ಇ20 ಪೆಟ್ರೋಲ್‌ನಿಂದ ವಾಹನದ ಎಂಜಿನ್‌ಗೆ ಹಾನಿ, ಮೈಲೇಜ್ ಇಳಿಯುತ್ತೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ:ನಿತಿನ್ ಗಡ್ಕರಿ ಸ್ಪಷ್ಟನೆ
E20 ಪೆಟ್ರೋಲ್‌ನಿಂದ ವಾಹನದ ಎಂಜಿನ್‌ಗೆ ಹಾನಿ ಅಥವಾ ಮೈಲೇಜ್ ಇಳಿಕೆ ಕುರಿತ ಆತಂಕಗಳಿಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ವ್ಯಾಪಕ ಅಧ್ಯಯನಗಳು, ಕ್ಷೇತ್ರ ಪ್ರಯೋಗಗಳ ನಂತರವೇ E20 ಜಾರಿಗೆ ತರಲಾಗಿದೆ. ಹಳೆಯ BS-III ವಾಹನಗಳ ಕೆಲವು ಭಾಗಗಳಿಗೆ ಮಾತ್ರ ಬದಲಾವಣೆ ಬೇಕಾಗಬಹುದು. ಮೈಲೇಜ್ ಅನೇಕ ಅಂಶಗಳನ್ನು ಅವಲಂಬಿಸಿದೆ, ಇಂಧನ ಪ್ರಕಾರವನ್ನು ಮಾತ್ರವಲ್ಲ.

ನವದೆಹಲಿ, ಜುಲೈ 30: ಪೆಟ್ರೋಲ್ ಈಗ ಹೆಚ್ಚಿನ ಪ್ರಮಾಣದ ಎಥೆನಾಲ್(Ethanol) ಒಳಗೊಂಡಿರುವುದರಿಂದ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ ಅಥವಾ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಸಾರ್ವಜನಿಕರ ಆತಂಕಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಶೇ. 80ರಷ್ಟು ಪೆಟ್ರೋಲ್ ಹಾಗೂ ಶೇಕಡಾ 20 ರಷ್ಟು ಎಥೆನಾಲ್ ಒಳಗೊಂಡಿರುವ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ ಅಥವಾ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಸಾರ್ವಜನಿಕರ ಆತಂಕಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಇ20 ಇಂಧನವನ್ನು ದೇಶಾದ್ಯಂತ ಜಾರಿಗೆ ತರುವ ಮುನ್ನ ತಜ್ಞ ಸಂಸ್ಥೆಗಳೊಂದಿಗೆ ಸುದೀರ್ಘ ವೈಜ್ಞಾನಿಕ ಅಧ್ಯಯನ ಮತ್ತು ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಡೆಹ್ರಾಡೂನ್‌ನ ಐಐಪಿ, ಆಟೋಮೊಬೈಲ್ ತಯಾರಕರ ಸಂಘ (SIAM) ಮತ್ತು ಎಆರ್ಎಐ ಜಂಟಿಯಾಗಿ ನಡೆಸಿದ ಪರೀಕ್ಷೆಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಎಂಜಿನ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ಸಾಮಾನ್ಯ ಚಾಲನೆ, ಇಂಧನ ಸಾಗಣೆ ಅಥವಾ ಲೋಹದ ಭಾಗಗಳಿಗೆ ಇ20 ಇಂಧನದಿಂದ ಯಾವುದೇ ಹಾನಿಯಾಗುವುದಿಲ್ಲ. ಹಳೆಯ ಕಾರು ಮತ್ತು ಬೈಕ್‌ಗಳಲ್ಲಿಯೂ ಅಸಹಜ ಸವೆತ ಅಥವಾ ಕಾರ್ಯಕ್ಷಮತೆಯ ಕುಸಿತ ಕಂಡುಬಂದಿಲ್ಲ.
2005ರಿಂದ 2016 ರ ಅವಧಿಯಲ್ಲಿ ತಯಾರಾದ ಹಳೆಯ BS-III (ಭಾರತ್ ಸ್ಟೇಜ್-3) ವಾಹನಗಳಲ್ಲಿ ಮಾತ್ರ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು. ನಿಯಮಿತ ವಾಹನ ಸರ್ವೀಸಿಂಗ್ ವೇಳೆ ಇದನ್ನು ಸುಲಭವಾಗಿ ಸರಿಪಡಿಸಬಹುದು ಎಂದರು.
