆ ಆದ ನಂತರ ವೈದ್ಯರು ಕಟ್ಟುನಿಟ್ಟಾಗಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದರಿಂದ ಜೂನ್ 23ಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸೋನಿಯಾ ಹೇಳಿದ್ದರು. ಈ ಮನವಿಯನ್ನು ಸ್ವೀಕರಿಸಿದ ಇಡಿ, ಜುಲೈ ತಿಂಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಜೂನ್ 8ರಂದು ಹಾಜರಾಗುವಂತೆ ಸೋನಿಯಾ ಅವರಿಗೆ ಸಮನ್ಸ್ ಕಳುಹಿಸಿದಾಗ ಅವರಿಗೆ ಕೊವಿಡ್ ಸೋಂಕು ತಗುಲಿತ್ತು. ಜೂನ್ 12ರಂದು ಅವರನ್ನು ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದು ಜೂನ್ 20ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯವರನ್ನು ಇಡಿ 5 ದಿನಗಳಲ್ಲಿ 54 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿತ್ತು.
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿತ್ತು. ಇದು 1937ರಲ್ಲಿ 5,000 ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಅದರ ಷೇರುದಾರರಾಗಿ ಸ್ಥಾಪಿಸಿತು. ಈ ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ.
2010ರಲ್ಲಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 1,057 ಷೇರುದಾರರನ್ನು ಹೊಂದಿತ್ತು. ಇದು ತೀವ್ರ ನಷ್ಟವನ್ನು ಅನುಭವಿಸಿತು. ಹೀಗಾಗಿ, ಅದರ ಹಿಡುವಳಿಗಳನ್ನು 2011ರಲ್ಲಿ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL)ಗೆ ವರ್ಗಾಯಿಸಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅದರ ನಿರ್ದೇಶಕರ ಮಂಡಳಿಯಲ್ಲಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಾಗ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ‘ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
2012ರಲ್ಲಿ ಬಿಜೆಪಿ ನಾಯಕ ಮತ್ತು ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಕೆಲವು ಕಾಂಗ್ರೆಸ್ ನಾಯಕರು ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದ ಮುಂದೆ ದೂರು ಸಲ್ಲಿಸಿದರು. ವೈಐಎಲ್ ನ್ಯಾಷನಲ್ ಹೆರಾಲ್ಡ್ನ ಆಸ್ತಿಯನ್ನು ‘ದುರುದ್ದೇಶಪೂರಿತ’ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದರು.
Published On - 5:01 pm, Mon, 11 July 22