ಮತ್ತಷ್ಟು ಓದಿ: ಅಡುಗೆ ಇಂಧನವಾಗಿ ಎಥನಾಲ್; ಎಲ್ಪಿಜಿಗೆ ಮತ್ತೊಂದು ಪರ್ಯಾಯಕ್ಕೆ ಸರ್ಕಾರ ಯತ್ನ; ಸಕ್ಕರೆ ಬಗ್ಗೆ ಆವತ್ತು ಮೋದಿ ಹೇಳಿದ್ದರ ಅರ್ಥ ಇದಾ?
ಮೈಲೇಜ್ ಕುರಿತು ಸರ್ಕಾರದ ಸ್ಪಷ್ಟನೆ ಮೈಲೇಜ್ ಇಳಿಕೆಯ ದೂರುಗಳಿಗೆ ಉತ್ತರಿಸಿದ ಸಚಿವರು, ವಾಹನದ ಮೈಲೇಜ್ ಎಂಬುದು ಕೇವಲ ಇಂಧನದ ಪ್ರಕಾರವನ್ನು ಮಾತ್ರವೇ ಅವಲಂಬಿಸಿಲ್ಲ. ಚಾಲನಾ ಶೈಲಿ, ರಸ್ತೆಯ ಸ್ಥಿತಿ, ವಾಹನದ ನಿರ್ವಹಣೆ ಹಾಗೂ ಟೈರ್ ಒತ್ತಡ ಸೇರಿದಂತೆ ಹಲವಾರು ಅಂಶಗಳು ಮೈಲೇಜ್ ಅನ್ನು ನಿರ್ಧರಿಸುತ್ತವೆ ಎಂದು ತಿಳಿಸಿದ್ದಾರೆ. E20 ಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸದ ಹಳೆಯ ವಾಹನಗಳ ಇಂಧನ ವ್ಯವಸ್ಥೆಗೆ ಹಾನಿಯಾದರೆ ಯಾರು ಜವಾಬ್ದಾರರು ಮತ್ತು ರಿಪೇರಿ ವೆಚ್ಚದ ಹೊಣೆ ಯಾರದ್ದು ಎಂದು ವಿರೋಧ ಪಕ್ಷಗಳು ಹಾಗೂ ಗ್ರಾಹಕರ ಹಿತರಕ್ಷಣಾ ಗುಂಪುಗಳು ಪ್ರಶ್ನಿಸಿದ್ದವು.
ಇದಕ್ಕೆ ಉತ್ತರಿಸಿದ ಗಡ್ಕರಿ, ನೀತಿ ಆಯೋಗದ ‘2020-25ರ ಎಥೆನಾಲ್ ಮಾರ್ಗಸೂಚಿ’ಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. 2001 ರಲ್ಲಿ ಪೈಲಟ್ ಯೋಜನೆಯಾಗಿ ಆರಂಭವಾದ ಎಥೆನಾಲ್ ಮಿಶ್ರಣವು (E5, E10 ದಾಟಿ) ಸಮಗ್ರ ಪ್ರಯೋಗಗಳ ನಂತರವೇ 2026 ರಿಂದ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿದೆ ಎಂದು ವಿವರಿಸಿದ್ದಾರೆ.
E20 ಇಂಧನ ಎಂದರೇನು?: ಇದು ಶೇ.80ರಷ್ಟು ಸಾಮಾನ್ಯ ಪೆಟ್ರೋಲ್ ಹಾಗೂ ಶೇ.20ರಷ್ಟು ಕಬ್ಬು,ಧಾನ್ಯಗಳಿಂದ ತಯಾರಿಸಿದ ಜೈವಿಕ ಇಂಧನ ‘ಎಥೆನಾಲ್’ ಮಿಶ್ರಣವಾಗಿದೆ. E20 ಬಳಕೆಯಿಂದ ವಾಹನಗಳು ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಮಾಲಿನ್ಯ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಜೊತೆಗೆ, ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಿ, ದೇಶದ ಕಬ್ಬು ಬೆಳೆಗಾರ ರೈತರಿಗೆ ಹೆಚ್ಚುವರಿ ಆದಾಯ ಸಿಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:56 am, Thu, 30 July 26




